ಮಹಿಳೆಯರ ಹಕ್ಕುಗಳ ರಕ್ಷಣೆಗೆ ಕ್ರಮ ಕೈಗೊಳ್ಳಿ ಅಫ್ಘಾನ್ ಸಚಿವಾಲಯಗಳಿಗೆ ತಾಲಿಬಾನ್ ನಾಯಕತ್ವ ಆದೇಶ

Update: 2021-12-03 18:37 GMT

ಕಾಬೂಲ್,ಡಿ.3: ಮಹಿಳೆಯರ ಹಕ್ಕುಗಳನ್ನು ರಕ್ಷಿಸಲು ಗಂಭೀರವಾದ ಕ್ರಮವನ್ನು ಕೈಗೊಳ್ಳಬೇಕೆಂದು ತಾಲಿಬಾನ್ ತನ್ನ ಸರ್ವೋಚ್ಚ ನಾಯಕನ ಹೆಸರಿನಲ್ಲಿ ಅಫ್ಘಾನಿಸ್ತಾನದ ಸಚಿವಾಲಯಗಳಿಗೆ ಶುಕ್ರವಾರ ಅಧ್ಯಾದೇಶವೊಂದನ್ನು ಜಾರಿಗೊಳಿಸಿದೆ. ಆದರೆ ಹೆಣ್ಣು ಮಕ್ಕಳಿಗೆ ಶಾಲೆಗಳಿಗೆ ತೆರಳಲು ಅನುಮತಿ ನೀಡುವ ಬಗ್ಗೆ  ಈ ಅಧ್ಯಾದೇಶದಲ್ಲಿ ಯಾವುದೇ ಪ್ರಸ್ತಾವವನ್ನು ಮಾಡಿಲ್ಲ ಎಂದು ವರದಿಯಗಿದೆ.

ಈ ವರ್ಷದ ಅಗಸ್ಟ್ ತಿಂಗಳ ಮಧ್ಯಂತರದಲ್ಲಿ ಕಾಬೂಲ್ ಮೇಲೆ ಅತಿಕ್ರಮಣ ನಡೆಸಿದ ತಾಲಿಬಾನ್ ಬಂಡುಕೋರರು ಅಫ್ಘಾನ್‌ನ ಆಡಳಿತವನ್ನು ತಮ್ಮ ವಶಕ್ಕೆತೆಗೆದುಕೊಂಡಿದ್ದರು. ಪದಚ್ಯುತ ಸರಕಾರದ ವಶಲ್ಲಿದ್ದ ಕೋಟ್ಯಂತರ ಡಾಲರ್ ಸಂಪತ್ತನ್ನು ಅಮೆರಿಕವು ಮುಟ್ಟುಗೋಲು ಹಾಕಿರುವುದು ತಾಲಿಬಾನ್ ಆಡಳಿತಕ್ಕೆ ಆರ್ಥಿಕ ಬಿಕ್ಕಟ್ಟು ಉಲ್ಬಣಿಸುವಂತೆ ಮಾಡಿದೆ . ಹೀಗಾಗಿ ಈ ಸಂಪತ್ತನ್ನು ಹಾಗೂ ಅಮೆರಿಕ ಸೇನೆಯ ಅಂತಿಮ ಹಂತದ ಸೇನಾ ವಾಪಸತಿಯ ಸಂದರ್ಭದಲ್ಲಿ ಅಮಾನತಿನಲ್ಲಿರಿಸಲಾದ ಅಂತರಾಷ್ಟ್ರೀಯ ನೆರವನ್ನು ಪಡೆಯಲು ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತವು ಶತಯಗತಾಯ ಯತ್ನಿಸುತ್ತಿದೆ.

 "ಮಹಿಳೆಯರ ಹಕ್ಕುಗಳನ್ನು ಜಾರಿಗೊಳಿಸುವ ಬಗ್ಗೆ ಇಸ್ಲಾಮಿಕ್ ಎಮಿರೇಟ್‌ನ ನಾಯಕತ್ವವು ಸಂಬಂಧಪಟ್ಟ ಎಲ್ಲಾ ಸಂಘಟನೆಗಳಿಗೆ ನಿರ್ದೇಶನ ನೀಡುತ್ತದೆ" ಎಂದು ಅಧ್ಯಾದೇಶವು ತಾಲಿಬಾನ್‌ನ ಸರ್ವೋಚ್ಚ ನಾಯಕ ಹಿಬಾತುಲ್ಲಾ ಅಖುಂದ್‌ಝಾದಾ ಅವರ ಹೇಳಿಕೆಯನ್ನು ಅಧ್ಯಾದೇಶವು ಉಲ್ಲೇಖಿಸಿದೆ.

ಮಹಿಳೆಯರು ಹಾಗೂ ವಿಧವೆಯರ ಹಕ್ಕುಗಳನ್ನು ಕೇಂದ್ರೀಕರಿಸಿ ಈ ಆಧ್ಯಾದೇಶವನ್ನು ಜಾರಿಗೊಳಿಸಲಾಗಿದೆ. ‘‘ಯಾರು ಕೂಡಾ ಮಹಿಳೆಯನ್ನು ಬಲವಂತ,ಬೆದರಿಕೆ ಹಾಗೂ ಒತ್ತಡವನ್ನು ಹೇರುವ ಮೂಲಕ ವಿವಾಹವಾಗುವಂತಿಲ್ಲ ಎಂದು ಆದೇಶವು ತಿಳಿಸಿದೆ. ತನ್ನ ಪತಿಯ ಪಿತ್ರಾರ್ಜಿತ ಆಸ್ತಿಯಲ್ಲಿ ಅನಿಗದಿತವಾದ ಪಾಲನ್ನು ಪಡೆಯಲು ಅರ್ಹಳಾಗಿದ್ದಾಳೆ ಎಂದು ಆದೇಶವು ತಿಳಿಸಿದೆ.

ಈಗ ನಡೆಯುತ್ತಿರುವ ಮಹಿಳೆಯರ ಹಕ್ಕುಗಳ ದಮನವನ್ನು ತಡೆಯಲು ಮಹಿಳಾ ಹಕ್ಕುಗಳ ಕುರಿತ ವಿಷಯಗಳನ್ನು ಪ್ರಕಟಿಸುವಂತೆಯೂ ಅದು ಸಂಸ್ಕೃತಿ ಹಾಗೂ ಮಾಹಿತಿ ಸಚಿವಾಲಯಕ್ಕೆ ತಿಳಿಸಿದೆ. ಅಫ್ಘಾನಿಸ್ತಾನಕ್ಕೆ ನೀಡಲಾಗುತ್ತಿದ್ದ ನೆರವನ್ನು ಮರುಸ್ಥಾಪಿಸಬೇಕಾದರೆ ಮಹಿಳೆಯರ ಹಕ್ಕುಗಳನ್ನು ಗೌರವಿಸುವಂತೆ ಅಂತಾರಾಷ್ಟ್ರೀಯ ನೆರವುಸಂಸ್ಥೆಗಳು ತಾಲಿಬಾನ್ ಆಡಳಿತಕ್ಕೆ ಶರತ್ತು ವಿಧಿಸಿದೆ.

 ಆದಾಗ್ಯೂ ಈ ಅದ್ಯಾದೇಶವು ಅಫ್ಘಾನಿಸ್ತಾನದಲ್ಲಿ ಲಕ್ಷಾಂತರ ಹೆಣ್ಣುಮಕ್ಕಳಿಗೆ ಪ್ರೌಢ ಶಿಕ್ಷಣವನ್ನು ನಿರ್ಬಂಧಿಸಿರುವ ಬಗ್ಗೆ ಯಾವುದೇ ಉಲ್ಲೇಖವನ್ನು ಮಾಡಿಲ್ಲ ಅಲ್ಲದೆ ಸಾರ್ವಜನಿಕ ವಲಯದ ಉದ್ಯೋಗಗಳಿಗೆ ಮಹಿಳೆಯರು ಮರಳುವುದನ್ನು ನಿಷೇಧಿಸಿತ್ತು.

1996ರಿಂದ 2001ರ ಅವಧಿಯಲ್ಲಿ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಆಳ್ವಿಕೆ ನಡೆಸಿದಾಗಲೂ ಮಹಿಳೆಯರ ಹಕ್ಕುಗಳನ್ನು ತೀವ್ರವಾಗಿ ಮೊಟಕುಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News