ಸಾವರ್ಕರ್‌ಗೆ ಹಿಂದೂ ಧರ್ಮದ ಬಗ್ಗೆ ವೈಜ್ಞಾನಿಕ ಮನೋಭಾವ ಇತ್ತು: ಶರದ್ ಪವಾರ್

Update: 2021-12-06 02:50 GMT
ಶರದ್ ಪವಾರ್

ನಾಸಿಕ್: ವಿನಾಯಕ ದಾಮೋದರ್ ಸಾವರ್ಕರ್ ಅವರಿಗೆ ಹಿಂದೂ ಧರ್ಮದ ಬಗ್ಗೆ ವೈಜ್ಞಾನಿಕ ದೃಷ್ಟಿಕೋನ ಇತ್ತು ಮತ್ತು ದಲಿತರು ದೇವಾಲಯ ಪ್ರವೇಶಿಸುವ ಸುಧಾರಣೆಯನ್ನು ಅವರು ಉತ್ತೇಜಿಸಿದ್ದರು ಎಂದು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಗುಣಗಾನ ಮಾಡಿದ್ದಾರೆ.

"ಗೋಮಾಂಸ ಮತ್ತು ಹಾಲಿನ ಬಳಕೆಯನ್ನು ಸಾವರ್ಕರ್ ಪ್ರತಿಪಾದಿಸಿದ್ದರು. ಅವರು ವಿಚಾರವಾದಿ. ಅವರು ಸಮಸ್ಯೆಗಳನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನೋಡುತ್ತಿದ್ದರು ಎನ್ನುವುದನ್ನು ಕಡೆಗಣಿಸಲಾಗದು" ಎಂದು ನಾಸಿಕ್‌ನಲ್ಲಿ ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿದ ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಸಾವರ್ಕರ್ ಬಗ್ಗೆ ಯಾವ ಉಲ್ಲೇಖವೂ ಇಲ್ಲದ್ದರಿಂದ ಸಮ್ಮೇಳನಕ್ಕೂ ಬಿಜೆಪಿಗೂ ಸಂಬಂಧವೇ ಇಲ್ಲ ಎಂದು ವಿರೋಧ ಪಕ್ಷದ ಮುಖಂಡ ದೇವೇಂದ್ರ ಫಡ್ನವೀಸ್ ಹೇಳಿಕೆ ನೀಡಿದ ಬೆನ್ನಲ್ಲೇ ಶರದ್ ಪವಾರ್ ಅವರ ಹೇಳಿಕೆ ಅಚ್ಚರಿ ಮೂಡಿಸಿದೆ. "ಸಂಘಟಕರು ಉದ್ದೇಶಪೂರ್ವಕವಾಗಿ ಅವರ ಹೆಸರನ್ನು ಬಿಟ್ಟಿದ್ದಾರೆ. ಅಲ್ಲಿ ಸಾವರ್ಕರ್‌ಗೆ ಅವಮಾನವಾಗಿದೆ. ನಾವು ಏಕೆ ಹೋಗಬೇಕು" ಎಂದು ಅವರು ಪ್ರಶ್ನಿಸಿದ್ದರು.

1938ರ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಸಾವರ್ಕರ್ ವಹಿಸಿದ್ದರು. ಈ ಬಾರಿಯ ಕಾರ್ಯಕ್ರಮದಲ್ಲಿ ಬಿಜೆಪಿಯ ಯಾವ ಮುಖಂಡರೂ ಭಾಗವಹಿಸಿರಲಿಲ್ಲ. ತಮಗೆ ಈ ಬಾರಿ ಆಹ್ವಾನವನ್ನೂ ನೀಡಿರಲಿಲ್ಲ ಎಂದು ಫಡ್ನವೀಸ್ ಅವರು ಸ್ಪಷ್ಟಪಡಿಸಿದ್ದರು.

ಬಿಜೆಪಿ ಅನಗತ್ಯ ವಿವಾದವನ್ನು ಸೃಷ್ಟಿಸಿದೆ ಎಂದು ಪವಾರ್ ಹೇಳಿದ್ದಾರೆ. ಸಾವರ್ಕರ್ ರತ್ನಗಿರಿಯಲ್ಲಿ ಸಣ್ಣ ದೇಗುಲವನ್ನು ನಿರ್ಮಿಸಿ, ಅಲ್ಲಿ ಪೂಜಾವಿಧಿಗಳನ್ನು ನೆರವೇರಿಸಲು ದಲಿತರೊಬ್ಬರನ್ನು ನೇಮಕ ಮಾಡಿದ್ದರು ಎಂದು ಪವಾರ್ ವಿವರಿಸಿದರು.

ಸಾಮಾಜಿಕ ಸಮಾನತೆಯ ಸಂದೇಶವನ್ನು ಸಾರಲು ಅವರು ಪ್ರಯತ್ನಿಸಿದರು. ಆ ದಿನಗಳಲ್ಲಿ ದಲಿತರಿಗೆ ದೇವಸ್ಥಾನ ಪ್ರವೇಶಿಸಲೂ ಅವಕಾಶ ಇರಲಿಲ್ಲ. ಅಂಥ ಸಂದರ್ಭದಲ್ಲಿ ದಲಿತರೊಬ್ಬರಿಗೆ ದೇವಾಲಯ ಹಸ್ತಾಂತರಿಸಿದ್ದು ಕಲ್ಪನಾತೀತ. ಇದು ಸಾವರ್ಕರ್ ವೈಜ್ಞಾನಿಕ ಮನೋಭಾವ ಹೊಂದಿದ್ದರು ಎನ್ನುವುದಕ್ಕೆ ನಿದರ್ಶನ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News