ಯತಿ ನರಸಿಂಹಾನಂದ ಸಮ್ಮುಖದಲ್ಲಿ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲಿರುವ ವಸೀಂ ರಿಝ್ವಿ: ವರದಿ

Update: 2021-12-06 06:35 GMT
Photo: ANI

ಹೊಸದಿಲ್ಲಿ: ಇಸ್ಲಾಂ ಧರ್ಮದ ಮೇಲಿನ ದ್ವೇಷದಿಂದ ಸುದ್ದಿಯಲ್ಲಿರುವ ವಸೀಂ ರಿಝ್ವಿ ಇದೀಗ ಧರ್ಮವನ್ನು ತೊರೆದು ಸೋಮವಾರ ಹಿಂದೂ ಧರ್ಮಕ್ಕೆ ಮತಾಂತರ ಗೊಳ್ಳಲಿದ್ದಾರೆಂದು ವರದಿಯಾಗಿದೆ.

ವರದಿಗಳ ಪ್ರಕಾರ ಶಿಯಾ ವಕ್ಫ್ ಮಂಡಳಿಯ ಮಾಜಿ ಸದಸ್ಯ ಹಾಗೂ  ಅಧ್ಯಕ್ಷ ವಸೀಂ ರಿಝ್ವಿ ಅವರು ಗಾಝಿಯಾಬಾದ್‌ನ ದಾಸ್ನಾ ದೇವಸ್ಥಾನದಲ್ಲಿ ಹಿಂದೂ ಧರ್ಮವನ್ನು ಸ್ವೀಕರಿಸಲಿದ್ದಾರೆ.

ಯತಿ ನರಸಿಂಹಾನಂದ ಗಿರಿ ಅವರು ವಸೀಂ ರಿಝ್ವಿ ಅವರ ಮತಾಂತರಕ್ಕಾಗಿ ಗಾಝಿಯಾಬಾದ್‌ನ ದಾಸ್ನಾ ದೇವಸ್ಥಾನದಲ್ಲಿ ಸಮಾರಂಭವನ್ನು ನಡೆಸಲಿದ್ದಾರೆ.

ತನ್ನ ಮರಣದ ನಂತರ, ತನ್ನನ್ನು ಸಮಾಧಿ ಮಾಡಬಾರದು, ಆದರೆ ಹಿಂದೂ ಸಂಪ್ರದಾಯಗಳ ಪ್ರಕಾರ ಅಂತ್ಯಸಂಸ್ಕಾರ ಮಾಡಬೇಕು ಎಂಬುದು ತನ್ನ ಬಯಕೆ ಎಂದು ವಸೀಂ  ರಿಝ್ವಿ ಇತ್ತೀಚೆಗೆ ಹೇಳಿದ್ದರು. ಯತಿ ನರಸಿಂಹಾನಂದ ತನ್ನ ಚಿತೆಗೆ ಅಗ್ನಿಸ್ಪರ್ಶ ಮಾಡಬೇಕು ಎಂಬ ಆಶಯವನ್ನೂ ವ್ಯಕ್ತಪಡಿಸಿದ್ದರು.

ವಸೀಂ ರಿಝ್ವಿ ಅವರು ವೀಡಿಯೋವನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಮುಸ್ಲಿಂ ಗುಂಪುಗಳು ತನ್ನನ್ನು ಕೊಲ್ಲಲು ಹಾಗೂ  ಶಿರಚ್ಛೇದ ಮಾಡಲು ಸಂಚು ರೂಪಿಸುತ್ತಿವೆ ಎಂದು ಶಂಕಿಸಿದ್ದಾರೆ. ವೀಡಿಯೋ ಸಂದೇಶದಲ್ಲಿ, "ನನ್ನ ಏಕೈಕ ಅಪರಾಧವೆಂದರೆ ನಾನು ಕುರಾನ್‌ನ 26 ಸೂಕ್ತಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದೇನೆ. ಮುಸ್ಲಿಮರು ನನ್ನನ್ನು ಕೊಲ್ಲಲು ಬಯಸುತ್ತಾರೆ ಮತ್ತು ಯಾವುದೇ ಸ್ಮಶಾನದಲ್ಲಿ ನನಗೆ ಸ್ಥಳ ನೀಡುವುದಿಲ್ಲ ಎಂದು ಘೋಷಿಸಿದ್ದಾರೆ ಎಂದು ಹೇಳಿದ್ದರು.

ಕುರಾನ್‌ನ ಕೆಲವು ಸೂಕ್ತಗಳನ್ನು ತೆಗೆದುಹಾಕುವಂತೆ ಮನವಿ ಸಲ್ಲಿಸಿದ್ದಕ್ಕಾಗಿ ರಿಝ್ವಿ ವಿವಾದಕ್ಕೀಡಾಗಿದ್ದರು. ಕುರಾನ್‌ನ 26 ಸೂಕ್ತಗಳು ಭಯೋತ್ಪಾದನೆಯನ್ನು ಉತ್ತೇಜಿಸುತ್ತದೆ ಎಂದು ಅವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಝ್ವಿಗೆ 50,000 ರೂ.ದಂಡ ವಿಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News