ಭಾರತಕ್ಕೆ ಅಪ್ಪಳಿಸಲಿದೆಯೇ ಒಮೈಕ್ರಾನ್ ಅಲೆ ?

Update: 2021-12-05 01:55 GMT
ಫೈಲ್ ಫೋಟೊ (PTI)

ಮುಂಬೈ: ಭಾರತಕ್ಕೆ ಒಮೈಕ್ರಾನ್ ಅಲೆ ಅಪ್ಪಳಿಸುವುದಾದರೆ ಆರರಿಂದ ಎಂಟು ವಾರಗಳನ್ನು ತೆಗೆದುಕೊಳ್ಳಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮಹಾರಾಷ್ಟ್ರದ ಮೊಲದ ಒಮೈಕ್ರಾನ್ ಪ್ರಕರಣ ಮುಂಬೈ ಮೆಟ್ರೊಪಾಲಿಟನ್ ಪ್ರದೇಶದಲ್ಲಿ ಪತ್ತೆಯಾಗಿದ್ದು, "ನಾವು ಕ್ಷಿಪ್ರವಾಗಿ ಲಸಿಕೆ ಪ್ರಕ್ರಿಯೆ ಪೂರ್ಣಗೊಳಿಸುವ ಮೂಲಕ ಮತ್ತು ಜನತೆ ಕೋವಿಡ್ ಸೂಕ್ತ ನಡವಳಿಕೆಗಳನ್ನು ಅನುಸರಿಸುವುದನ್ನು ಅದರಲ್ಲೂ ಮುಖ್ಯವಾಗಿ ಮಾಸ್ಕ್‌ಗಳನ್ನು ಸರಿಯಾಗಿ ಧರಿಸುವುದನ್ನು ಕಡ್ಡಾಯಪಡಿಸಲಿದ್ದೇವೆ" ಎಂದು ರಾಜ್ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಆರೋಗ್ಯ) ಡಾ.ಪ್ರದೀಪ್ ವ್ಯಾಸ್ ಹೇಳಿದ್ದಾರೆ.

"ತಕ್ಷಣಕ್ಕೆ ಒಮೈಕ್ರಾನ್ ಪ್ರಬೇಧದ ಬಗ್ಗೆ ಬಹಳಷ್ಟು ಅಂಶಗಳು ತಿಳಿದಿಲ್ಲ. ನಾವು ಹತಾಶರಾಗುವ ಅಗತ್ಯವಿಲ್ಲ; ಆದರೆ ಜಾಗೃತೆ ವಹಿಸಬೇಕು. ಮುಂದಿನ ಕೆಲ ವಾರಗಳಲ್ಲಿ ಡೆಲ್ಟಾ ಬದಲು ಬಂದಿರುವ ಒಮೈಕ್ರಾನ್ ಪ್ರಬೇಧದ ಬಗ್ಗೆ ಅಧ್ಯಯನ ನಡೆಸಬೇಕಿದೆ" ಎಂದು ರಾಜ್ಯ ಸರ್ಕಾರದ ಕೋವಿಡ್ ಕಾರ್ಯಪಡೆಯ ಸದಸ್ಯ ಡ.ಶಶಾಂಕ್ ಜೋಶಿ ಅಭಿಪ್ರಾಯಪಟ್ಟಿದ್ದಾರೆ.

ಡೆಲ್ಟಾ ಪ್ರಬೇಧದಲ್ಲಿ ಸಾಕಷ್ಟು ಹಾನಿ ಅನುಭವಿಸಿದ್ದ ಭಾರತದಲ್ಲಿ ಒಮೈಕ್ರಾನ್ ಹೇಗೆ ವರ್ತಿಸುತ್ತದೆ ಎಂಬುದನ್ನು ಅಧ್ಯಯನ ಮಾಡಲು ಮುಂದಿನ ಆರೆಂಟು ವಾರಗಳು ತೀರಾ ಪ್ರಮುಖ ಎಂದು ಅವರು ಹೇಳಿದ್ದಾರೆ. ಬಹುತೇಕ ಒಮೈಕ್ರಾನ್ ಪ್ರಕರಣಗಳು ಪ್ರವಾಸಕ್ಕೆ ಸಂಬಂಧಿಸಿವೆ. ದಕ್ಷಿಣ ಆಫ್ರಿಕಾ ಹೊರತುಪಡಿಸಿ ಉಳಿದ ದೇಶಗಳಲ್ಲಿ ಒಂದಷ್ಟು ಪ್ರಕರಣಗಳ ಬಗ್ಗೆ ಅಧ್ಯಯನ ಮಾಡಬೇಕಿದೆ. ಇದು ನಮಗೆ ಸಿದ್ಧತೆ ಮಾಡಿಕೊಳ್ಳಲು ಅನುಕೂಲವಾಗಲಿದೆ" ಎಂದು ಜೋಶಿ ಹೇಳಿದರು.

"ಮತ್ತೆ ನಾವು ಪತ್ತೆ, ಪರೀಕ್ಷೆ, ಚಿಕಿತ್ಸೆ ಎಂಬ ಸೂತ್ರಕ್ಕೆ ಮರಳಬೇಕಿದೆ. ಈ ಹಿಂದೆ ನೋಡಿದಂತೆ ಹೊಸ ಪ್ರಭೇದ ಪತ್ತೆಯಾದ ಬಳಿಕ ಅದು ವ್ಯಾಪಕವಾಗಿ ಹರಡಲು ಒಂದು ಅಥವಾ ಎರಡು ತಿಂಗಳು ತೆಗೆದುಕೊಳ್ಳಬಹುದು" ಎಂದು ಕಾರ್ಯಪಡೆಯ ಮತ್ತೊಬ್ಬ ಸದಸ್ಯ ಡಾ. ರಾಹುಲ್ ಪಂಡಿತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News