ಏರ್ ಇಂಡಿಯಾದ ಸಾಲಕ್ಕಾಗಿ 62,000 ಕೋಟಿ ರೂ. ಕೋರಿದ ಕೇಂದ್ರ ಸರಕಾರ

Update: 2021-12-04 11:37 GMT
ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ, ಡಿ.4: ಸರಕಾರವು ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಿರುವ ಪೂರಕ ಅನುದಾನಗಳಿಗಾಗಿ ಬೇಡಿಕೆಯಂತೆ ಏರ್ ಇಂಡಿಯಾದ ಸಾಲಗಳು ಮತ್ತು ಇತರ ಹೊಣೆಗಾರಿಕೆಗಳಿಗಾಗಿ ಒಟ್ಟು 62,000 ಕೋ.ರೂ. ಗಳನ್ನು ತೆರಿಗೆದಾರರು ಪಾವತಿಸಲಿದ್ದಾರೆ ಎಂದು thehindu.com ವರದಿ ಮಾಡಿದೆ.

ಏರ್ ಇಂಡಿಯಾದ ಸಾಲಗಳು, ಹೊಣೆಗಾರಿಕೆಗಳು ಮತ್ತು ಕೆಲವು ಮುಖ್ಯವಲ್ಲದ ಆಸ್ತಿಗಳನ್ನು ಹೊಂದಿರುವ ಏರ್ ಇಂಡಿಯಾ ಅಸೆಟ್ಸ್ ಹೋಲ್ಡಿಂಗ್ ಲಿಮಿಟೆಡ್ (ಎಐಎಎಚ್ಎಲ್)ನಲ್ಲಿ ಪಾಲು ಬಂಡವಾಳವಾಗಿ 62,000 ಕೋ.ರೂ.ಗೂ ಅಧಿಕ ಮೊತ್ತಕ್ಕೆ ಸರಕಾರವು ಸಂಸತ್ತಿನ ಒಪ್ಪಿಗೆಯನ್ನು ಕೋರಿದೆ. ಏರ್ ಇಂಡಿಯಾದ ಖಾಸಗೀಕರಣಕ್ಕೆ ಮುನ್ನ ಅದರ ಆಯವ್ಯಯ ಪತ್ರವನ್ನು ಶುದ್ಧಗೊಳಿಸಲು ಮತ್ತು ಖರೀದಿದಾರರಿಗೆ ಅದನ್ನು ಆಕರ್ಷಕವಾಗಿಸಲು ಸರಕಾರವು ಈ ಕಂಪನಿಯನ್ನು ಸ್ಥಾಪಿಸಿತ್ತು.

ಏರ್ ಇಂಡಿಯಾದ ಖಾಸಗೀಕರಣದ ಬಳಿಕ ಸರಕಾರದ ನಿವ್ವಳ ಹೊಣೆಗಾರಿಕೆಯು 28,844 ಕೋ.ರೂ.ಗಳಾಗುತ್ತವೆ ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿಗಳ ನಿರ್ವಹಣೆ ಇಲಾಖೆಯ ಕಾರ್ಯದರ್ಶಿ ತುಹಿನ್ ಕೆ.ಪಾಂಡೆ ಅವರು ಅಕ್ಟೋಬರ್ ನಲ್ಲಿ ಸುದ್ದಿಗೋಷ್ಠಿಯೊಂದರಲ್ಲಿ ತಿಳಿಸಿದ್ದರು. ಹಾಗಿದ್ದರೆ ಉಳಿದ 33,105 ಕೋ.ರೂ.ಗಳು ಯಾವುದಕ್ಕಾಗಿ?

ಮೊತ್ತವು ದುಡಿಯುವ ಬಂಡವಾಳ ಮತ್ತು ವಿಮಾನ ಸಾಲಗಳ ಮೇಲಿನ ಬಡ್ಡಿ ಹೊಣೆಗಾರಿಕೆಗಳು, ಲೀಸ್ ಬಾಡಿಗೆಗಳು,ತೈಲ ಕಂಪನಿಗಳು ಮತ್ತು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ ಬಾಕಿಯಿರುವ ಹಣವನ್ನು ಒಳಗೊಂಡಿದೆ. ಸರಕಾರವು ಅನುದಾನಕ್ಕಾಗಿ ಪೂರಕ ಬೇಡಿಕೆಯಲ್ಲಿ ಇವುಗಳಿಗೆ ಅವಕಾಶವನ್ನು ಕಲ್ಪಿಸಿದೆ ಎಂದು ಬೆಳವಣಿಗೆಯನ್ನು ನಿಕಟವಾಗಿ ಬಲ್ಲ ಮೂಲಗಳು ತಿಳಿಸಿವೆ ಎಂದು thehindu.com ವರದಿ ಮಾಡಿದೆ.

2021, ಆ.31ಕ್ಕೆ ಇದ್ದಂತೆ ಏರ್ ಇಂಡಿಯಾ ಒಟ್ಟು 61,562 ಕೋ.ಗಳ ಸಾಲವನ್ನು ಹೊಂದಿತ್ತು. ಈ ಪೈಕಿ ಟಾಟಾ ಸನ್ಸ್ ನ ಅಂಗಸಂಸ್ಥೆ ಟಾಲೇಸ್ 15,300 ಕೋ.ರೂ.ಗಳ ಸಾಲವನ್ನು ವಹಿಸಿಕೊಳ್ಳಲಿದೆ. ಉಳಿದ 46,262 ಕೋ.ರೂ.ಗಳ ಸಾಲವನ್ನು ಎಐಎಎಚ್ಎಲ್ ಗೆ ವರ್ಗಾಯಿಸಲಾಗುವುದು. ಕಂಪನಿಯು ಭೂಮಿ ಮತ್ತು ಕಟ್ಟಡಗಳಂತಹ 14,718 ಕೋ.ರೂ. ಮೌಲ್ಯದ ಮುಖ್ಯವಲ್ಲದ ಆಸ್ತಿಗಳನ್ನೂ ಹೊಂದಿದೆ. ಈ ಕಂಪನಿಗೆ ವರ್ಗಾಯಿಸಿರುವ ಸಾಲಗಳಿಗೆ ಸಂಬಂಧಿಸಿದಂತೆ ಸರಕಾರವು ಈಗಾಗಲೇ 2018ರಿಂದ 8,351 ಕೋ.ರೂ.ಗಳನ್ನು ಪಾವತಿಸಿದೆ.

ನರೇಗಾಕ್ಕೆ 25,000 ಕೋ.ರೂ.ಗಳ ಹೆಚ್ಚುವರಿ ನೆರವು
ಸರಕಾರವು ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಿರುವ 3.73 ಲ.ಕೋ.ರೂ.ಗಳ ಪೂರಕ ಅನುದಾನಗಳಿಗೆ ಬೇಡಿಕೆಯಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (ನರೇಗಾ)ಗೆ 25,000 ಕೋ.ರೂ.ಗಳ ಹೆಚ್ಚುವರಿ ಕೋರಿಕೆಯೂ ಸೇರಿದೆ.

ನರೇಗಾ ಯೋಜನೆಗೆ ಬಿಡುಗಡೆಗೊಳಿಸಿದ್ದ ಹಣ ಈ ವರ್ಷದ ಮಧ್ಯಭಾಗದಲ್ಲಿಯೇ ಪೂರ್ಣವಾಗಿ ಬಳಕೆಯಾಗಿದ್ದು, ವೇತನಗಳು ಮತ್ತು ಸಾಮಗ್ರಿಗಳ ಪಾವತಿಯು ಬಾಕಿಯುಳಿದಿದೆ. ಇದು ಯೋಜನೆಯ ಅನುಷ್ಠಾನಕ್ಕೆ ವ್ಯತ್ಯಯವನ್ನುಂಟು ಮಾಡುವ ಆತಂಕವಿದ್ದರಿಂದ ನರೇಗಾಕ್ಕೆ ಹೆಚ್ಚುವರಿ ಹಣಕಾಸಿಗಾಗಿ ಕಾಯಲಾಗುತ್ತಿತ್ತು. ಗ್ರಾಮೀಣ ಭಾರತದಲ್ಲಿ ಮುಂದುವರಿದಿರುವ ಆರ್ಥಿಕ ಸಂಕಷ್ಟದಿಂದಾಗಿ ಯೋಜನೆಯಡಿ ಉದ್ಯೋಗಗಳಿಗೆ ಬೇಡಿಕೆ ಹೆಚ್ಚಿದೆ. ನರೇಗಾ ಯೋಜನೆಯು ಪ್ರತಿ ಕುಟುಂಬಕ್ಕೆ ಪ್ರತಿದಿನಕ್ಕೆ 210 ರೂ.ಗಳ ಕೂಲಿಯಂತೆ 100 ದಿನಗಳ ಉದ್ಯೋಗದ ಖಾತರಿಯನ್ನು ನೀಡುತ್ತದೆ.

ಹಣಕಾಸು ವರ್ಷ ಮುಗಿಯಲು ನಾಲ್ಕು ತಿಂಗಳುಗಳು ಬಾಕಿಯಿರುವಂತೆ ನರೇಗಾ ಯೋಜನೆಗಾಗಿ ಮುಂಗಡಪತ್ರದಲ್ಲಿ ಒದಗಿಸಲಾಗಿದ್ದ 73,000 ಕೋ.ರೂ.ಗಳ ಆರಂಭಿಕ ಮೊತ್ತವು ಸಂಪೂರ್ಣವಾಗಿ ಬಳಕೆಯಾಗಿದ್ದು, 10,244 ಕೋ,ರೂ.ಗಳ ಪಾವತಿಯನ್ನು ಬಾಕಿಯುಳಿಸಿಕೊಂಡಿದೆ.

ಪೂರಕ ಅನುದಾನ ಬೇಡಿಕೆಗಳಲಿ ರಸಗೊಬ್ಬರಗಳ ಮೇಲಿನ ಸಬ್ಸಿಡಿಗಳಿಗಾಗಿ 58,430 ಕೋ.ರೂ., ಆಹಾರ ದಾಸ್ತಾನು ಮತ್ತು ಗೋದಾಮುಗಳ ಯೋಜನೆಗಾಗಿ 49,805 ಕೋ.ರೂ.ಮತ್ತು ಬಾಕಿಯಿರುವ ರಫ್ತು ಪ್ರೋತ್ಸಾಹಧನ ಪಾವತಿಗಾಗಿ 53,123 ಕೋ.ರೂ.ಗಳನ್ನು ಹೆಚ್ಚುವರಿಯಾಗಿ ಕೋರಲಾಗಿದೆ ಎಂದು thehindu.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News