ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ ನಾಮಕರಣಕ್ಕೆ ಬಿಲ್ಲವ ಬ್ರಿಗೇಡ್ ಒತ್ತಾಯ

Update: 2021-12-06 09:51 GMT

ಮಂಗಳೂರು, ಡಿ. 6: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುಳುನಾಡಿನ ಕಾರಣಿಕ ಪುರುಷರಾದ ಕೋಟಿ ಚೆನ್ನಯರ ಹೆಸರು ಇರಿಸಬೇಕು ಎಂಬ ಬೇಡಿಕೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮುಂದಿನ ಒಂದು ತಿಂಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಮನೆ ಮನೆಯಲ್ಲಿ ಸ್ಟಿಕ್ಕರ್ ಅಭಿಯಾನ ನಡೆಸಲಾಗುವುದು ಎಂದು ಬಿಲ್ಲವ ಬ್ರಿಗೇಡ್ ಸಂಘಟನೆ ಹೇಳಿದೆ.

ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ಮಾತನಾಡಿದ ಬಿಲ್ಲವ ಬ್ರಿಗೇಡ್ ಸ್ಥಾಪಕಾಧ್ಯಕ್ಷ ಅವಿನಾಶ್ ಸುವರ್ಣ, ರಾಜ್ಯ ಸರಕಾರ ಮುಂದಿನ ಒಂದು ತಿಂಗಳೊಳಗೆ ಸಚಿವ ಸಂಪುಟ ಸಭೆಯಲ್ಲಿ ಮರುನಾಮಕರಣ ಪ್ರಸ್ತಾವನೆಯನ್ನು ಅಂಗೀಕರಿಸಿ ತಕ್ಷಣ ಕೇಂದ್ರ ಸರಕಾರಕ್ಕೆ ಕಳುಹಿಸಬೇಕು ಎಂದವರು ಹೇಳಿದರು.

ಕೇಂದ್ರ ಸರಕಾರ ಈ ಪ್ರಸ್ತಾವನೆ ಅಂಗೀಕರಿಸಿ ಶೀಘ್ರದಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರು ಇರಿಸಬೇಕು. ಈ ನಡುವೆ ಸಂಘಟನೆಯಿಂದ ಸ್ಟಿಕ್ಕರ್ ಅಭಿಯಾನ ನಡೆಯಲಿದೆ. ಈ ಅಭಿಯಾನ ಕೊನೆಗೊಂಡ ಬಳಿಕವೂ ಬೇಡಿಕೆ ಈಡೇರದೇ ಇದ್ದಲ್ಲಿ ಮಂಗಳೂರು ವಿಮಾನ ನಿಲ್ದಾಣ ಪ್ರವೇಶ ದ್ವಾರದ ಮುಂದೆ ಬೃಹತ್ ಜನ ಸಮಾವೇಶ ನಡೆಸಲಾಗುವುದು. ಆ ಮೂಲಕ ಬಿಲ್ಲವರ ಶಕ್ತಿ ಪ್ರದರ್ಶನ ಮಾಡಲಾಗುವುದು. ಇದಕ್ಕೆ ಅವಕಾಶ ನೀಡಬಾರದು ಎಂದಾಗಿದ್ದರೆ ತಕ್ಷಣ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಅವರು ಹೇಳಿದರು.

ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರು ಇರಿಸಬೇಕೆಂದು ಕಳೆದ ವರ್ಷ ಡಿಸೆಂಬರ್‌ನಲ್ಲಿ ಕುದ್ರೋಳಿ ಕ್ಷೇತ್ರ ದಿಂದ ವಿಮಾನ ನಿಲ್ದಾಣದವರೆಗೆ ಬೈಕ್ ಜಾಥಾ ಹಮ್ಮಿಕೊಳ್ಳಲಾಗಿತ್ತು. ಬಳಿಕ ಕಳೆದ ಡಿಸೆಂಬರ್‌ನಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಅವರು ಈ ಬಗ್ಗೆ ವಿಧಾನಸಭೆಯಲ್ಲಿ ಸರಕಾರದ ಗಮನ ಸೆಳೆದಿದ್ದರು. ಆದರೆ ಸರಕಾರದಿಂದ ಯಾವುದೇ ಪ್ರತಿಕ್ರಿಯೆ ದೊರಕಿಲ್ಲ. ಹಾಗಾಗಿ ಇದೀಗ ಹೋರಾಟಕ್ಕೆ ಮುಂದಾಗಿದ್ದು, ನಮ್ಮ ಹೋರಾಟ ಸರಕಾರ ಅಥವಾ ಯಾವುದೇ ಪಕ್ಷದ ವಿರುದ್ಧವಲ್ಲ ಎಂದವರು ಹೇಳಿದರು.

ಬಿಲ್ಲವ ಬ್ರಿಗೇಡ್ ಕಾರ್ಯಾಧ್ಯಕ್ಷ ಕಿಶನ್ ಅಮೀನ್ ಕಾಟಿಪಳ್ಳ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಸನಿಲ್, ಪವನ್ ಸಾಲ್ಯಾನ್, ಪ್ರಶಾಂತ್ ಮಂಗಳಾದೇವಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News