×
Ad

ನವಜಾತ ಶಿಶುಗಳಿಗೆ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ; ಮಣಿಪಾಲ ಕೆಎಂಸಿ ವೈದ್ಯರ ತಂಡದಿಂದ ಸಾಧನೆ

Update: 2021-12-04 20:29 IST

ಉಡುಪಿ, ಡಿ.4: ಮಣಿಪಾಲ ಕಸ್ತೂರ್ಬಾ ವೈದ್ಯಕೀಯ ಆಸ್ಪತ್ರೆಯಲ್ಲಿ ಹುಟ್ಟು ವಾಗಲೇ ಹೃದಯದ ಕಾಯಿಲೆ ಇದ್ದ ಎರಡು ನವಜಾತ ಶಿಶುಗಳಿಗೆ ವೈದ್ಯರ ತಂಡವೊಂದು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದೆ.

ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಇತ್ತೀಚೆಗೆ ಜನಿಸಿದ ಮಕ್ಕಳಿಬ್ಬರೂ ಶಸ್ತ್ರ ಚಿಕಿತ್ಸೆಯ ಬಳಿಕ ಆರೋಗ್ಯಯುತರಾಗಿದ್ದಾರೆ. ವಿಶ್ವದ ಯಾವುದೇ ಹೃದ್ರೋಗ ಚಿಕಿತ್ಸಾ ಕೇಂದ್ರಕ್ಕೆ ಕಡಿಮೆ ಇಲ್ಲದ ಕೇಂದ್ರವನ್ನು ಈಗ ಕೆಎಂಸಿ ಹೊಂದಿದೆ ಎಂದು ತಿಳಿಸಿದರು.

ವಿದೇಶದಲ್ಲಿ ನೆಲೆಸಿರುವ ದಂಪತಿಯ ಮಗುವಿನ ಗರ್ಭಾವಸ್ಥೆಯಲ್ಲಿಯೇ ಹೃದಯದ ತೊಂದರೆ ಗುರುತಿಸಲಾಗಿತ್ತು. ಹುಟ್ಟಿದ ಕೂಡಲೇ ಮಗುವಿನ ಮಹಾಪದಮನಿಯ ರಕ್ತಚಲನೆಯ ಅಡಚಣೆಯನ್ನು ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯಿಂದ ನಿವಾರಿಸಲಾಯಿತು ಎಂದರು.

ಅದೇ ರೀತಿ ಶಿವಮೊಗ್ಗದ ದಂಪತಿಯ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡದೇ, ಅದರ ಕಾಲಿನ ರಕ್ತನಾಳದಲ್ಲಿ ಸೂಜಿರಂದ್ರದ ಮೂಲಕ ಸ್ಟಂಟ್ ಹಾಕಿ ಯಶಸ್ವಿ ಯಾಗಿದ್ದೇವೆ. ಇಂತಹ ಅನೇಕ ಪ್ರಕರಣಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇವೆ ಎಂದು ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ.ಪದ್ಮಕುಮಾರ್ ತಿಳಿಸಿದರು.

ನವಜಾತ ಶಿಶು ವಿಭಾಗದ ಡಾ.ಗುಂಜನ್ ಬಂಗ ಮಾತನಾಡಿ, ನಮ್ಮ ದೇಶದಲ್ಲಿ ಹುಟ್ಟುವ ಶೇ.4-6 ಮಕ್ಕಳಲ್ಲಿ ಹೃದಯ ಸಂಬಂಧಿ ಕಾಯಿಲೆ ಕಂಡು ಬರುತ್ತಿದೆ. ಆದರೆ ಇದು ಯಾವುದು ಕೂಡಾ ಮಾರಣಾಂತಿಕವಲ್ಲ. ಮಕ್ಕಳಲ್ಲಿ ಈ ತೊಂದರೆಗೆ ನಿರ್ದಿಷ್ಟ ಕಾರಣಗಳಿಲ್ಲ. ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಈ ತೊಂದರ ಹೆಚ್ಚಿದೆ. ಕೆಎಂಸಿಯಲ್ಲಿ ಗರ್ಭಾವಸ್ಥೆಯಲ್ಲಿಯೇ ಈ ಕಾಯಿಲೆಗಳನ್ನು ಪತ್ತೆ ಮಾಡುವ ವಿಶ್ವದರ್ಜೆಯ ವ್ಯವಸ್ಥೆವಿದ್ದು, ಮಕ್ಕಳು ಹುಟ್ಟಿದ ತಕ್ಷಣವೇ ಸೂಕ್ತ ಚಿಕಿತ್ಸೆ ಕೊಟ್ಟರೆ ಮಕ್ಕಳ ಮರಣ ಪ್ರಮಾಣ ತಗ್ಗಿಸಬಹುದೆಂದು ಹೇಳಿದರು.

ಮಕ್ಕಳ ಈ ಶಸ್ತ್ರಚಿಕಿತ್ಸೆಗಳನ್ನು ನಡೆಸಿದ ಡಾ.ಅರವಿಂದ್ ಬಿಷ್ಣೋಯ್, ಈ ಚಿಕಿತ್ಸೆಯಲ್ಲಿ ಕೈ ಜೋಡಿಸಿದ ನವಜಾತ ಶಿಶು ವಿಭಾಗದ ಡಾ.ಗುರುಪ್ರಸಾದ್ ರೈ, ಡಾ.ಅಪೂರ್ವ ಬರ್ಜೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ಮಾರ್ಕೆಟಿಂಗ್ ವಿಭಾಗದ ಮುಖ್ಯ ವ್ಯವಸ್ಥಾಪಕ ಸಚಿನ್ ಕಾರಂತ್, ವ್ಯವಸ್ಥಾಪಕ ಮೋಹನ್ ಶೆಟ್ಟಿ ಉಪಸ್ಥಿತರಿದ್ದರು.

ಹೃದಯ ಪರೀಕ್ಷೆ ಸಂಖ್ಯೆ ಹೆಚ್ಚಳ

ಸಿನೆಮಾ ನಟ ಪುನೀತ್ ರಾಜ್‌ಕುಮಾರ್ ಹೃದ್ರೋಗದಿಂದ ನಿಧನರಾದ ಬಳಿಕ ಆಸ್ಪತ್ರೆಗೆ ಬಂದು ಹೃದಯ ಪರೀಕ್ಷೆ ಮಾಡಿಸಿ ಕೊಳ್ಳುವವರ ಸಂಖ್ಯೆ ಶೇ. 30-40ರಷ್ಟು ಹೆಚ್ಚಾಗಿದೆ. ಇಂತಹ ಅನಾವಶ್ಯಕ ಹೆದರಿಕೆ ಬೇಕಾಗಿಲ್ಲ ಎಂದು ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ.ಪದ್ಮಕುಮಾರ್ ಎಂದು ತಿಳಿಸಿದರು.

ಹೃದ್ರೋಗದ ಲಕ್ಷಣಗಳಿದ್ದರೆ ಮಾತ್ರ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಬೇಕು. ವಿಪರೀತ ವ್ಯಾಯಾಮ ಮಾಡದೇ, ಲಘವಾದ ವ್ಯಾಯಾಮವಷ್ಟೇ ಮಾಡುವಂತೆ ಅವರು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News