‘ಮಧ್ಯಮವರ್ಗದ ‘ಅಸ್ತಿತ್ವವಾದಿ ಹೋರಾಟ’ಗಳನ್ನು ಸೆರೆ ಹಿಡಿದ ರೇ : ಪ್ರೊ.ಮನು ಚಕ್ರವರ್ತಿ

Update: 2021-12-05 15:50 GMT

ಮಣಿಪಾಲ, ಡಿ.5: ದೇಶದ ‘ಮಾಸ್ಟರ್ ಚಲನಚಿತ್ರ ನಿರ್ಮಾತೃ’, ವಿಶ್ವಖ್ಯಾತ ಬಂಗಾಳಿ ಚಿತ್ರನಿರ್ದೇಶಕ ಸತ್ಯಜಿತ್ ರೇ ಜಾಗತೀಕರಣದಿಂದ ಉದ್ಭವಿಸುವ ಸಮಸ್ಯೆಗಳ ಬಗ್ಗೆ ‘ಭವಿಷ್ಯಸೂಚಕ’ವೆನಿಸುವ ಮಾತುಗಳನ್ನಾಡಿ, ಮಧ್ಯಮ ವರ್ಗದ ‘ಅಸ್ತಿತ್ವವಾದಿ ಹೋರಾಟ’ಗಳನ್ನು ತಮ್ಮ ಅನೇಕ ಚಲನಚಿತ್ರಗಳಲ್ಲಿ ಸೆರೆಹಿಡಿದಿದ್ದಾರೆ ಎಂದು ರಾಷ್ಟ್ರೀಯ ಸ್ವರ್ಣ ಕಮಲ ಪ್ರಶಸ್ತಿ ವಿಜೇತ ಚಲನಚಿತ್ರ ವಿಮರ್ಶಕ ಪ್ರೊ.ಎನ್.ಮನು ಚಕ್ರವರ್ತಿ ಹೇಳಿದ್ದಾರೆ.

ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆಟ್ಸರ್ ಆ್ಯಂಡ್ ಸೈನ್ಸಸ್ (ಜಿಸಿಪಿಎಎಸ್) ವತಿಯಿಂದ ಸತ್ಯಜಿತ್ ರೇ ಜನ್ಮ ಶತಮಾನೋತ್ಸವದ (1921-1992) ಸಂಸ್ಮರಣೆಯ ಅಂಗವಾಗಿ ಆಯೋಜಿಸಿದ್ದ ‘ಸತ್ಯಜಿತ್ ರೇ-ನಮ್ಮ ಕಾಲದಲ್ಲಿ’ ವಿಷಯದ ವಿಶೇಷ ಉಪನ್ಯಾಸದಲ್ಲಿ ಪ್ರೊ.ಚಕ್ರವರ್ತಿ ಮಾತನಾಡುತ್ತಿದ್ದರು.

ಸತ್ಯಜಿತ್ ರೇ ಅವರು ತಮ್ಮ ಮಹಾನಗರ್, ನಾಯಕ್, ಪ್ರತಿಧ್ವನಿ, ಸೀಮಾಬಧ್ ಮುಂತಾದ ಅನೇಕ ಚಲನಚಿತ್ರಗಳಲ್ಲಿ ಬಂಡವಾಳಶಾಹಿ ಜಾಗತೀಕರಣದ ಹಲವು ಸ್ವರೂಪಗಳನ್ನು ಉಲ್ಲೇಖಿಸಿದ್ದಾರೆ ಎಂದರು.

ಸತ್ಯಜಿತ್ ರೇ ಅವರ ಚಲನಚಿತ್ರವೊಂದರ ಸಂಭಾಷಣೆಯನ್ನು ಉಲ್ಲೇಖಿ ಮಾತನಾಡಿದ ಅವರು, ಮನುಷ್ಯ ಚಂದ್ರನ ಮೇಲೆ ಪಾದಾರ್ಪಣೆ ಮಾಡಿರುವು ದಕ್ಕಿಂತಲೂ, ಆಧುನಿಕ ಯುಗದಲ್ಲಿ ನ್ಯಾಯ ಮತ್ತು ಸಮಾನತೆ ಪ್ರಜ್ಞೆಯ ಉಗಮವೇ ಉನ್ನತ ಸಾಧನೆಯಾಗಿದೆ ಎಂದು ನಂಬಿದ್ದರು. ರೇ ಅವರು ಚಿತ್ರಿಸಿದ ಮಹಿಳಾ ಪಾತ್ರಗಳು ಗಟ್ಟಿತನ ಮತ್ತು ಮಾಮೂಲಿಗಿಂತ ವಿಭಿನ್ನವಾಗಿದ್ದು ಗಮನ ಸೆಳೆಯುವ ಪಾತ್ರಗಳಾಗಿವೆ. ವಾಸ್ತವವಾಗಿ, ಪ್ರಬಲ ಪುರುಷವಾದಿ ನಿರೂಪಣೆಗೆ ಪ್ರತಿಸ್ಪರ್ಧಿಯಾಗಿದ್ದವು ಎಂದು ಪ್ರೊ.ಚಕ್ರವರ್ತಿ ಅಭಿಪ್ರಾಯಪಟ್ಟರು.

ರಾಜಾರಾಮ್ ಮೋಹನ್‌ರಾಯ್, ಈಶ್ವರಚಂದ್ರ ವಿದ್ಯಾಸಾಗರ್ ಮತ್ತು ಗುರುದೇವ್ ರವೀಂದ್ರನಾಥ ಠಾಗೋರ್ ಅಲ್ಲದೇ ಮಹಾತ್ಮ ಗಾಂಧಿಯವರ ಬೌದ್ಧಿಕ ಪರಂಪರೆಯನ್ನು ಮೈಗೂಡಿಸಿಕೊಂಡ ರೇ, ವಸಾಹತುಶಾಹಿ, ರಾಷ್ಟ್ರೀಯತೆ, ಮಹಿಳೆ, ಶಿಕ್ಷಣ, ಆಧುನಿಕತೆ, ಯುದ್ಧ ಮತ್ತು ಶಾಂತಿ ಇತ್ಯಾದಿಗಳ ಬಗ್ಗೆ ತಮ್ಮದೇ ಅಭಿಪ್ರಾಯಗಳನ್ನು ರೂಪಿಸಿಕೊಂಡಿದ್ದರು. ಅವರ ಘರೆ ಬೈರೆ, ಶತರಂಜ್ ಕಿ ಕಿಲಾಡಿ ಮುಂತಾದ ಚಿತ್ರಗಳಲಿ್ಲ ಇವು ಪ್ರತಿಫಲಿತವಾಗಿದೆ ಎಂದರು.

ಅಮಾನವೀಯ, ಬುದ್ಧಿಹೀನ ಜಾಗತೀಕರಣ ಪ್ರಕ್ರಿಯೆಯಲ್ಲಿ ಸಿದ್ಧ ಪಾಲುದಾರರಾಗುತ್ತಿರುವವರನ್ನು ತೀವ್ರವಾಗಿ ಟೀಕಿಸಿದ ಪ್ರೊ.ಚಕ್ರವರ್ತಿ, ರೇ ಚಲನಚಿತ್ರಗಳ ಮೂಲಕ ಅವರ ಅಭಿಪ್ರಾಯವನ್ನು ಉದಾಹರಿಸಿ, ಶೋಷಿತರ ದುಃಖದ ಭಾರದ ಶ್ರೀಮಂತಿಕೆ ಸಲ್ಲದು ಎಂದರು. 

ಪ್ರಾರಂಭದಲ್ಲಿ ಮಾತನಾಡಿದ ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ, ರೇ ತಮ್ಮ ಕಾಲದ ನೈಜತೆಯನ್ನು, ವಾಸ್ತವಿಕತೆಯನ್ನು ಸಿನಿಮೀಯ ವಿಧಾನದಲ್ಲಿ ಸೆರೆಹಿಡಿದು, ಮಹಾನ್ ಚಲನಚಿತ್ರ ನಿರ್ದೇಶಕರಾಗಿ ಹೊರ ಹೊಮ್ಮುವ ಮೂಲಕ ಅಭಿಜಾತ ಕೃತಿಗಳನ್ನು ನಿರ್ಮಿಸಿದ್ದಾರೆ ಎಂದರು.

ಮನಸ್ವಿನಿ ಶ್ರೀರಂಗಂ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಚಲನಚಿತ್ರ ಲೇಖಕಿ ಮೈಥಿಲಿ ರಾವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News