ಉತ್ತರ ಪ್ರದೇಶ: ರಸ್ತೆ ಉದ್ಘಾಟನೆಗೆ ತೆಂಗಿನಕಾಯಿ ಒಡೆಯುವಾಗ ಬಿರುಕುಬಿಟ್ಟ ಹೊಚ್ಚ ಹೊಸ ರಸ್ತೆ!

Update: 2021-12-03 17:46 GMT
Photo: ndtv.com

ಲಕ್ನೋ: ಉತ್ತರ ಪ್ರದೇಶದ ಬಿಜ್ನೋರ್ ನಲ್ಲಿ ರೂ. 1.16 ಕೋಟಿ ವೆಚ್ಚದಲ್ಲಿ ಮರುನಿರ್ಮಾಣಗೊಂಡ 7 ಕಿ.ಮೀ. ರಸ್ತೆಯನ್ನು ಉದ್ಘಾಟಿಸಲು ಬಿಜೆಪಿ ಶಾಸಕಿಯೊಬ್ಬರನ್ನು ಆಹ್ವಾನಿಸಲಾಗಿತ್ತು.  ಉದ್ಘಾಟನೆಯಲ್ಲಿ ತೆಂಗಿನ ಕಾಯಿ ಒಡೆಯುವ ಆಚರಣೆಯ ವೇಳೆ ತೆಂಗಿನ ಕಾಯಿ ಬದಲು  ಹೊಚ್ಚ ಹೊಸ ರಸ್ತೆಯೇ ಬಿರುಕುಬಿಟ್ಟ ಕಾರಣ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರಕಾರ ಮುಜುಗರ ಅನುಭವಿಸಿದೆ  ಎಂದು ndtv.com ವರದಿ ಮಾಡಿದೆ.

ಈ ಘಟನೆಯಿಂದ ಕೋಪಗೊಂಡ ಬಿಜ್ನೋರ್ ಸದರ್ ಕ್ಷೇತ್ರದ ಶಾಸಕಿಯಾದ ಸುಚಿ ಮೌಸಮ್ ಚೌಧರಿ ಅವರು ಮೂರು ಗಂಟೆಗಳ ಕಾಲ ಸ್ಥಳದಲ್ಲಿಯೇ ಕಾದು ಕುಳಿತರು ಹಾಗೂ ಅಧಿಕಾರಿಗಳ ತಂಡವು ಆಗಮಿಸಿ ತನಿಖೆಗಾಗಿ ರಸ್ತೆಯ ಮಾದರಿಗಳನ್ನು ತೆಗೆದುಕೊಂಡು ಹೋಯಿತು.

ಶಾಸಕಿಯು ಇದಕ್ಕೆ ಹೊಣೆಯಾದವರ ವಿರುದ್ಧ ಕಠಿಣ ಕ್ರಮವನ್ನು ಭರವಸೆ ನೀಡಿದರು ಹಾಗೂ ಡಾಂಬರ್ ಮಾದರಿಯನ್ನು ಸಂಗ್ರಹಿಸಲು ರಸ್ತೆಯನ್ನು ಅಗೆಯಲು ಸಹಾಯ ಮಾಡಿದರು.

“ನೀರಾವರಿ ಇಲಾಖೆ ರೂ.1.16 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಿಸಿತ್ತು. ಸುಮಾರು 7.5 ಕಿ.ಮೀ. ರಸ್ತೆ ಉದ್ದದ ಉದ್ಘಾಟನೆ ಮಾಡುವಂತೆ ನನಗೆ ಹೇಳಿದ್ದರು. ಅಲ್ಲಿಗೆ ಹೋಗಿ  ತೆಂಗಿನಕಾಯಿ ಒಡೆಯಲು ಯತ್ನಿಸಿದಾಗ ತೆಂಗಿನಕಾಯಿ ಒಡೆಯಲಿಲ್ಲ. ರಸ್ತೆಯೇ ಬಿರುಕುಬಿಟ್ಟಿದೆ’’ ಎಂದು ಸುದ್ದಿಗಾರರಿಗೆ ಶಾಸಕಿ ತಿಳಿಸಿದರು.

ತಾನು ದಕ್ಷ ಹಾಗೂ  ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತಿರುವುದಾಗಿ ಮುಖ್ಯಮಂತ್ರಿ ಆದಿತ್ಯನಾಥ್ ಬಿಂಬಿಸುತ್ತಿರುವಾಗ  ರಾಜ್ಯ ಚುನಾವಣೆಗೆ ಮೂರು ತಿಂಗಳ ಮುಂಚೆಯೇ ನಡೆದಿರುವ ಈ ಘಟನೆಯು ಬಿಜೆಪಿ ಸರಕಾರಕ್ಕೆ ದೊಡ್ಡ ಮುಜುಗರವನ್ನುಂಟು ಮಾಡಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News