ಡಿಸಿ ಮನ್ನಾ ಭೂಮಿ ಹಂಚಿಕೆಯಲ್ಲಿ ನಿರ್ಲಕ್ಷ್ಯ ಆರೋಪ; ಡಿ. 20ರಂದು ಪ್ರತಿಭಟನೆಗೆ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಕರೆ

Update: 2021-12-03 12:22 GMT

ಮಂಗಳೂರು, ಡಿ.3: ಪರಿಶಿಷ್ಟರಿಗಾಗಿ ಸ್ವಾತಂತ್ರ ಪೂರ್ವ ಹಾಗೂ ನಂತರದಲ್ಲಿ ಮೀಸಲಾಗಿರಿಸಲಾಗಿರುವ ಡಿಸಿ ಮನ್ನಾ ಭೂಮಿ ಹಂಚಿಕೆಯಲ್ಲಿ ದ.ಕ. ಜಿಲ್ಲಾಡಳಿತ ನಿರ್ಲಕ್ಷ ವಹಿಸುತ್ತಿದೆ ಎಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿ ಆರೋಪಿಸಿದೆ. ಮಾತ್ರವಲ್ಲದೆ ಈ ಬಗ್ಗೆ ಡಿ. 20ರಂದು ಪ್ರತಿಭಟನೆ ನಡೆಸುವುದಾಗಿ ಹೇಳಿದೆ.

ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಸಮಿತಿಯ ಪ್ರಧಾನ ಸಂಚಾಲಕ ಎಂ. ದೇವದಾಸ್, ಸ್ವಾತಂತ್ರ ಪೂರ್ವದಲ್ಲಿ ಪರಿಶಿಷ್ಟರು ಅನುಭವಿಸು ತ್ತಿದ್ದ ಜಾತಿ ಅಸಮಾನತೆ, ಅಸ್ಪಶ್ಯತೆ, ದೌರ್ಜನ್ಯಗಳಿಂದ ಮುಕ್ತಿಯನ್ನು ಹೊಂದಿ ಸ್ವಾಭಿಮಾನದ ಜೀವನ ನಡೆಸುವ ಉದ್ದೇಶದಿಂದ ಪ್ರತಿ ಗ್ರಾಮದಲ್ಲಿ ಭೂಮಿ ಕಾಯ್ದಿರಿಸಿ ಭೂಮಿಯ ಹಕ್ಕು ನೀಡುವ ಐತಿಹಾಸಿಕ ಹೆಜ್ಜೆ ಇದಾಗಿದೆ ಎಂದರು.

ಸ್ವಾತಂತ್ರ ನಂತರದಲ್ಲಿಯೂ ಡಿಸಿ ಮನ್ನಾದಡಿ ಹಲವಾರು ಎಕರೆ ಜಾಗವನ್ನು ಪರಿಶಿಷ್ಟರಿಗೆ ಕೃಷಿ ಮತ್ತು ವಾಸ್ತವ್ಯದ ಉದ್ದೇಶಕ್ಕಾಗಿ ನೀಡಲಾಗಿದೆ. ಆದರೆ ಬಳಿಕ ಡಿಲ್ಲಾಡಳಿತವು ಲಭ್ಯವಿರುವ ಭೂಮಿಯನ್ನು ಹಂಚಿಕೆ ಮಾಡಲು ವಿಳಂಬ ಮಾಡಿದ್ದು, ಈ ಬಗ್ಗೆ ಸಂಘಟನೆಗಳಿಂದ ಹೋರಾಟ ನಡೆಯುತ್ತಲೇ ಬಂದಿದೆ. 2017ರಲ್ಲಿ ಸಂಘಟನೆಗಳ ಹೋರಾಟದ ಕಾರಣ ಪ್ರತಿ ತಾಲೂಕುಗಳಲ್ಲಿಯೂ ಭೂವಂಚಿತರಿಂದ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಆದರೆ ಈ ಮಧ್ಯೆ ಅಂದಿನ ಜಿಲ್ಲಾಧಿಕಾರಿ ಕೆ.ಜಿ. ಜಗದೀಶ್‌ರವರು ಭೂ ಹಂಚಿಕೆ ಬಗ್ಗೆ ಭೂ ಮಂಜೂರಾತಿ ಕಾಯ್ದೆ 1969ಕ್ಕೆ ತಿದ್ದುಪಡಿ ತರಲು ಕರಡು ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಿದ್ದರು. ಆದರೆ ಅದು ಇನ್ನೂ ಆಗಿಲ್ಲ. ಹಾಗಾಗಿ ಸರಕಾರ ತಕ್ಷಣ ಭೂ ಮಂಜೂರಾತಿ ಕಾಯ್ದೆಯ ನಿಯಮಾವಳಿಗೆ ಇದನ್ನು ಸೇರ್ಪಡೆ ಮಾಡಿ ಅರ್ಹ ದಲಿತರಿಗೆ ಭೂಮಿಯನ್ನು ಮಂಜೂರು ಮಾಡಬೇಕು ಎಂದು ಅವರು ಆಗ್ರಹಿಸಿದರು.

ಪ್ರಧಾನ ಕಾರ್ಯದರ್ಶಿ ಅಶೋಕ್ ಕೊಂಚಾಡಿ ಮಾತನಾಡಿ, ಸುಮಾರು 100 ವರ್ಷಗಳ ಹಿಂದೆ 8450 ಎಕರೆಯಷ್ಟು ಭೂಮಿಯನ್ನು ಡಿಸಿ ಮನ್ನಾ ಭೂಮಿಯಾಗಿ ಮೀಸಲಿಡಲಾಗಿತ್ತು. ಆ ಬಲಿಕ ಸುಮಾರು 2000 ಎಕರೆಗೂ ಅಧಿಕ ಭೂಮಿ ಒತ್ತುವರಿಯಾಗಿದೆ. ಇದೀಗ ಅಕ್ರಮ ಕೂಟಗಳು ಸೇರಿಕೊಂಡು ಡಿಸಿ ಮನ್ನಾ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದು, ಜಿಲ್ಲಾಡಳಿತವೂ ಇದಕ್ಕೆ ಸಹಕಾರ ನೀಡುತ್ತಿದೆ. 2017ರಲ್ಲಿ ಕಾಗೋಡು ತಿಮ್ಮಪ್ಪರವರು ಸಭೆ ನಡೆಸಿ ಒತ್ತುವರಿ ಬಗ್ಗೆ ಕ್ರಿಯಾ ಸಮಿತಿ ರಚನೆ ಮಾಡಿ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದರು. ಆದರೆ ಈ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಕೇಳಿದರೆ ಯಾವುದೇ ಮಾಹಿತಿ ಇಲ್ಲ ಎಂದು ಅವರು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಪ್ರಧಾನ ಸಂಚಾಲಕ ರಮೇಶ್ ಕೋಟ್ಯಾನ್, ಸಂಚಾಲಕರಾದ ರಘು ಕೆ. ಎಕ್ಕಾರು, ಚಂದ್ರಕುಮಾರ್, ಸೇಸಪ್ಪ ಬೆದ್ರಕಾಡು, ನಾಗೇಶ್ ಬಲ್ಮಠ, ಪ್ರೇಮ್ ಬಳ್ಳಾಲ್‌ಬಾಗ್, ಆನಂದ ಬೆಳ್ಳಾರೆ, ರೇಣುಕಾ ಮೊದಲಾದವರು ಉಪಸ್ಥಿತರಿದ್ದರು.

ಸ್ವಾತಂತ್ರ ಪೂರ್ವದಲ್ಲಿ ಜಮೀನು ಇಲ್ಲದೆ ನಿಮ್ನ ವರ್ಗಗಳಾಗಿದ್ದ ದಲಿತರಿಗಾಗಿಯೇ ಡಿಸಿ ಮನ್ನಾ ಭೂಮಿಯನ್ನು ಮೀಸಲಿಟ್ಟು ಮಂಜೂರು ಮಾಡಲಾಗಿತ್ತು. ಸ್ವಾತಂತ್ರ ಬಳಿಕವೂ ಅದೇ ಪ್ರಕ್ರಿಯೆ ಮುಂದುವರಿದು ದಲಿತರಿಗಾಗಿಯೇ ಈ ಭೂಮಿಯನ್ನು ಹಂಚಿಕೆ ಮಾಡಲಾಗಿದೆ. ಆದರೆ ಇದೀಗ ಅಕ್ರಮಕೂಟಗಳು ಸೇರಿಕೊಂಡು ನಿಮ್ನ ವರ್ಗಗಳ ಪರಿಭಾಷೆಯನ್ನು ಬದಲಾಯಿಸುವ ಪ್ರಯತ್ನವೂ ತೆರೆಮರೆಯಲ್ಲಿ ನಡೆದಿದೆ. ಆದರೆ ಡಿಸಿ ಮನ್ನಾ ಭೂಮಿ ದಲಿತರಿಗೆ ನೀಡುವ ಭಿಕ್ಷೆ ಅಲ್ಲ. ಅದು ನಮ್ಮ ಹಕ್ಕು ಅದಕ್ಕಾಗಿ ನಾವು ಡಿ. 20ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಿದ್ದೇವೆ. ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರ ಭೂಮಿ ಹಂಚಿಕೆಗೆ ಕ್ರಮ ಕೈಗೊಳ್ಳದಿದ್ದರೆ ನಿರಂತರ ಹೋರಾಟ ನಡೆಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News