ದ.ಆಫ್ರಿಕ ರೂಪಾಂತರಿ ಹಾವಳಿಯ ಬಳಿಕ ಆಸ್ಪತ್ರೆಗೆ ದಾಖಲಾಗುವ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳ

Update: 2021-12-03 17:25 GMT
ಸಾಂದರ್ಭಿಕ ಚಿತ್ರ:PTI

ಜೋಹಾನ್ಸ್‌ಬರ್ಗ್,ಡಿ.3: ಒಮಿಕ್ರಾನ್ ವೈರಸ್ ದೇಶಾದ್ಯಂತ ಹಾವಳಿಯೆಬ್ಬಿಸಿದ ಬಳಿಕ ಆಸ್ಪತ್ರೆಗೆ ದಾಖಲಾಗುವ ಮಕ್ಕಳ ಸಂಖ್ಯೆಯಲ್ಲಿ ಹಠಾತ್ ಏರಿಕೆಯಾಗಿದೆ ಎಂದು ದಕ್ಷಿಣ ಆಫ್ರಿಕದ ವೈದ್ಯರುಗಳು ತಿಳಿಸಿದ್ದಾರೆ. ಆದರೆ ನಿರ್ದಿಷ್ಟವಾಗಿ ಅವರು ಸೋಂಕಿಗೆ ತುತ್ತಾಗುತ್ತಿದ್ದಾರೆಂಬ ತೀರ್ಮಾನಕ್ಕೆ ಈಗಲು ಬರಲು ಸಾಧ್ಯವಿಲ್ಲವೆಂದವರು ಹೇಳಿದ್ದಾರೆ.

ಐದು ವರ್ಷಕ್ಕಿಂತ ಕೆಳವಯಸ್ಸಿನ ಮಕ್ಕಳು ಆಸ್ಪತ್ರೆಗೆ ದಾಖಲಾಗುತ್ತಿರುವುದು ಹೆಚ್ಚುತ್ತಿರುವುದು ಕಂಡುಬಂದಿದೆಯೆಂದು ದಕ್ಷಿಣ ಆಫ್ರಿಕದ ವಿಜ್ಞಾನಿಗಳು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. 10ರಿಂದ 14 ವರ್ಷದೊಳಗಿನ ಮಕ್ಕಳಲ್ಲಿಯೂ ಪಾಸಿಟಿವಿಟಿ ದರ ಹೆಚ್ಚಾಗಿರುವುದು ಕಂಡುಂದಿದೆ ಎಂದವರು ತಿಳಿಸಿದ್ದಾರೆ.

ಒಮೈಕ್ರಾನ್ ವೈರಸ್ ಪತ್ತೆಯಾದ ಬಳಿಕ ದೇಶದಲ್ಲಿ ವಿಶೇಷವಾಗಿ ಐದು ವರ್ಷೆಕ್ಕಿಂತ ಕೆಳಗಿನ ವಯಸ್ಸಿನವರು ಸೇರಿದಂತೆ ಆಸ್ಪತ್ರೆಗೆ ದಾಖಲಾಗುವ ಎಲ್ಲಾ ವಯೋಮಾನದವರ ಸಂಖ್ಯೆಯಲ್ಲೂ ಏರಿಕೆಯಾಗಿರುವುದಾಗಿ ದಕ್ಷಿಣ ಆಫ್ರಿಕದ ಸೋಂಕು ರೋಗಗಳ ರಾಷ್ಟ್ರೀಯ ಸಂಸ್ಥೆಯ ವಸ್ಸಿಲ್ಲಾ ಜಾಸಟ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕದಲ್ಲಿ ಆಸ್ಪತ್ರೆಗೆ ದಾಖಲಾಗುವ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಾಗಲು ಹಲವಾರು ಸಂಬಾವ್ಯ ಕಾರಣಗಳಿರುವುದಾಗಿ ವಿಜ್ಞಾನಿಗಳು ಹೇಳುತ್ತಾರೆ. ಮೊದಲನೆಯದಾಗಿ ದಕ್ಷಿಣ ಆಫ್ರಿಕದಲ್ಲಿ 12 ವರ್ಷಕ್ಕಿಂತ ಕೆಳವಯಸ್ಸಿನವರು ಲಸಿಕೆಯನ್ನು ಪಡೆಯಲು ಅರ್ಹರಾಗಿಲ್ಲ. ಅಲ್ಲದೆ ಸೋಂಕು ತಗಲಿದ ಮಕ್ಕಳ ಬಹುತೇಕ ಪಾಲಕರು ಕೂಡಾ ಲಸಿಕೆಯನ್ನು ಪಡೆದಿರಲಿಲ್ಲವೆಂದು ಅವರು ತಿಳಿಸಿದ್ದಾರೆ.

ಕೋವಿಡ್ 19 ನ ಇತರ ರೂಪಾಂತರಿಗಳಾದ ಡೆಲ್ಟಾ ಅಥವಾ ಬೀಟಾ ಪ್ರಭೇದಗಳಿಗೆ ಹೋಲಿಸಿದರ ಒಮೈಕ್ರಾನ್‌ನ ವೈರಸ್‌ನ ಹರಡುವಿಕೆ ಮೂರು ಪಟ್ಟು ಅಧಿಕವಾಗಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News