ಮಮತಾ ಬ್ಯಾನರ್ಜಿಯವರ ಪರ್ಯಾಯ ರಾಜಕೀಯ ರಂಗಕ್ಕೆ ನಾನು ಸೇರಬಹುದು: ಅಖಿಲೇಶ್ ಯಾದವ್
ಹೊಸದಿಲ್ಲಿ: ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಹಾಗೂ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಪರ್ಯಾಯ ರಾಜಕೀಯ ರಂಗಕ್ಕೆ ಸೇರಲು ಮುಕ್ತರಾಗಬಹುದು ಎಂದು ಶುಕ್ರವಾರ ಹೇಳಿದ್ದಾರೆ.
ಯಾದವ್ ಅವರು 2022 ರ ಉತ್ತರಪ್ರದೇಶ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿಗೆ ಸವಾಲು ಹಾಕಲು ವೇದಿಕೆಯನ್ನು ನಿರ್ಮಿಸುವಲ್ಲಿ ನಿರತರಾಗಿದ್ದಾರೆ. ಬಂಗಾಳದ ಚುನಾವಣೆಯಲ್ಲಿ ಬ್ಯಾನರ್ಜಿಯವರಂತೆ ಉತ್ತರ ಪ್ರದೇಶದಲ್ಲಿ ಆಡಳಿತ ಪಕ್ಷವು "ಸೋಲುಣ್ಣಲಿದೆ" ಎಂದು ಅವರು ಹೇಳಿದರು.
"ನಾನು ಅವರನ್ನು(ಮಮತಾ ಬ್ಯಾನರ್ಜಿ) ಸ್ವಾಗತಿಸುತ್ತೇನೆ. ಅವರು ಬಂಗಾಳದಲ್ಲಿ ಬಿಜೆಪಿಯನ್ನು ಅಳಿಸಿ ಹಾಕಿದ ರೀತಿ... ಉತ್ತರ ಪ್ರದೇಶದ ಜನರು ಬಿಜೆಪಿಯನ್ನು ಅಳಿಸಿಹಾಕುತ್ತಾರೆ" ಎಂದು ಯಾದವ್ ಅವರು ಯಾತ್ರೆ ನಡೆಸುತ್ತಿರುವ ಝಾನ್ಸಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
"ಸಮಯ ಬಂದಾಗ ನಾವು ಅದರ ಬಗ್ಗೆ ಮಾತನಾಡುತ್ತೇವೆ" ಎಂದು ಅವರು ಪ್ರಶ್ನೆಯನ್ನು ಕೇಳಿದ ಸುದ್ದಿಗಾರರಿಗೆ ಹೇಳಿದರು.
ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. "ಸಾರ್ವಜನಿಕರು ಆ ಪಕ್ಷವನ್ನು ನಿರಾಕರಿಸುತ್ತಾರೆ ... ಹಾಗೂ ಮುಂಬರುವ ಚುನಾವಣೆಯಲ್ಲಿ ಆ ಪಕ್ಷ ಶೂನ್ಯ ಸ್ಥಾನಗಳನ್ನು ಪಡೆಯುತ್ತದೆ" ಎಂದು ಅವರು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಗೇಲಿಗೆ ತಿರುಗೇಟು ನೀಡಿದರು.