ಭಾರತದ ಆಕ್ಷೇಪಕ್ಕೆ ಮಣಿದ ಬೀಜಿಂಗ್?: ಶ್ರೀಲಂಕಾ ದ್ವೀಪಗಳಲ್ಲಿ ಇಂಧನ ಘಟಕ ಸ್ಥಾಪಿಸುವ ಯೋಜನೆ ಕೈಬಿಟ್ಟ ಚೀನಾ

Update: 2021-12-03 17:13 GMT

ಕೊಲಂಬೊ,ಡಿ.3: ಶ್ರೀಲಂಕಾದ ಮೂರು ದ್ವೀಪಗಳಲ್ಲಿ ಅತ್ಯಾಧುನಿಕ ಇಂಧನ ಸ್ಥಾವರಗಳನ್ನು ಸ್ಥಾಪಿಸುವ ತನ್ನ ಯೋಜನೆಯನ್ನು ಚೀನಾವು ಅಮಾನತಿನಲ್ಲಿರಿಸಿದೆ. ತೃತೀಯ ಪಕ್ಷವೊಂದರಿಂದ ಈ ಸ್ಥಾವರಗಳಿಗೆ ಭದ್ರತಾ ಆತಂಕವಿರುವದರಿಂದ ಯೋಜನೆಯನ್ನು ತಡೆಹಿಡಿದಿರುವುದಾಗಿ ಅದು ಭಾರತವನ್ನು ಹೆಸರಿಸದೆ ಹೇಳಿದೆ. ಶ್ರೀಲಂಕಾದ ದ್ವೀಪಗಳಲ್ಲಿ ಇಂಧನ ಸ್ಥಾವರಗಳನ್ನು ಸ್ಥಾಪಿಸಲು ಚೀನಾ ಯತ್ನಿಸುತ್ತಿರುವ ವಿರುದ್ಧ ಭಾರತವು ಕಳವಳ ವ್ಯಕ್ತಪಡಿಸಿರುವುದು ವರದಿಯಾದ ಬೆನ್ನಲ್ಲೇ ಚೀನಾ ಈ ನಿಧಾರನ್ನು ಪ್ರಕಟಿಸಿದೆ.

ಈ ವರ್ಷದ ಜನವರಿಯಲ್ಲಿ ಚೀನಿ ಸಂಸ್ಥೆಯಾದ ಸಿನೊ ಸೋರ್ ಹೈಬ್ರಿಡ್ ಟೆಕ್ನಾಲಜಿ ಸಂಸ್ಥೆಗೆ ಶ್ರೀಲಂಕಾದ ಜಾಫ್ನಾ ಸಮೀಪದ ಸಮುದ್ರ ಪ್ರದೇಶದಲ್ಲಿರುವ ಡೆಲ್‌ಫ್ಟ್,, ನಾಗದ್ವೀಪ ಹಾಗೂ ಅನಾಲ್ತೀವು ದ್ವೀಪಗಳಲ್ಲಿ ನವೀಕರಿಸಬಹುದಾದ ಹೈಬ್ರಿಡ್ ಇಂಧನ ಘಟಕಗಳ ಸ್ಥಾಪನೆಯ ಗುತ್ತಿಗೆಯನ್ನು ನೀಡಲಾಗಿತ್ತು. ಈ ಮೂರು ದ್ವೀಪಗಳು ತಮಿಳುನಾಡಿಗೆ ತೀರಾ ಸಮೀಪದಲ್ಲಿರುವುದು ಭಾರತದ ಆತಂಕಕ್ಕೆ ಕಾರಣವಾಗಿದೆ.

ಚೀನಾ ರಾಯಭಾರಿ ಕಚೇರಿಯು ಬುಧವಾರ ಪ್ರಕಟಿಸಿದ ಟ್ವೀಟ್‌ನಲ್ಲಿ ‘‘ ತೃತೀಯ ಪಕ್ಷವೊಂದರಿಂದ ಭದ್ರತಾ ಆತಂಕದ ಹಿನ್ನೆಲೆಯಲ್ಲಿ ಸಿನೋ ಸೋರ್ ಹೈಬ್ರಿಡ್ ಟೆಕ್ನಾಲಜಿಯು ಶ್ರೀಲಂಕಾದ ಮೂರು ಉತ್ತರ ಭಾಗದ ದ್ವೀಪಗಳಲ್ಲಿ ಹೈಬ್ರಿಡ್ ಇಂಧನ ವ್ಯವಸ್ಥೆಯನ್ನು ನಿರ್ಮಿಸುವುದನ್ನು ಅಮಾನತಿನಲ್ಲಿರಿಸಿದೆ. ಅದರ ಬದಲಿಗೆ ಬೀಜಿಂಗ್ ನವೆಂಬರ್ 29ರಂದು ಮಾಲ್ದೀವ್ಸ್‌ನ 12 ದ್ವೀಪಗಳಲ್ಲಿ ಸೌರ ವಿದ್ಯುತ್ ಘಟಕಗಳನ್ನು ಸ್ಥಾಪಿಸಲು ನಿರ್ಧರಿಸಿದೆ ಎಂದು ಟ್ವಿಟ್ಟರ್‌ನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News