×
Ad

ಉಪ್ಪಿನಂಗಡಿ : ನದಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ

Update: 2021-12-04 15:01 IST

ಉಪ್ಪಿನಂಗಡಿ: ಬೊಳ್ಳಾರು ಎಂಬಲ್ಲಿ ಸ್ನಾನಕ್ಕೆಂದು ನೇತ್ರಾವತಿ ನದಿಗೆ ಇಳಿದ ಯುವಕನೋರ್ವ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದು, ಇದೀಗ ಬಿಳಿಯೂರು ಸಮೀಪದ ಕರಿಂಜೆ ಎಂಬಲ್ಲಿ ಆತನ ಮೃತದೇಹ ಪತ್ತೆಯಾಗಿದೆ.

ಛತ್ತೀಸ್‍ಗಡದ ಕೊಸರೊಂಡ ತಡೋಕೆ ನಿವಾಸಿ ಸುಕ್ಮೋ ರಾಮ್ ಗವಡೆ (19) ಡಿ.1ರಂದು ಸಂಜೆ ಬೊಳ್ಳಾರು ಎಂಬಲ್ಲಿ ಸ್ನಾನಕ್ಕೆಂದು ತನ್ನ ಸಂಗಡಿಗರೊಂದಿಗೆ ನೇತ್ರಾವತಿ ನದಿಗೆ ತೆರಳಿದ್ದು, ಈ ಸಂದರ್ಭ ನದಿಯ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದ.

ಬೋರ್‍ವೆಲ್ ಲಾರಿಯೊಂದರಲ್ಲಿ ಕಾರ್ಮಿಕನಾಗಿದ್ದ ಈತ ತಾನಿದ್ದ  ಬೋರ್‍ವೆಲ್ ಲಾರಿ ಬೊಳ್ಳಾರು ಎಂಬಲ್ಲಿನ ಪೆಟ್ರೋಲ್ ಪಂಪ್ ಬಳಿ ನಿಂತಿದ್ದರಿಂದ ಅಲ್ಲೇ ಹೆದ್ದಾರಿ ಪಕ್ಕದಲ್ಲಿರುವ ನದಿಗೆ ತನ್ನ ಸಂಗಡಿಗರಾದ ಉತ್ತರ ಭಾರತ ಮೂಲದ ಜಗನ್ನಾಥ್, ರತ್ನು, ಸಂವೇದ್, ತ್ರಿಲೋಕ್ ಎಂಬವರೊಂದಿಗೆ ತೆರಳಿದ್ದ. ಇವರು ನೀರಿಗೆ ಇಳಿದ ಜಾಗದಲ್ಲಿ ಭಾರೀ ಅಪಾಯಕಾರಿಯಾದ ಆಳ ಇದ್ದು, ರಭಸವಾಗಿ ನೀರಿನ ಹರಿವಿರುವ ಪ್ರದೇಶವಾಗಿತ್ತು.

ಇಲ್ಲಿ ಈತ ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದು, ನಾಪತ್ತೆಯಾಗಿದ್ದ ಈತನಿಗಾಗಿ ಮೂರು ದಿನಗಳಿಂದ ನದಿಯಲ್ಲಿ ಅಗ್ನಿಶಾಮಕ ದಳ ಹುಡುಕಾಟ ನಡೆಸಿತ್ತು. ಆದರೆ ಈತನ ಸುಳಿವು ಲಭ್ಯವಾಗಿರಲಿಲ್ಲ. ಇಂದು ಬೆಳಗ್ಗೆ ಈತನ ಮೃತದೇಹ ಬಿಳಿಯೂರು ಎಂಬಲ್ಲಿ ನಿರ್ಮಾಣವಾಗುತ್ತಿರುವ ಸೇತುವೆಯ ಬಳಿ ಸಿಕ್ಕಿದೆ. ಹನೀಫ್ ಬಿಳಿಯೂರು ನೇತೃತ್ವದ ಸ್ಥಳೀಯರ ತಂಡ ಮೃತದೇಹವನ್ನು ಮೇಲಕ್ಕೆತ್ತಲು ಸಹಕಾರ ನೀಡಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News