ಭಾರತದಲ್ಲಿ 'ಲೇಸ್ ಚಿಪ್ಸ್' ನಲ್ಲಿ ಬಳಸುವ ಆಲೂಗಡ್ಡೆ ತಳಿಯ ಮೇಲಿನ ಹಕ್ಕುಗಳನ್ನು ಕಳೆದುಕೊಂಡ ಪೆಪ್ಸಿಕೊ

Update: 2021-12-04 12:38 GMT
ಸಾಂದರ್ಭಿಕ ಚಿತ್ರ (indiatoday.in)

ಹೊಸದಿಲ್ಲಿ: ತನ್ನ ಲೇಸ್ ಬ್ರ್ಯಾಂಡ್ ಚಿಪ್ಸ್ ತಯಾರಿಕೆಗೆ ಬಳಸಲಾಗುವ ಆಲೂಗಡ್ಡೆ ತಳಿಯ ಪೇಟೆಂಟ್ ಹಕ್ಕುಗಳನ್ನು ಉಲ್ಲಂಘಿಸಿದ್ದಾರೆಂದು ಎರಡು ವರ್ಷಗಳ ಹಿಂದೆ ಒಂಬತ್ತು ಗುಜರಾತಿ ರೈತರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿ ಆಕ್ರೋಶ ಎದುರಿಸಿದ್ದ ಪೆಪ್ಸಿಕೋ ಇಂಡಿಯಾ ಸಂಸ್ಥೆಯ ಪೇಟೆಂಟ್ ನೋಂದಣಿಯನ್ನು ಪ್ರೊಟೆಕ್ಷನ್ ಆಫ್ ಪ್ಲಾಂಟ್ ವೆರೈಟೀಸ್ ಎಂಡ್ ಫಾರ್ಮರ್ಸ್ ರೈಟ್ಸ್ ಅಥಾರಿಟಿ ವಾಪಸ್ ಪಡೆದಿದೆ ಎಂದು thehindu.com ವರದಿ ಮಾಡಿದೆ.

ಕಂಪೆನಿಯ ನೋಂದಣಿಯನ್ನು ರದ್ದುಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದ ಅಲಾಯನ್ಸ್ ಫಾರ್ ಸಸ್ಟೈನೇಬಲ್ ಎಂಡ್ ಹೋಲಿಸ್ಟಿಕ್ ಅಗ್ರಿಕಲ್ಚರ್ ಇದರ ಸಂಚಾಲಕಿ ಕವಿತಾ ಕುರುಗಂಟಿ, ಈ ನಿರ್ಧಾರವನ್ನು ಭಾರತದ ರೈತರ ಪಾಲಿಗೆ ಐತಿಹಾಸಿಕ ಜಯ ಎಂದು ಬಣ್ಣಿಸಿದ್ದಾರೆ.

ಆದೇಶವನ್ನು ಪರಿಶೀಲಿಸಲಾಗುತ್ತಿದೆ ಎಂದಷ್ಟೇ ಹೇಳಿರುವ ಪೆಪ್ಸಿಕೋ ಇತರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಒಂದು ನಿರ್ದಿಷ್ಟ ತಳಿಯ ಆಲೂಗಡ್ಡೆಯ ಮಾಲಕ ತಾನೆಂದು ಹೇಳಿಕೊಂಡು ಪೆಪ್ಸಿಕೋ ಹಾಜರುಪಡಿಸಿದ್ದ ದಾಖಲೆಗಳನ್ನು ಅಲಾಯನ್ಸ್ ಫಾರ್ ಸಸ್ಟೈನೇಬಲ್ ಎಂಡ್ ಹೋಲಿಸ್ಟಿಕ್ ಅಗ್ರಿಕಲ್ಚರ್ ಪ್ರಶ್ನಿಸಿತ್ತು.

ಕಂಪೆನಿಯ ನೀತಿಯಿಂದಾಗಿ ಹಲವಾರು ರೈತರು ಸಂಕಷ್ಟಕ್ಕೀಡಾಗಿದ್ದಾರೆ ಹಾಗೂ ದೊಡ್ಡ ಮೊತ್ತದ ದಂಡ ಪಾವತಿಸುವಂತಾಗಿದೆ ಹಾಗೂ ಇದು ಸಾರ್ವಜನಿಕ ಹಿತಾಸಕ್ತಿಗೂ ವಿರುದ್ಧವಾಗಿದೆ ಎಂದು  ಪ್ರಾಧಿಕಾರದ ಅಧ್ಯಕ್ಷ ಕೆ ವಿ ಪ್ರಭು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಲೇಸ್ ಪೊಟ್ಯಾಟೋ ಚಿಪ್ಸ್ ತಯಾರಿಗೆ ಕಂಪೆನಿ ಎಫ್‍ಎಲ್-2027 ತಳಿಯ ಆಲೂಗಡ್ಡೆಯನ್ನು ಬಳಸುತ್ತಿದೆ. 2009ರಿಂದ ಈ ತಳಿಯ ಆಲೂಗಡ್ಡೆಯನ್ನು ಭಾರತದಲ್ಲಿ  ಸುಮಾರು 12,000 ರೈತರು ಬೆಳೆಸುತ್ತಿದ್ದು, ಈ ರೈತರ ಜತೆಗೆ ಒಪ್ಪಂದಕ್ಕೆ ಬಂದಿರುವ ಕಂಪೆನಿ ಅವರಿಗೆ ಬೀಜಗಳನ್ನು ಮಾರಾಟ ಮಾಡುವುದರ ಜತೆಗೆ ಅವರ ಉತ್ಪನ್ನವನ್ನು ಖರೀದಿಸುತ್ತಿದೆ. ಈ ತಳಿಯ ಆಲೂಗಡ್ಡೆಯನ್ನು ಕಂಪೆನಿ ಪಿಪಿವಿ&ಎಫ್‍ಆರ್ ಕಾಯಿದೆ, 2001 ಅನ್ವಯ ನೋಂದಣಿಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News