ಪೊಲೀಸರನ್ನು ನಿಂದಿಸಿರುವ ಗೃಹ ಸಚಿವರ ಮಾತುಗಳು ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿ: ರಮಾನಾಥ ರೈ

Update: 2021-12-06 10:52 GMT

ಮಂಗಳೂರು: ರಾಜ್ಯದ ಪೊಲೀಸರ ಬಗ್ಗೆ ನಿಂದಿಸಿ ಗೃಹ ಸಚಿವರು ಆಡಿದ ಮಾತುಗಳು ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಸುದ್ದಿಗೋಷ್ಠಿಯಲ್ಲಿಂದು ಆರೋಪಿಸಿದ್ದಾರೆ.

ಗೃಹ ಸಚಿವರು ತಮ್ಮ ಇಲಾಖೆಯ ಬಗ್ಗೆ ಆಡಿರುವ ಮಾತುಗಳು ಅವರ  ವೈಫಲ್ಯವನ್ನು ಸೂಚಿಸುತ್ತದೆ. ಅವರು ಇಲಾಖೆಯ ಮತ್ತು ಪೊಲೀಸರ ಬಗ್ಗೆ ಆಡಿರುವ ಕೀಳು ಮಟ್ಟದ ಮಾತುಗಳು ಆಡಳಿತ ವ್ಯವಸ್ಥೆ ಕುಸಿದಿರುವುದರ ಪ್ರತೀಕವಾಗಿದೆ. ಇದು ಸಚಿವರಿಗೆ ಶೋಭೆ ತರಲಾರದು. ಇದರಿಂದ ಕೆಲವು ಪ್ರಾಮಾಣಿಕ ಐಪಿಎಸ್ ಅಧಿಕಾರಿಗಳನ್ನು ಅವಮಾನಿಸಿದಂತಾಗಿದೆ. ಇಂತಹ ಮಾತುಗಳನ್ನು ಆಡುವ ಸಚಿವರಿಗೆ ತಮ್ಮ ಸಚಿವ ಸ್ಥಾನದಲ್ಲಿ ಮುಂದುರಿಯುವ ಅರ್ಹತೆ ಇಲ್ಲ ಎಂದು ರಮಾನಾಥ ರೈ ಟೀಕಿಸಿದ್ದಾರೆ.

ಪಂಚಾಯತ್ ವ್ಯವಸ್ಥೆ ಯನ್ನು ಬಿಜೆಪಿ ದುರ್ಬಲ ಗೊಳಿಸುತ್ತಾ ಬಂದಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಪಂಚಾ ಯತ್ ಗಳಲ್ಲಿ ಅಭಿವೃದ್ಧಿ ಸಂಪೂರ್ಣ ಕುಸಿದಿದೆ. ಯುಪಿಎ ಸರ್ಕಾರ ಆರಂಭಿಸಿರುವ ಉದ್ಯೋಗ ಖಾತ್ರಿ ಯೋಜನೆ ಹೊರತಾಗಿ ಎಲ್ಲಾ ಅಭಿವೃದ್ಧಿ ಯೋಜನೆಗಳು ಸ್ಥಗಿತ ಗೊಂಡಿದೆ. ಬಡವರಿಗೆ ಮನೆ ನಿರ್ಮಿಸಿ ಕೊಟ್ಟ ಉದಾಹರಣೆಗಳಿಲ್ಲ. ಈ ಕಾರಣದಿಂದ ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಪಂಚಾಯತ್ ಸದಸ್ಯರು ಬೆಂಬಲ ನೀಡಬೇಕು ಎಂದು ಮನವಿ ಮಾಡುವುದಾಗಿ ರಮಾನಾಥ ರೈ ತಿಳಿಸಿದ್ದಾರೆ.

ಬಿಜೆಪಿ ಅಪಪ್ರಚಾರದಲ್ಲಿ ಮುಂದೆ ಇದೆ

ಮತೀಯ ಕಾರಣದಿಂದ ನಡೆದ ಹತ್ಯೆಯಲ್ಲಿ ಕಾಂಗ್ರೆಸ್ ಪಕ್ಷದ ಯಾವುದೇ ಪಾತ್ರ ಇಲ್ಲದೆ ಇದ್ದರೂ ಪಕ್ಷದ ವಿರುದ್ಧ ಬಿಜೆಪಿ ಅಪಪ್ರಚಾರ ನಡೆಸಿದೆ. ಶ್ರಂಗೇರಿ ಶಾರದ ದೇವಸ್ಥಾನದಿಂದ ಕಾನೂನು ಬಾಹಿರವಾಗಿ ಮೂರುವರೆ ಕೋಟಿ ಹಣವನ್ನು ಕಲ್ಲಡ್ಕದ ಸಂಸ್ಥೆಗೆ  ವರ್ಗಾವಣೆ ಮಾಡಿರುವುದನ್ನ ನಾನು ವಿರೋಧಿಸಿದಾಗ ಕಾಂಗ್ರೆಸ್  ಮಕ್ಕಳಿಗೆ ಊಟ ಕೊಡುವುದಕ್ಕೆ ವಿರೋಧ ಮಾಡಿದೆ ಎಂದು ಬಿಜೆಪಿ ಪಕ್ಷದವರು ಅಪಪ್ರಚಾರ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಯಾವುದೇ ಸಂದರ್ಭದಲ್ಲಿ ಬಡ ಮಕ್ಕಳಿಗೆ ದೇವಸ್ಥಾನದ ಮೂಲಕ ಅನ್ನ ವಿತರಣೆ ಮಾಡುವ ಕೆಲಸಕ್ಕೆ ಪ್ರೋತ್ಸಾಹ ನೀಡುತ್ತಾ ಬಂದಿದೆ ಹೊರತು ವಿರೋಧಿಸಿಲ್ಲ ಎಂದು ರಮಾನಾಥ ರೈ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ದ.ಕ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಕಾಂಗ್ರೆಸ್ ಪದಾಧಿಕಾರಿಗಳಾದ ಶಾಹುಲ್ ಹಮೀದ್, ಕೋಡಿಜಾಲ್ ಇಬ್ರಾಹಿಂ, ಶಾಲೆಟ್ ಪಿಂಟೋ, ಲುಕ್ಮಾನ್ ಬಂಟ್ವಾಳ, ಪದ್ಮನಾಭ ನರಿಂಗಾನ, ಹರಿನಾಥ್, ಸುರೇಂದ್ರ ಕಾಂಬ್ಳಿ, ವಿಶ್ವಾಸ್ ದಾಸ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News