×
Ad

ಗ್ಯಾಂಗ್‌ವಾರ್ ಪ್ರಕರಣ; ನಾಲ್ವರ ಸೆರೆ, ಇನ್ನಷ್ಟು ಆರೋಪಿಗಳ ಬಂಧನಕ್ಕೆ ಕ್ರಮ: ಮಂಗಳೂರು ಕಮಿಷನರ್ ಶಶಿಕುಮಾರ್‌

Update: 2021-12-04 18:53 IST
 ಕಮಿಷನರ್ ಎನ್. ಶಶಿಕುಮಾರ್

ಮಂಗಳೂರು, ಡಿ.4: ಉರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನ.27ರಂದು ತಡರಾತ್ರಿ ಶ್ರವಣ್ ಎಂಬಾತನಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಅಳಕೆ ಗ್ಯಾಂಗ್‌ನ ನಾಲ್ವರನ್ನು ಬಂಧಿಸಿದ್ದಾರೆ.

ಅಶೋಕ್ ನಗರದ ನವನೀತ್, ಹೊಗೆಬೈಲ್‌ನ ಹೇಮಂತ್, ಬೋಳೂರಿನ ದೀಕ್ಷಿತ್ ಮತ್ತು ಸಂದೇಶ್ ಬಂಧಿಸಲ್ಪಟ್ಟವರು.

ಆರೋಪಿಗಳಿಂದ 3 ತಲವಾರು, 2 ದ್ವಿಚಕ್ರ ವಾಹನ ಮತ್ತು 1 ಆಟೋರಿಕ್ಷಾ ಸ್ವಾಧೀನಪಡಿಸಿಕೊಳ್ಳಲಾಗಿದೆ. ಸಂದೇಶ್ ಇತರ ಆರೋಪಿಗಳು ತಲೆಮರೆಸಿಕೊಳ್ಳಲು ಸಹಾಯ ಮಾಡಿದ್ದ. ನವನೀತ್ ನಾಯಕ್ ಈ ಹಿಂದೆ ಎಡರು ಪ್ರಕರಣಗಳಲ್ಲಿ ಬಂಧಿಸಲ್ಪಟ್ಟಿದ್ದ. ಹೇಮಂತ್ 3 ಹಾಗೂ ದೀಕ್ಷಿತ್ 1 ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದರು. ಈ ಕೃತ್ಯದಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಭಾಗಿಯಾದ ಇತರ ಆರೋಪಿಗಳನ್ನು ಕೂಡ ಬಂಧಿಸಲಾಗುವುದು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಬಂಧಿತ ಆರೋಪಿಗಳು ಕಳೆದ ವರ್ಷ ಕೊಲೆಯಾದ ಅಳಕೆ ಗ್ಯಾಂಗ್‌ನ ಇಂದ್ರಜಿತ್‌ನ ಸ್ನೇಹಿತರಾಗಿದ್ದು, ಇಂದ್ರಜಿತ್‌ನ ಕೊಲೆಗೆ ಪ್ರತೀಕಾರವಾಗಿ ಕೃತ್ಯ ನಡೆಸಿದ್ದಾರೆ. ಇಂದ್ರಜಿತ್ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ಕೌಶಿಕ್ ಮತ್ತು ಆಶಿಕ್ ಅವರ ಸಹೋದರನಾದ ಅಂಕಿತ್ ಬೋಳೂರು ಎಂಬವನನ್ನು ಕೊಲೆ ಮಾಡುವ ಉದ್ದೇಶದಿಂದ ತಲವಾರಿನಿಂದ ದಾಳಿ ನಡೆಸಿದ್ದರು. ಅಂಕಿತ್ ತಪ್ಪಿಸಿಕೊಂಡಿದ್ದ. ಹಲ್ಲೆ ತಡೆಯಲು ಮುಂದಾದ ಶ್ರವಣ್‌ನ ಕುತ್ತಿಗೆಗೆ ತಲವಾರಿನಿಂದ ಬಲವಾದ ಪೆಟ್ಟು ಬಿದ್ದಿತ್ತು ಎಂದು ಆಯುಕ್ತರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

2 ಗ್ಯಾಂಗ್‌ಗಳ ನಡುವೆ ವೈಷಮ್ಯ

ಅಳಕೆ ಗ್ಯಾಂಗ್ ಮತ್ತು ಬೋಳೂರು ಗ್ಯಾಂಗ್‌ಗಳ ನಡುವೆ ಹುಲಿ ವೇಷ ಮತ್ತು ಗುಂಪುಗಾರಿಕೆ ವಿಚಾರದಲ್ಲಿ ಈ ಮೊದಲಿನಿಂದಲೂ ವೈಷಮ್ಯವಿತ್ತು. 2014ರಲ್ಲಿ ಬೋಳೂರು ಗ್ಯಾಂಗ್‌ನ ತಲ್ವಾರ್ ಜಗ್ಗನ ಮಗನಾದ ಸಂಜಯ್ ಯಾನೆ ವರುಣ್‌ನನ್ನು ಅಳಕೆ ಗ್ಯಾಂಗ್‌ನ ಆಶ್ರೀತ್, ಅಭಿಲಾಷ್, ವಿಕಾಸ್, ಕಾರ್ತಿಕ್, ಪುನೀತ್, ವಿಜಯ್ ಮೊದಲಾದವರು ಕೊಲೆ ಮಾಡಿದ್ದರು. ಇದಕ್ಕೆ ಪ್ರತೀಕಾರವಾಗಿ 2019ರಲ್ಲಿ ಬೋಳೂರು ಗ್ಯಾಂಗ್‌ನ ವಿಕ್ಕಿ ಬಪ್ಪಾಲ್, ರಾಜು ಬೋಳೂರು, ಅವಿನಾಶ್ ಬೋಳೂರು, ಪರಪು ಎಡಪದವು ದೀಕ್ಷಿತ್, ಜಯಪ್ರಕಾಶ್ ಬೋಳೂರು, ತ್ರಿಶೂಲ್ ಬೋಳೂರು ಎಂಬವರು ಅಳಕೆ ಗ್ಯಾಂಗ್‌ನ ರಿತೇಶ್ (23) ಎಂಬವನ ಮೇಲೆ ತಲವಾರು ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದರು. ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕಳೆದ ವರ್ಷ ಇಂದ್ರಜಿತ್ ಕೊಲೆಯಾಗಿದ್ದ

ಬೋಳೂರು ಗ್ಯಾಂಗ್‌ನ ಉಲ್ಲಾಸ್ ಕಾಂಚನ್, ಗೌತಮ್, ರಾಕೇಶ್, ಶರಣ್, ಕೌಶಿಕ್, ಆಶಿಕ್, ಮೋಕ್ಷಿತ್, ಜಗ್ಗ ಯಾನೆ ತಲ್ವಾರ್ ಜಗ್ಗ, ನಿತಿನ್ ಪೂಜಾರಿ, ದೇವದಾಸ್ ಪೂಜಾರಿ ಒಳಸಂಚು ರೂಪಿಸಿ 2020ರಲ್ಲಿ ಅಳಕೆ ಗ್ಯಾಂಗ್‌ನ ಇಂದ್ರಜಿತ್‌ನ್ನು ತಲವಾರಿನಿಂದ ಕೊಚ್ಚಿ ಕೊಲೆ ಮಾಡಿದ್ದರು.

ಈ ಪೈಕಿ ಉಲ್ಲಾಸ್ ಕಾಂಚನ್, ಗೌತಮ್, ರಾಕೇಶ್, ಕೌಶಿಕ್, ಆಶಿಕ್ ಮತ್ತು ಮೋಕ್ಷಿತ್ ಪ್ರಸ್ತುತ ಜೈಲಿನಲ್ಲಿದ್ದಾರೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ರೌಡಿಸಂ: ಎಚ್ಚರಿಕೆ ನೀಡಿದ ಪೊಲೀಸ್ ಕಮಿಷನರ್‌

ಗೂಂಡಾಗಿರಿ, ರೌಡಿಸಂ ಸೇರಿದಂತೆ ಯಾವುದೇ ಅಕ್ರಮ ಚಟುವಟಿಕೆಗಳನ್ನು ಸಹಿಸುವುದಿಲ್ಲ. ಇಂತಹ ಚಟುವಟಿಕೆಗಳನ್ನು ಮಟ್ಟ ಹಾಕಿ ಕಾನೂನು ಸುವ್ಯವಸ್ಥೆ ಕಾಪಾಡಲು ಕಠಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಇತ್ತೀಚೆಗೆ ಸುಮಾರು 1,300ಕ್ಕೂ ಅಧಿಕ ಮಂದಿಯ ಹಳೆಯ ರೌಡಿಶೀಟ್‌ಗಳನ್ನು ರದ್ದು ಮಾಡಿ ಸಮಾಜದಲ್ಲಿ ಸಜ್ಜನರಾಗಿ ಬದುಕಲು ಅವಕಾಶ ಮಾಡಿಕೊಡಲಾಗಿದೆ. ಆದರೆ ಅವರು ಮತ್ತೆ ಹಳೆ ಚಾಳಿ ಮುಂದುವರಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತ ಎನ್. ಶಶಿಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಅನಿವಾರ್ಯವಾದರೆ ಮಾತ್ರ ಫೈರಿಂಗ್‌

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪೊಲೀಸ್ ಆಯುಕ್ತರು, ‘ಪೊಲೀಸರು ಸ್ವಯಂರಕ್ಷಣೆಗಾಗಿ ಅಥವಾ ಆರೋಪಿಗಳು ತಪ್ಪಿಸಿಕೊಳ್ಳುವ ಸಂದರ್ಭಗಳಲ್ಲಿ ಮಾತ್ರ ಫೈರಿಂಗ್ ಮಾಡುತ್ತಾರೆ. ಜನ ನಿರೀಕ್ಷೆ ಮಾಡುತ್ತಾರೆಂದು ಫೈರಿಂಗ್ ಮಾಡಲಾಗದು. ಕಾನೂನಿನಂತೆಯೇ ಕರ್ತವ್ಯ ನಿರ್ವಹಿಸಬೇಕಾಗುತ್ತದೆ’ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News