ಯುಪಿಎಸ್‌ಸಿಯಲ್ಲಿ ರ‍್ಯಾಂಕ್‌ ಪಡೆದಿದ್ದೇನೆಂದು ಸುಳ್ಳು ಹೇಳಿ ನಗೆಪಾಟಲಿಗೀಡಾದ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ

Update: 2021-12-05 15:50 GMT

ಹೊಸದಿಲ್ಲಿ: ಈ ಹಿಂದೆ ಹಲವಾರು ಬಾರಿ ತನ್ನ ಹೇಳಿಕೆಗಳಿಂದ ನಗೆಪಾಟಲಿಗೀಡಾಗಿದ್ದ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್‌ ಪಾತ್ರ ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಟಿವಿ ವಾಹಿನಿಯ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಬಿತ್‌ ಪಾತ್ರ ತಮ್ಮ ಶೈಕ್ಷಣಿಕ ಹಿನ್ನೆಲೆಯ ಕುರಿತು ಸುಳ್ಳು ಹೇಳಿದ್ದಾರೆ ಎಂದು ಕಾಂಗ್ರೆಸ್‌ ಪಕ್ಷದ ನಾಯಕರು ಆರೋಪಿಸಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ನಾನು ಎಂಬಿಬಿಎಸ್‌, ಎಂಎಸ್‌ ಮಾಡಿದ್ದೇನೆ. ಎಮ್‌ಆರ್ಸಿಎಸ್‌ ಅನ್ನು ಲಂಡನ್‌ ನಿಂದ ಪೂರೈಸಿದ್ದೇನೆ. ೨೦೦೦ ಇಸವಿಯಲ್ಲಿ ನಡೆದ ಯುಪಿಎಸ್ಸಿ ಪರೀಕ್ಷೆಯಲ್ಲಿ ೧೯ನೇ ರ್ಯಾಂಕ್‌ ಪಡೆದಿದ್ದೆ" ಎಂದು ಅವರು ಹೇಳಿಕೆ ನೀಡಿದ್ದರು.

ಈ ನಡುವೆ ಕಾಂಗ್ರೆಸ್‌ ಮುಖಂಡ ಆದಿತ್ಯ ಗೋಸ್ವಾಮಿ ಸಂಬಿತ್‌ ಪಾತ್ರ ವೀಡಿಯೋವನ್ನು ಶೇರ್‌ ಮಾಡಿದ್ದು, ಅವರು ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿದ್ದಾರೆ. ಸಂಬಿತ್‌ ಎಂಬ ಹೆಸರಿನ ಒಬ್ಬರೂ ರ್ಯಾಂಕ್‌ ಪಡೆಯಲಿಲ್ಲ ಎಂದ ಅವರು, ಈ ಕುರಿತ ಪಟ್ಟಿಯಿರುವ ಲಿಂಕ್‌ ಅನ್ನೂ ಶೇರ್‌ ಮಾಡಿದ್ದಾರೆ. ಇನ್ನಿತರ ಕಾಂಗ್ರೆಸ್‌ ಮುಖಂಡರು ಹಾಗೂ ಸಾಮಾಜಿಕ ತಾಣ ಬಳಕೆದಾರರು ಸಂಬಿತ್‌ ಸುಳ್ಳು ಹೇಳಿದ್ದಾರೆಂದು ಆರೋಪಿಸಿದ್ದಾರೆ.

ಈ ವಿವಾದಕ್ಕೆ ಪ್ರತಿಕ್ರಿಯಿಸಿದ ಸಂಬಿತ್‌ ಪಾತ್ರ, "ಸಿಎಸ್‌ಇ ಮಾತ್ರವಲ್ಲದೇ ಮೆಡಿಕಲ್‌ ಕ್ಷೇತ್ರದಲ್ಲೂ ಯುಪಿಎಸ್ಸಿ ಪರೀಕ್ಷೆ ಆಯೋಜಿಸಲಾಗುತ್ತದೆ. ಸ್ವಯಂಘೋಷಿತ ಸುಶಿಕ್ಷಿತರು ಇದನ್ನು ಅರಿತಿರಬೇಕು" ಎಂದಿದ್ದಾರೆ. ಆದರೆ ಯುಪಿಎಸ್ಸಿ ಮೆಡಿಕಲ್‌ ಗೆ ಸಂಬಂಧಿಸಿದ ಯಾವುದೇ ಮಾಹಿತಿಗಳು, ಡಾಟಾಗಳು ಇಂಟರ್ನೆಟ್‌ ನಲ್ಲಿ ಲಭ್ಯವಿಲ್ಲ ಎಂದು ಆದಿತ್ಯ ಗೋಸ್ವಾಮಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News