ಪಾಕ್: ಧರ್ಮನಿಂದನೆಯ ಆರೋಪ; ಉದ್ರಿಕ್ತ ಗುಂಪಿನಿಂದ ಶ್ರೀಲಂಕಾ ಮೂಲದ ಮ್ಯಾನೇಜರ್‌ನ ಥಳಿಸಿ ಹತ್ಯೆ
ಲಾಹೋರ್,ಡಿ.3: ಧಾರ್ಮಿಕ ನಿಂದನೆ ಮಾಡಿದ್ದರೆಂಬ ಕಾರಣಕ್ಕಾಗಿ ಪಾಕಿಸ್ತಾನದ ಸಿಯಾಲ್‌ಕೋಟ್ ಜಿಲ್ಲೆಯಲ್ಲಿ ಕಾರ್ಖಾನೆಯೊಂದರಲ್ಲಿ ಶ್ರೀಲಂಕಾ ಮೂಲದ ಮ್ಯಾನೇಜರ್ ಒಬ್ಬರನ್ನು ಕಾರ್ಮಿಕರು ಥಳಿಸಿ ಹತ್ಯೆಗೈದ ಬಳಿಕ ಮೃತದೇಹವನ್ನು ದಹಿಸಿದ ಘಟನೆ ಶುಕ್ರವಾರ ನಡೆದಿದೆ.
ಸಿಯಾಲ್ ಕೋಟ್ ನಗರದ ವಝರ್ ಬಾದ್ ರಸ್ತೆಯಲ್ಲಿರುವ ವಿವಿಧ ಖಾಸಗಿ ಕಾರ್ಖಾನೆಗಳ ಕೆಲಸಗಾರರು ಕಾರ್ಖಾನೆಯೊಂದರ ರಫ್ತು ಮ್ಯಾನೇಜರ್ ಆಗಿದ್ದ ಶ್ರೀಲಂಕಾ ಪ್ರಜೆ ಪ್ರಿಯಾಂತಾ ಕುಮಾರ ತನ್ನ ಕಚೇರಿಗೆ ತಾಗಿಕೊಂಡಿದ್ದ ಗೋಡೆಗೆ ಅಂಟಿಸಲಾಗಿದ್ದ ಪವಿತ್ರ ಖುರಾನ್‌ನ ಸೂಕ್ತಿಗಳನ್ನು ಮುದ್ರಿಸಲಾಗಿದ್ದ ತೆಹ್ರೆಕೆ ಲಬ್ಬೈಕ್ ಪಾಕಿಸ್ತಾನ್ (ಟಿಎಲ್‌ಪಿ) ಸಂಘಟನೆಯ ಪೋಸ್ಟರ್‌ನ್ನು ಹರಿದು, ಅದನ್ನು ಕಸದಬುಟ್ಟಿಗೆ ಎಸೆದಿದ್ದರು ಎನ್ನಲಾಗಿದೆ. ಈ ಸುದ್ದಿಯು ಕಾಡ್ಗಿಚ್ಚಿನಂತೆ ಹರಡಿತು. ಕೆಲವೇ ನಿಮಿಷಗಳಲ್ಲಿ ಆಸುಪಾಸಿನ ಕಾರ್ಖಾನೆಗಳ ನೂರಾರು ಕಾರ್ಮಿಕರು ಕುಮಾರ ಅವರ ಮೇಲೆ ದಾಳಿ ನಡೆಸಿ, ಅವರನ್ನು ಥಳಿಸಿ ಹತ್ಯೆಗೈದರು ಹಾಗೂ ಆನಂತರ ಶವವನ್ನು ಸುಟ್ಟುಹಾಕಿದರು ಎಂದು ಆರೋಪಿಸಲಾಗಿದೆ.
ಘಟನೆಯ ಬಳಿಕ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಪರಿಸ್ಥಿತಿಯನ್ನು ನಿಯಂತ್ರಿಸಲಾಗಿ ಎಂದು ವರದಯಾಗಿದೆ
ಶ್ರೀಲಂಕಾ ಪ್ರಜೆಯ ಹತ್ಯೆಯನ್ನು ಪಾಕ್ ಪ್ರಧಾನಿ ಇಮ್ರಾನ್ ಖಾನ್ ತ್ರೀವಾಗಿ ಖಂಡಿಸಿದ್ದು, ಇದೊಂದು ಭಯಾನಕವಾದ ದಾಳಿಯೆಂದು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸುವ ಕೆಲಸ ನಡೆಯುತ್ತಿರುವುದಾಗಿ ಅವರು ಹೇಳಿದ್ದಾರೆ.