ಆಯುರ್ವೇದ, ಅಲೋಪತಿ ಜೊತೆಯಾಗಿಸುವ ಕೇಂದ್ರದ ಚಿಂತನೆ ಅಪಾಯಕಾರಿ: ಡಾ.ಸುರೇಶ್ ಕುಡ್ವ

Update: 2021-12-06 14:10 GMT

ಉಡುಪಿ, ಡಿ.6: ಆಯುರ್ವೇದ ಮತ್ತು ಅಲೋಪತಿ ಚಿಕಿತ್ಸೆಯನ್ನು ಜೊತೆಯಾಗಿಸುವ ಕುರಿತು ಕೇಂದ್ರ ಸರಕಾರ ಚಿಂತನೆ ನಡೆಸುತ್ತಿದೆ. ಇದರಿಂದ ಭಾರತೀಯ ವೈದ್ಯರಿಗೆ ವಿದೇಶದಲ್ಲಿ ಬೇಡಿಕೆ ಹಾಗೂ ವಿದೇಶದಿಂದ ಭಾರತಕ್ಕೆ ಕಲಿಯಲು ಬರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗುತ್ತದೆ. ಆಯುರ್ವೇದ ವೈದ್ಯರು ಅಲೋಪತಿ ಮತ್ತು ಅಲೋಪತಿ ವೈದ್ಯರು ಆಯುರ್ವೇದ ಚಿಕಿತ್ಸೆ ನೀಡುವುದು ಅಪಾಯಕಾರಿ. ಈ ನಿಟ್ಟಿನಲ್ಲಿ ಸರಕಾರ ಮತ್ತು ಸಾರ್ವಜನಿಕರು ಬಹಳ ಜಾಗೃತೆ ವಹಿಸಬೇಕಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಸ್ಥೆಯ ಕರ್ನಾಟಕ ರಾಜ್ಯಾಧ್ಯಕ್ಷ ಡಾ.ಸುರೇಶ್ ಕುಡ್ವ ಹೇಳಿದ್ದಾರೆ.

ಉಡುಪಿ ಲೋಂಬಾರ್ಡ್ ಮೆಮೋರಿಯಲ್(ಮಿಷನ್) ಆಸ್ಪತ್ರೆಯಲ್ಲಿ ಅಜಿಮ್ ಪ್ರೇಮ್‌ಜಿ ಫೌಂಡೇಶನ್ ಪ್ರಾಯೋಜಕತ್ವದಲ್ಲಿ 30ಲಕ್ಷ ರೂ. ವೆಚ್ಚದಲ್ಲಿ ಸ್ಥಾಪಿಸಲಾದ ಆಕ್ಸಿಜನ್ ಜನರೇಟರ್ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಸೋಮವಾರ ಮಾತನಾಡುತಿದ್ದರು.

ಇಂದು ಬಡ ದೇಶಗಳು ಕೂಡ ತಮ್ಮ ಜಿಡಿಪಿಯ ಶೇ.10ರಷ್ಟು ಹಣವನ್ನು ಆರೋಗ್ಯಕ್ಕೆ ಮೀಸಲಿಡುತ್ತಿವೆ. ಆದರೆ ಭಾರತ ಕೇವಲ ಶೇ.1.5ರಷ್ಟು ಹಣವನ್ನು ಮಾತ್ರ ಆರೋಗ್ಯಕ್ಕೆ ವಿನಿಯೋಗಿಸುತ್ತಿದೆ. ಭಾರತವು ಆರೋಗ್ಯ ಕ್ಷೇತ್ರಕ್ಕೆ ಶೇ.5ರಷ್ಟು ಹಣ ಮೀಸಲಿಡುವುದರಿಂದ ಆರೋಗ್ಯವಂತ ಸಮಾಜ ಹಾಗೂ ದೇಶ ಕಟ್ಟಲು ಸಾಧ್ಯವಾಗುತ್ತದೆ. ವೈದ್ಯಕೀಯ ಶಿಕ್ಷಣದ ವ್ಯಾಪಾರೀಕರಣ ಪರಿಣಾಮ ಇಂದು ಯಾವುದೇ ವೈದ್ಯರಿಗೂ ಉಚಿತ ಚಿಕಿತ್ಸೆ ನೀಡಲು ಸಾಧ್ಯಾಗುತ್ತಿಲ್ಲ ಎಂದು ಅವರು ತಿಳಿಸಿದರು.

ಸ್ವಾತಂತ್ರ ಪೂರ್ವ ಭಾರತದಲ್ಲಿ ಒಂದು ವರ್ಷದೊಳಗಿನ ಶಿಶುಗಳ ಮರಣ ಅನುಪಾತ 1000:195 ಇದ್ದರೆ, ಇಂದಿನ ಆಧುನಿಕ ವೈದ್ಯಕೀಯ ವ್ಯವಸ್ಥೆಯಿಂದ ನಗರದಲ್ಲಿ 1000:23 ಹಾಗೂ ಗ್ರಾಮೀಣ ಪ್ರದೇಶದಲ್ಲಿ 33 ಆಗಿದೆ. ಉಡುಪಿ ಯಲ್ಲಿ ಇದರ ಪ್ರಮಾಣ 8, ಕೇರಳದಲ್ಲಿ 4 ಇದೆ. ಅಮೆರಿಕ(1000:5)ಕ್ಕಿಂತ ಕೇರಳದಲ್ಲಿ ಶಿಶು ಮರಣ ಪ್ರಮಾಣ ಕಡಿಮೆ ಇದೆ. ಕೇರಳದಲ್ಲಿನ ಈ ಸಾಧನೆಗೆ ಅಲ್ಲಿನ ಉತ್ತಮ ಚಿಕಿತ್ಸಾ ಸೌಲಭ್ಯವೇ ಕಾರಣ ಎಂದರು.

ಅಧ್ಯಕ್ಷತೆ ವಹಿಸಿದ್ದ ಆಸ್ಪತ್ರೆಯ ನಿರ್ದೇಶಕ ಡಾ.ಸುನೀಲ್ ಜತ್ತನ್ನ ಮಾತನಾಡಿ, ರೂಪಾಂತರಿ ವೈರಸ್ ಹಾಗೂ ಮೂರನೆ ಅಲೆಯ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಮುಂಚೂಣಿ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡ ಬೇಕು. ಆದಷ್ಟು ಬೇಗ ಬಾಕಿ ಇರುವವರಿಗೆ ಎರಡನೇ ಡೋಸ್ ನೀಡಬೇಕು. ಕೋವ್ಯಾಕ್ಸಿನ್ ಎರಡನೇ ಡೋಸ್‌ನ್ನು 16 ವಾರಗಳ ಬದಲು 12 ವಾರಗಳ ನಂತರ ನೀಡಬೇಕು. ಇದರಿಂದ ಹೆಚ್ಚು ಜನರಿಗೆ ವೇಗವಾಗಿ ಲಸಿಕೆಯನ್ನು ನೀಡಲು ಸಾಧ್ಯವಾಗುತ್ತದೆ. ವಿದೇಶದಲ್ಲಿ ಇರುವಂತೆ ನಮ್ಮ ದೇಶದಲ್ಲೂ ಮಕ್ಕಳಿಗೂ ಡೋಸ್‌ಗಳನ್ನು ನೀಡುವ ಕಾರ್ಯ ಮಾಡಬೇಕೆಂದು ಹೇಳಿದರು.

ಘಟಕವನ್ನು ಬಡಗಬೆಟ್ಟು ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸಹಾಯಕ ಔಷಧ ನಿಯಂತ್ರಣಾಧಿಕಾರಿ ಕೆ.ವಿ.ನಾಗರಾಜ್, ನಗರಸಭೆ ಸದಸ್ಯ ಅಮೃತಾ ಕೃಷ್ಣಮೂರ್ತಿ ಆಚಾರ್ಯ, ಕೆಎಸ್‌ಡಿ ಉಡುಪಿ ಏರಿಯಾ ಚೇಯರ್ ವೆುನ್ ರೆ.ಐವನ್ ಡಿ.ಸೋನ್ಸ್, ಧರ್ಮಗುರು ರೇಚಲ್ ಉಪಸ್ಥಿತರಿದ್ದರು.

ಆಸ್ಪತ್ರೆಯ ಹಿರಿಯ ವೈದ್ಯಕೀಯ ಅಧಿಕಾರಿ ಡಾ.ಗಣೇಶ್ ಕಾಮತ್ ಸ್ವಾಗತಿಸಿದರು. ರೋಹಿತ್ ಕಾರ್ಯಕ್ರಮ ನಿರೂಪಿಸಿದರು. ಉಡುಪಿ ಶಾಸಕ ಕೆ.ರಘುಪತಿ ಭಟ್ ಘಟಕಕ್ಕೆ ಭೇಟಿ ನೀಡಿ ವೀಕ್ಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News