ಮಹಾರಾಷ್ಟ್ರ: ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಗಳಲ್ಲಿ ಶೇ 27ರಷ್ಟು ಒಬಿಸಿ ಮೀಸಲಾತಿಗೆ ಸುಪ್ರೀಂ ತಡೆಯಾಜ್ಞೆ

Update: 2021-12-06 10:57 GMT

ಹೊಸದಿಲ್ಲಿ: ಮಹಾರಾಷ್ಟ್ರದಲ್ಲಿ ಇತರ ಹಿಂದುಳಿದ ವರ್ಗಗಳಿಗೆ ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಗಳಲ್ಲಿ ಶೇ 27ರಷ್ಟು ಮೀಸಲಾತಿ ನೀಡುವಿಕೆಗೆ ಮುಂದಿನ ಆದೇಶದ ತನಕ ಸುಪ್ರೀಂ ಕೋರ್ಟ್ ಇಂದು ತಡೆಯಾಜ್ಞೆ ವಿಧಿಸಿದೆ.

ಇತರ ಹಿಂದುಳಿದ ವರ್ಗಗಳಿಗೆ ಶೇ 27 ಮೀಸಲಾತಿ ಒದಗಿಸಿ ಹೊರಡಿಸಲಾದ ಮಹಾರಾಷ್ಟ್ರ ಸುಗೀವಾಜ್ಞೆ ಹಾಗೂ ರಾಜ್ಯ ಚುನಾವಣಾ ಆಯೋಗ ಈ ನಿಟ್ಟಿನಲ್ಲಿ ಮುಂದೆ ಹೊರಡಿಸಿದೆ ಅಧಿಸೂಚನೆಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅಪೀಲಿನ ಮೇಲಿನ ವಿಚಾರಣೆ ನಂತರ ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್ ಮತ್ತು ಸಿ ಟಿ ರವಿಕುಮಾರ್ ಅವರ ನೇತೃತ್ವದ ಪೀಠ ತಡೆಯಾಜ್ಞೆ ವಿಧಿಸಿದೆ.

ಸೂಕ್ತ ಆಯೋಗವನ್ನು ರಚಿಸಿ ಅಗತ್ಯ ಅಂಕಿಅಂಶಗಳನ್ನು ಸಂಗ್ರಹಿಸಿ  ನಂತರ ಸ್ಥಳೀಯಾಡಳಿತಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ ಸೂಕ್ತ ಪ್ರಾತಿನಿಧ್ಯ ಇಲ್ಲದ ಕುರಿತು ಮಾಹಿತಿ ಸಂಗ್ರಹಿಸದೆ ಇಂತಹ ನೀತಿ ಜಾರಿಗೊಳಿಸುವುದು ಸರಿಯಲ್ಲ ಎಂದು ಹೇಳಿದ ನ್ಯಾಯಾಲಯ, ರಾಜ್ಯ ಚುನಾವಣಾ ಆಯೋಗ ಈ ನಿಟ್ಟಿನಲ್ಲಿ ಮುಂದಡಿಯಿಡಲು ಸಾಧ್ಯವಿಲ್ಲ, ಒಬಿಸಿ ವಿಭಾಗದ ಮೀಸಲು ಸೀಟುಗಳ ಕುರಿತಂತೆ  ಯಾವುದೇ ಚುನಾವಣೆಗೆ  ಮುಂದಿನ ಆದೇಶದ ತನಕ ರಾಜ್ಯ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸುವಂತಿಲ್ಲ ಎಂದು ಪೀಠ ಹೇಳಿದೆ.

ಸುಪ್ರೀಂ ಕೋರ್ಟ್  ನಿರ್ಧಾರಗಳನ್ನು ಬದಿಗೆ ಸರಿಸಲು ರಾಜ್ಯ ಸರಕಾರ ಸುಗ್ರೀವಾಜ್ಞೆಯ ಮೊರೆ ಹೋಗಿದೆ ಎಂದು ಹೇಳಿದ ನ್ಯಾಯಾಲಯ, ಸುಪ್ರೀಂ ಕೋರ್ಟ್‍ನ ಹಿಂದಿನ ತೀರ್ಪುಗಳಿಗೆ ಅನುಸಾರವಾಗಿಯೇ ಶೇ 27ರಷ್ಟು ಮೀಸಲಾತಿ ಘೋಷಿಸಲಾಗಿದೆ ಎಂಬ ವಾದವನ್ನು ಒಪ್ಪಿಲ್ಲ.

ಮಹಾರಾಷ್ಟ್ರದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ನಾಳೆ ಅಂತಿಮ ದಿನವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News