ಬಿಜೆಪಿ ಸರಕಾರ ಸಂವಿಧಾನ ಪರವಾಗಿ ಆಡಳಿತ ನಡೆಸಲಿ : ಅಯ್ಯೂಬ್ ಆಗ್ನಾಡಿ

Update: 2021-12-04 02:49 GMT

ಉಳ್ಳಾಲ : ಸರಕಾರ ಕಾನೂನುಗಳನ್ನು ಸಂವಿಧಾನ ಪರವಾಗಿ ಮಾಡಬೇಕೇ ಹೊರತು ವಿಷ ಕಾರುವ ರೀತಿಯಲ್ಲಿ ಅಲ್ಲ. ವಿಷಕಾರುವ ರೀತಿಯಲ್ಲಿ ಮಾಡಲು ನಾವು ಬಿಡುವುದಿಲ್ಲ. ಬಿಜೆಪಿ ಸರಕಾರ ಸಂವಿಧಾನ ಪರವಾಗಿ ಆಡಳಿತ ನಡೆಸಲಿ. ಸಂಘ ಪರಿವಾರದ ಅಟ್ಟಹಾಸದಿಂದ ಜನ ಬೇಸತ್ತು ಹೋಗಿದ್ದಾರೆ ಎಂದು ಪಿಎಫ್‌ಐ ರಾಜ್ಯ ಉಪಾಧ್ಯಕ್ಷ ಅಯ್ಯೂಬ್ ಆಗ್ನಾಡಿ ಹೇಳಿದ್ದಾರೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಕರ್ನಾಟಕ ರಾಜ್ಯ ಸಮಿತಿಯ ವತಿಯಿಂದ ಹಮ್ಮಿಕೊಂಡಿರುವ ‘ಫ್ಯಾಶಿಸ್ಟ್‌ರಿಂದ ಕರ್ನಾಟಕ ರಕ್ಷಿಸೋಣ’ ಎಂಬ ಅಭಿಯಾನದ ಪ್ರಯುಕ್ತ ಕಲ್ಲಾಪು ಯುನಿಟಿ ಹಾಲ್ ಮೈದಾನದಲ್ಲಿ ಶುಕ್ರವಾರ ನಡೆದ ಸಾರ್ವಜನಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಫ್ಯಾಶಿಸಂ ಮಟ್ಟ ಹಾಕಲು ಬಹಳಷ್ಟು ದಾರಿಗಳಿವೆ. ಎನ್‌ಆರ್‌ಸಿ, ಸಿಎಎ ಫೈಲ್ ಅಮಿತ್ ಷಾರ ಕಚೇರಿಯಲ್ಲಿ ಬಾಕಿ ಆಗುವಂತೆ ಮಾಡಿದ್ದೇವೆ. ಬ್ರಿಟಿಷರ ವಿರುದ್ಧ ಜಾತಿ, ಧರ್ಮ ಬಿಟ್ಟು ಒಗ್ಗಟ್ಟಿನಿಂದ ಹೋರಾಟ ಮಾಡಿದ ಕಾರಣ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಫ್ಯಾಶಿಸಂ ಮಟ್ಟ ಹಾಕುವುದು ಪಿಎಫ್‌ಐ ಸಂಘಟನೆಗೆ ಮಾತ್ರ ಇರುವ ಕೆಲಸವಲ್ಲ. ಎಲ್ಲಾ ಜಾತಿ ಧರ್ಮದವರು ಒಗ್ಗಟ್ಟಿನಿಂದ ಹೋರಾಟ ಮಾಡಿದರೆ ಮಾತ್ರ ಯಶಸ್ಸು ಸಾಧ್ಯ ಎಂದರು.

ಆಲ್ ಇಂಡಿಯಾ ಇಮಾಮ್ ಕೌನ್ಸಿಲ್‌ನ ಉಪಾಧ್ಯಕ್ಷ ಅಬ್ದುಲ್ ಮಜೀದ್ ಖಾಸಿಮಿ ಮಾತನಾಡಿದರು.

ಪಿಎಫ್‌ಐ ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಿಎಫ್‌ಐ ರಾಷ್ಟ್ರೀಯ ಕಾರ್ಯದರ್ಶಿ ಮುಹಮ್ಮದ್ ಶಾಕಿಫ್ ಮುಖ್ಯ ಭಾಷಣ ಮಾಡಿದರು.

ಪಿಎಫ್‌ಐ ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್, ಮಂಗಳೂರು ನಗರ ಅಧ್ಯಕ್ಷ ಅಬ್ದುಲ್ ಖಾದರ್, ಜಿಲ್ಲಾ ಸಮಿತಿ ಸದಸ್ಯ ಝಕರಿಯಾ, ಸಾಮಾಜಿಕ ಕಾರ್ಯಕರ್ತ ಇಸ್ಮತ್ ಪಜೀರ್, ಪಿಎಫ್‌ಐ ಮುಖಂಡರಾದ ಅಬ್ದುಲ್ ಖಾದರ್ ಪುತ್ತೂರು, ಅಬ್ದುಲ್ ಸಲಾಂ ಕಲ್ಲಾಪು, ಜಾಬಿರ್ ಪುತ್ತೂರು, ಮುಸ್ತಫ ಗುರುವಾಯನಕೆರೆ, ನವಾಝ್ ಕಾವೂರು, ಹಮೀದ್ ಉಪ್ಪಿನಂಗಡಿ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ಕಾರ್ಯದರ್ಶಿ ಮೊಯ್ದಿನ್ ಹಳೆಯಂಗಡಿ ಸ್ವಾಗತಿಸಿದರು. ಝಾಹಿದ್ ಮಲಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News