×
Ad

ಹೈರಿಸ್ಕ್ ದೇಶದಿಂದ ಬಂದ ಮೂವರಿಗೆ ಹೋಮ್ ಕ್ವಾರಂಟೈನ್: ಉಡುಪಿ ಡಿಸಿ ಕೂರ್ಮಾರಾವ್

Update: 2021-12-04 20:17 IST

ಉಡುಪಿ, ಡಿ.4: ಕಳೆದ ಐದು ದಿನಗಳಿಂದ ಉಡುಪಿ ಜಿಲ್ಲೆಗೆ ಒಟ್ಟು 91 ಮಂದಿ ಅಂತಾರಾಷ್ಟ್ರೀಯ ಪ್ರಯಾಣಿಕರು ಆಗಮಿಸಿದ್ದು, ಅವರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ ಮೂವರು ಹೈರಿಸ್ಕ್ ದೇಶದಿಂದ ಬಂದಿದ್ದು, ಇವರ ವರದಿ ಕೂಡ ನೆಗೆಟಿವ್ ಬಂದಿದೆ. ಸದ್ಯ ಇವರನ್ನು ಹೋಮ್ ಕ್ವಾರಂಟೈನ್‌ಗೆ ಒಳಪಡಿಸಿದ್ದು, ಎಂಟನೆ ದಿನ ಇವರನ್ನು ಮತ್ತೆ ಕಡ್ಡಾಯವಾಗಿ ಪರೀಕ್ಷೆ ಒಳಪಡಿಸಲಾಗುವುದೆಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್‌ಹಾಲ್‌ನಲ್ಲಿ ಇಂದು ಕರೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದರು. ಒಂದು ವಾರದಲ್ಲಿ ಜಿಲ್ಲೆಗೆ ಕೇರಳದಿಂದ 69 ಮಂದಿ ಬಂದಿದ್ದು, ಅದರಲ್ಲಿ 9 ಪಾಸಿಟಿವ್ ಪ್ರಕರಣ ಹಾಗೂ ಮಹಾರಾಷ್ಟ್ರದಿಂದ 266 ಮಂದಿ ಅಗಮಿಸಿದ್ದು, ಅದರಲ್ಲಿ 12 ಪಾಸಿಟಿವ್ ಕಂಡು ಬಂದಿದೆ ಎಂದು ಹೇಳಿದರು.

ಕೇರಳದಿಂದ ಬರುವವರಿಗೆ ಪ್ರಯಾಣ ಆರಂಭಿಸಿದ 72 ಗಂಟೆಯೊಳಗಿನ ಕೋವಿಡ್-19 ನೆಗೆಟಿವ್ ವರದಿ ಇದ್ದರೆ ಮಾತ್ರ ಪ್ರವೇಶ ನೀಡಲಾಗುತ್ತಿದೆ ಮತ್ತು 1 ವಾರದ ಕಾಲ ನಿಗಾವಣೆಗೆ ಒಳಪಡಿಸಲಾಗುತ್ತಿದೆ. ಒಂದು ವಾರದ ನಂತರ ಅವರನ್ನು ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಗುವುದು. ಮಹಾರಾಷ್ಟ್ರ ದಿಂದ ಬರುವವರು 72 ಗಂಟೆಯೊಳಗಿನ ಕೋವಿಡ್-19 ನೆಗೆಟಿವ್ ವರದಿ ಹೊಂದಿರಬೇಕು. ಜಿಲ್ಲೆಯಲ್ಲಿ ಹೊಸದಾಗಿ ಪತ್ತೆಯಾದ ಎಲ್ಲಾ ಕೋವಿಡ್ ಸೋಂಕಿತರನ್ನು ಹೋಮ್ ಕ್ವಾರೆಂಟೈನ್‌ಗೆ ಒಳಪಡಿಸಲಾಗುವುದು ಎಂದರು.

ಶಾಲಾ ಕಾಲೇಜು ವಿದ್ಯಾರ್ಥಿಗಳ ಪರೀಕ್ಷೆ

ಸರಕಾರದ ಹೊಸ ಮಾರ್ಗಸೂಚಿಯಂತೆ ಮುಂದಿನ 15 ದಿನಗಳಲ್ಲಿ ಪ್ರೌಢ ಶಾಲೆ ಮತ್ತು ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿಗೆ ರ‍್ಯಾಂಡಮ್ ಪರೀಕ್ಷೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮಾಲ್ ಮತ್ತು ಮಾರುಕಟ್ಟೆಗಳಲ್ಲಿರುವ ಅಂಗಡಿ ಮುಂಗಟ್ಟುಗಳ ವರ್ತಕರು, ಎಲ್ಲಾ ಕಚೇರಿಗಳ ಸಿಬ್ಬಂದಿ, ಪಬ್ ಮತ್ತು ಬಾರ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿ, ಕಾರ್ಖಾನೆ ಸಿಬ್ಬಂದಿ, ಕ್ಯಾಟರಿಂಗ್ ಸಿಬ್ಬಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗು ತ್ತಿದೆ ಎಂದ ಅವರು, ಸೋಂಕು ಬಾದಿತ ವ್ಯಕಿತಿಗಳು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುವ ಸಂದರ್ಭದಲ್ಲಿ ಬೆಡ್ ವ್ಯವಸ್ಥೆ ಮತ್ತು ಆಕ್ಸಿಜನ್ ವ್ಯವಸ್ಥೆ ಮಾಡಲು 25 ಖಾಸಗಿ ಆಸ್ಪತ್ರೆಗಳಿಗೆ ನೋಡೆಲ್ ಅಧಿಕಾರಿಗಳನ್ನು ನೇಮಿಸ ಲಾಗಿದೆ ಎಂದರು.

500 ಮಂದಿಗೆ ಸೀಮಿತ

ಸಭೆ ಸಮಾರಂಭಗಳಲ್ಲಿ ಬಾಗವಹಿಸುವವರ ಸಂಖ್ಯೆಯನ್ನು 500 ಜನರಿಗೆ ಸೀಮಿತಗೊಳಿಸಲಾಗಿದೆ. ಮಾಸ್ಕ್ ಧರಿಸದವರ ವಿರುದ್ಧ ದಂಢ ವಿಧಿಸುವ ಕಾರ್ಯವನ್ನು ಕೈಗೊಳ್ಳಲಾಗಿದೆ. ಕೋವಿಡ್ ಸಮುಚಿತ ವರ್ತನೆ ಪಾಲಿಸದ ಅಂಗಡಿ ಮುಂಗಟ್ಟುಗಳಿಗೆ ದಂಢ ವಿಧಿಸುವುದು ಮತ್ತು ಲೈಸೆನ್ಸ್ ರದ್ದುಗೊಳಿಸುವ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸಾರ್ವಜನಿಕರು ಕೋವಿಡ್ ಕುರಿತಂತೆ ಅನಗತ್ಯ ಗೊಂದಲ, ಆತಂಕಕ್ಕೆ ಒಳಗಾಗದೇ ಎಚ್ಚರಿಕೆಯಿಂದ ಇರಬೇಕು. ಕೋವಿಡ್-19 ಸಮುಚಿತ ವರ್ತನೆಗಳನ್ನು ಎಲ್ಲೆಡೆ ಪಾಲಿಸಬೇಕು ಮತ್ತು 2 ಡೋಸ್ ಕೋವಿಡ್ ಲಸಿಕೆ ಯನ್ನು ಪಡೆಯಬೇಕು ಹಾಗೂ ರೋಗ ಲಕ್ಷಣಗಳಿದ್ದಲ್ಲಿ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳುವಂತೆ ಹಾಗೂ ಜಿಲ್ಲಾಡಳಿತ ಸೂಚಿಸುವ ಕ್ರಮಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿ ಕೂಮರಾವ್ ಎಂ. ಮನವಿ ಮಾಡಿದರು.

ಪತ್ರಿಕಾಗೋಷ್ಟಿಯಲ್ಲಿ ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಬಾಲಕೃಷ್ಣಪ್ಪ ಉಪಸ್ಥಿತರಿದ್ದರು.

ಕೋವಿಡ್ ಪರೀಕ್ಷಾ ಗುರಿ 5000ಕ್ಕೆ ಹೆಚ್ಚಳ

ಕೋವಿಡ್ ಸೋಂಕು ಹರಡುವುದನ್ನು ತಡೆಯಲು ಹೆಚ್ಚು ಹೆಚ್ಚು ಕೋವಿಡ್ ಪರೀಕ್ಷೆ ನಡೆಸಬೇಕಾಗಿದೆ. ಕಳೆದ ವಾರದಲ್ಲಿ ಜಿಲ್ಲೆಯಲ್ಲಿ ಪ್ರತಿದಿನ 2312ರಂತೆ 16,187 ಪರೀಕ್ಷೆ ನಡೆಸಿದ್ದು, ಪ್ರಸ್ತುತ ಪ್ರತಿದಿನ ಕೋವಿಡ್ ಪರೀಕ್ಷಾ ಗುರಿಯನ್ನು 5000ಕ್ಕೆ ಹೆಚ್ಚಿಸಲಾಗಿದೆ. ಜಿಲ್ಲೆಯಲ್ಲಿ ಕಳೆದ 15ದಿನಗಳಿಂದ ಮತ್ತು ಕಳೆದ ಒಂದು ವಾರಗಳಿಂದ ಪಾಸಿಟಿವಿಟಿ ದರ ಶೇ.0.4 ಹಾಗೂ ಸಕ್ರಿಯ ಪ್ರಕರಣಗಳು 88 ಇವೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ತಿಳಿಸಿದರು.

ಕೋವಿಡ್ ಸಂಭಾವ್ಯ ಮೂರನೆ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ಪರಿಣಾಮ ಉಂಟಾಗುವ ಸಾಧ್ಯತೆ ಇರುವುದರಿಂದ ನಿಗದಿ ಪಡಿಸಿ ಪರೀಕ್ಷಾ ಗುರಿಯಲ್ಲಿ ಶೇ.10ರಷ್ಟು ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಲಾಗುವುದು. ಒಟ್ಟು ಗುರಿಯಲ್ಲಿ ಶೇ.50 ಜಿಲ್ಲಾ ಕೆಂದ್ರ ಸ್ಥಾನದಲ್ಲಿ ಮತ್ತು ಉಳಿದ ಶೇ.50 ಗ್ರಾಮೀಣ ಪ್ರದೇಶ ದಲ್ಲಿ ಪರೀಕ್ಷೆ ನಡೆಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News