'ಕೋಲ್ಮಿಂಚು' ಹನಿಗವನ ಸಂಕಲನ ಬಿಡುಗಡೆ

Update: 2021-12-05 08:09 GMT

ಮಂಗಳೂರು, ಡಿ.5: ಮಹಿಳಾ ಸಾಹಿತಿಗಳಿಗೆ ಸಾಹಿತ್ಯದ ರಚನೆಗೆ ಕೌಟುಂಬಿಕ ವಾತಾವರಣ ಚೆನ್ನಾಗಿದ್ದಾಗ ಮತ್ತು ಉತ್ತಮ ಪ್ರೋತ್ಸಾಹ ದೊರೆತಾಗ ಅವರಿಂದ ಹಲವು ಒಳ್ಳೆಯ ಕೃತಿಗಳು ಹೊರಬರಲು ಸಾಧ್ಯ ಎಂದು ಹಿರಿಯ ಸಾಹಿತಿ, ಸಂಶೋಧಕಿ ಬಿ.ಎಂ.ರೋಹಿಣಿ ಅಭಿಪ್ರಾಯಪಟ್ಟರು.

ಕರಾವಳಿ ಲೇಖಕಿಯರ-ವಾಚಕೀಯರ ಸಂಘ, ಚುಟುಕು ಸಾಹಿತ್ಯ ಪರಿಷತ್ತು ಮಂಗಳೂರು ಹಾಗೂ ಸುಶಾಂತ ಪ್ರಕಾಶನ ಬೆಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಉರ್ವಸ್ಟೋರ್ ನ ಸಾಹಿತ್ಯ ಸದನದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ನಿವೃತ್ತ ಶಿಕ್ಷಕಿ ನಳಿನಾಕ್ಷಿ ಉದಯರಾಜ್ ಅವರ ಕೃತಿ 'ಕೋಲ್ಮಿಂಚು' ಹನಿಗವನ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಮಹಿಳಾ ಸಾಹಿತಿಗಳಿಗೆ ಸಾಹಿತ್ಯಕ್ಷೇತ್ರದಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳಲು ಅವರಿಗೆ ಕೌಟುಂಬಿಕ ಪರಿಸರ ಅಡ್ಡಿಯಾಗಬಾರದು. ಬದುಕಿನ ಎಡರು-ತೊಡರುಗಳನ್ನು ದಾಟಿ ನಳಿನಾಕ್ಷಿ ಉದಯರಾಜ್ ಸಾಹಿತ್ಯಕ್ಷೇತ್ರದಲ್ಲಿ ಮಾಡುತ್ತಿರುವ ಸಾಧನೆ ಶ್ಲಾಘನೀಯವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ಅಧ್ಯಕ್ಷೆ ಡಾ.ಜ್ಯೋತಿ ಚೇಳ್ಯಾರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ವಿಜಯಲಕ್ಷ್ಮಿ ಕಟೀಲು ಕೃತಿಯ ಬಗ್ಗೆ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜೇಶ್, ಮಂಗಳೂರು ಸಂತ ಆ್ಯಗ್ನೆಸ್ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಅರುಣ್ ಉಳ್ಳಾಲ್ ಶುಭ ಹಾರೈಸಿದರು.

ಲೇಖಕಿ ನಳಿನಾಕ್ಷಿ ಉದಯರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಶಾಂತ ಪ್ರಕಾಶನದ ಸುಶಾಂತ್ ರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಾಹಿತಿ ಸದಾನಂದ ನಾರಾವಿ ಸ್ವಾಗತಿಸಿದರು. ಲೇಖಕಿ ಅರುಣಾ ನಾಗರಾಜ್ ವಂದಿಸಿದರು.

ಮಂಗಳೂರು ಚುಟುಕು ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷ  ಸುಬ್ರಾಯ ಭಟ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News