ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಬೀಚ್ ಸ್ವಚ್ಛತಾ ಕಾರ್ಯಕ್ರಮ

Update: 2021-12-06 14:23 GMT

ಮಂಗಳೂರು, ಡಿ.6: ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಸತತ 6ನೇ ವಾರ ಬೀಚ್ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಹೆಜಮಾಡಿಕೋಡಿಯ 4ಕಿಮೀ ವ್ಯಾಪ್ತಿಯಲ್ಲಿ ಅಳಿವೆ ಪ್ರದೇಶದ ತ್ಯಾಜ್ಯವನ್ನು ಮುಲ್ಕಿಯ ಸರ್ಫಿಂಗ್ ಸ್ವಾಮಿ ಫೌಂಡೇಶನ್ ಸಹಯೋಗದಲ್ಲಿ ಸ್ವಚ್ಛಗೊಳಿಸಲಾಯಿತು.

ನದಿ ನೀರನ್ನು ಕಲುಷಿತಗೊಳಿಸುವ ಜತೆಗೆ ಅಳಿವೆ ಪ್ರದೇಶಗಳಲ್ಲಿ ಶೇಖರಣೆಯಾಗಿ ಅಲ್ಲಿನ ಜೀವವೈವಿಧ್ಯಕ್ಕೆ ಹಾನಿಯುಂಟು ಮಾಡುವ ಪ್ಲಾಸ್ಟಿಕ್, ಗಾಜು, ರಬ್ಬರ್ ಫೋಮ್ ಮುಂತಾದ ತ್ಯಾಜ್ಯ ವಸ್ತುಗಳನ್ನು ಬೇರೆ ಬೇರೆಯಾಗಿ ಸಂಗ್ರಹಿಸಲಾಯಿತು. 6 ವಾರಗಳಲ್ಲಿ ಸುಮಾರು 22 ಟನ್‌ಗಳಷ್ಟು ಕಸ ಸಂಗ್ರಹಣೆ ಮಾಡಲಾಗಿದ್ದು, ಬೈಕಂಪಾಡಿಯ ತ್ಯಾಜ್ಯ ವಿಲೇವಾರಿ ಘಟಕಕ್ಕೆ ನೀಡಲಾಯಿತು.

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಚರ್ಫ್ ಹಾಗೂ ಸೃಷ್ಠಿ ನೇಚರ್ ಕ್ಲಬ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ರಿಸರ್ಚ್ ವಿದ್ಯಾರ್ಥಿಗಳು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಎನ್‌ಸಿಸಿ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 1000 ವಿದ್ಯಾರ್ಥಿಗಳು ಸ್ವಚ್ಛತೆಯಲ್ಲಿ ಭಾಗವಹಿಸಿದ್ದರು.

ಬಿಗ್‌ಬಾಸ್ ಖ್ಯಾತಿಯ ಅರವಿಂದ್ ಕೆ.ಪಿ., ದಿವ್ಯಾ ಉರುಡುಗ, ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ರಂಜನ್ ಬೆಳ್ಳರ್ಪಾಡಿ, ರಾಷ್ಟ್ರೀಯ ಮೋಟಾರ್‌ ಸ್ಪೊರ್ಟ್ಸ್ ನೇವಿಗೇಟರ್ ಮೂಸಾ ಶರೀಫ್, ಸರ್ಫಿಂಗ್ ಸ್ವಾಮಿ ಫೌಂಡೇಶನ್‌ನ ನಿರ್ದೇಶಕ ಗೌರವ್ ಹೆಗ್ಡೆ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, ವಿವಿಧ ವಿಭಾಗಗಳ ಉಪನ್ಯಾಸಕರು, ಸರ್ಫಿಂಗ್ ಸ್ವಾಮಿ ಫೌಂಡೇಶನ್ ಸದಸ್ಯರು ಸ್ವಚ್ಛತಾ ಕಾಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಆಳ್ವಾಸ್ ವಿದ್ಯಾರ್ಥಿಗಳ ಸ್ವಚ್ಛತಾ ಶ್ರಮದಾನ ನಮ್ಮೆಲ್ಲರಿಗೂ ಪ್ರೇರಣೆ. ಇದು ಕೇವಲ ಸ್ವಚ್ಛತಾ ಕಾರ್ಯವಲ್ಲ ಬದಲಿಗೆ ಜಾಗೃತ ನಾಗರಿಕರನ್ನು ನಿರ್ಮಾಣ ಮಾಡುವ ನಿರಂತರ ಪ್ರಕ್ರಿಯೆ ಎಂದು ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ರಂಜನ್ ಬೆಳ್ಳರ್ಪಾಡಿ ಅಭಿಪ್ರಾಯಿಸಿದ್ದಾರೆ.

ಆಳ್ವಾಸ್ ಕಾಲೇಜಿನ ಸಮಾಜಮುಖಿ ಕಾರ್ಯದಲ್ಲಿ ಭಾಗಿಯಾಗಲು ನನಗೆ ಹೆಮ್ಮೆ ಅನಿಸುತ್ತಿದೆ. ಇದು ನಮ್ಮ ಪ್ರಕೃತಿಯನ್ನು ಸ್ವಚ್ಛವಾಗಿಡಲು ಪ್ರತಿಯೊಬ್ಬರಿಗೂ ಉತ್ತಮ ಪ್ರೇರಣೆ ಮತ್ತು ಸಂದೇಶವಾಗಿದೆ ಎಂದು ರಾಷ್ಟ್ರೀಯ ಮೋಟಾರ್ ಸ್ಪೋರ್ಟ್ಸ್ ನೇವಿಗೇಟರ್ ಮೂಸಾ ಶರೀಫ್ ಅಭಿಪ್ರಾಯಿಸಿದ್ದಾರೆ.

ಅಳಿವೆ ಪ್ರದೇಶದಲ್ಲಿ ವೈವಿಧ್ಯಮಯ ಜೀವಸಂಕುಲವಿದೆ. ಇಂತಹ ಜಲಮೂಲಗಳ ಸಂರಕ್ಷಣೆಗೆ ಆಳ್ವಾಸ್ ಸಂಸ್ಥೆಯು ವಿವಿಧ ಕ್ರಮಗಳನ್ನು ರೂಪಿಸುತ್ತಾ ಬಂದಿದೆ. ಹೆಜಮಾಡಿಕೋಡಿ ಬಳಿಕ ಬೇಂಗ್ರೆ ಬೀಚ್ ಸ್ವಚ್ಛತೆಗೂ ಪ್ರಾಮುಖ್ಯತೆ ನೀಡಲಾಗುವುದು. ನದಿ ಸ್ವಚ್ಛತೆಯ ಜತೆಗೆ ಮುಂದಿನ ದಿನಗಳಲ್ಲಿ ತ್ಯಾಜ್ಯಗಳನ್ನು ನದಿಗೆ ಬಿಸಾಡದಂತೆ ತಡೆಯುವ ಯೋಜನೆಗಳನ್ನೂ ಸರಕಾರದೊಂದಿಗೆ ಚರ್ಚಿಸಿ ಅನುಷ್ಠಾನಕ್ಕೆ ತರಲಾಗುವುದು.

- ವಿವೇಕ್ ಆಳ್ವ , ಮ್ಯಾನೇಜ್ಮೆಂಟ್ ಟ್ರಸ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ

ಈ ಪ್ರದೇಶವು ವಿವಿಧ ಜಾತಿಯ ಪಕ್ಷಿಗಳು ಮತ್ತು ಜಲಚರಗಳನ್ನು ಹೊಂದಿರುವ ಪರಿಸರ ಸೂಕ್ಷ್ಮ ವಲಯವಾಗಿದೆ. ಹಾಗಾಗಿ ವಿವೇಕ್ ಆಳ್ವ ಮತುತಿ ಅವರ ತಂಡದ ವಿದ್ಯಾರ್ಥಿಗಳು ಒಗ್ಗೂಡಿ ಮಾಡಿದ ಈ ಪ್ರಯತ್ನವು ಹೆಚ್ಚು ಮೆಚ್ಚುಗೆ ಪಡೆದಿದೆ. ನಾವು ಇದೇ ಅಭಿಯಾನವನ್ನು ರಾಜ್ಯ ಕರಾವಳಿಯ ಸಂಪೂರ್ಣ 320 ಕಿಮೀ ಉದ್ದಕ್ಕೂ ವಿಸತಿರಿಸುವ ಪ್ರಯತ್ನ ಮಾಡಲಿದ್ದೇವೆ.

-ಗೌರವ್ ಹೆಗಡೆ, ನಿರ್ದೇಶಕರು, ಸರ್ಫಿಂಗ್ ಸ್ವಾಮಿ ಫೌಂಡೇಶನ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News