×
Ad

ಅಮಾಸೆಬೈಲು; ನವಜಾತ ಹೆಣ್ಣು ಶಿಶು ಪತ್ತೆ ಪ್ರಕರಣ: ಮಹಿಳೆ ಸಹಿತ ಇಬ್ಬರ ಬಂಧನ

Update: 2021-12-04 21:03 IST

ಅಮಾಸೆಬೈಲು, ಡಿ.4: ಎರಡು ದಿನಗಳ ಹಿಂದೆ ಮಚ್ಚಟ್ಟು ಕಾಡು ಪೊದೆಯಲ್ಲಿ ನವಜಾತ ಹೆಣ್ಣು ಶಿಶುವನ್ನು ಎಸೆದು ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿದಂತೆ ಇಬ್ಬರನ್ನು ಅಮಾಸೆಬೈಲು ಪೊಲೀಸರು ಶನಿವಾರ ಬೆಳಗ್ಗೆ ಬಂಧಿಸಿದ್ದಾರೆ.

ಕೊಲ್ಲೂರು ಸಮೀಪದ ಜಡ್ಕಲ್-ಮುದೂರಿನ ರಾಧಾ(40) ಹಾಗೂ ಸತೀಶ್ (43) ಬಂಧಿತ ಆರೋಪಿಗಳು. ಇವರಿಬ್ಬರು ಎಸ್ಟೇಟ್ವೊಂದರಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದು, ಇಬ್ಬರಿಗೂ ಬೇರೆ ಬೇರೆ ವಿವಾಹವಾಗಿದೆ. ತಮ್ಮ ಪತಿ ಪತ್ನಿಯನ್ನು ತೊರೆದಿರುವ ಇವರಿಬ್ಬರು ಕಳೆದ ಒಂದು ವರ್ಷದಿಂದ ಅನ್ಯೋನ್ಯವಾಗಿದ್ದರು.

ಅಕ್ರಮ ಸಂಬಂಧದಿಂದ ಗರ್ಭಿಣಿಯಾಗಿದ್ದ ರಾಧಾ, ಹಾಲಾಡಿ ಬಳಿಯ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಳು. ಬಳಿಕ ಮಗು ಬೇಡ ಎಂದು ತೀರ್ಮಾನಿಸಿ ಇವರಿಬ್ಬರು ದ್ವಿಚಕ್ರ ವಾಹನದಲ್ಲಿ ಬಂದು ಮಗುವನ್ನು ಪೊದೆ ಯಲ್ಲಿ ಎಸೆದು ಹೋಗಿದ್ದರು.

ಡಿ.1ರಂದು ಸಂಜೆ 4.30ರ ಸುಮಾರಿಗೆ ಮಚ್ಚಟ್ಟು ಮಡಿವಾಳಕಟ್ಟುವಿನ ಗೀತಾ ಎಂಬವರು ಹಾಲು ಡೈರಿಗೆ ಹೋಗುತ್ತಿದ್ದಾಗ ಪೊದೆಯ ಒಳಗೆ ಮಗು ಅಳುವ ಧ್ವನಿ ಕೇಳಿಸಿತ್ತು. ಹಾಗೆ ಪೊದೆ ಬಳಿ ಹೋಗಿ ನೋಡಿದಾಗ ಸುಮಾರು 7 ದಿನಗಳ ನವಜಾತ ಹೆಣ್ಣು ಶಿಶು ಪತ್ತೆಯಾಗಿತ್ತು. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು ಎರಡೇ ದಿನಗಳ ಒಳಗೆ ಆರೋಪಿಗಳ್ನು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ.

ಮಗುವನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಚೇತರಿಸಿಕೊಂಡ ಬಳಿಕ ಮಗುವನ್ನು ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿಯವರು ಮುಂದಿನ ಕ್ರಮಕ್ಕಾಗಿ ಒಪ್ಪಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕುಂದಾಪುರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News