ಮಂಗಳೂರು: ನರ್ಸಿಂಗ್ ಕಾಲೇಜಿನಲ್ಲಿ ಒಟ್ಟು 9 ವಿದ್ಯಾರ್ಥಿಗಳಿಗೆ ಕೊರೋನ ಪಾಸಿಟಿವ್

Update: 2021-12-06 15:13 GMT

ಮಂಗಳೂರು, ಡಿ.6: ಕಾವೂರು ಬಳಿಯ ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ಕಳೆದೆರಡು ದಿನಗಳಲ್ಲಿ 9 ಮಂದಿ ವಿದ್ಯಾರ್ಥಿಗಳಲ್ಲಿ ಕೊರೋನ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕಂಟೋನ್ಮೆಂಟ್ ಝೋನ್ ಆಗಿ ಘೋಷಿಸಲಾಗಿದೆ.

ಈಗಾಗಲೇ ಕಾಲೇಜಿನ 173 ಮಂದಿ ವಿದ್ಯಾರ್ಥಿಗಳನ್ನು ಕೊರೋನ ತಪಾಸಣೆಗೊಳಪಡಿಸಲಾಗಿದ್ದು, ಅವರಲ್ಲಿ ಶನಿವಾರ 3, ರವಿವಾರ 4 ಹಾಗೂ ಸೋಮವಾರ 2 ಮಂದಿಯಲ್ಲಿ ಕೊರೋನ ಸೋಂಕು ದೃಢಪಟ್ಟಿದೆ.

ಸೋಂಕಿತ ಎಲ್ಲಾ ವಿದ್ಯಾರ್ಥಿಗಳನ್ನು ಹಾಗೂ ಅವರೊಂದಿಗೆ ಸಂಪರ್ಕ ಇದ್ದ ವಿದ್ಯಾರ್ಥಿಗಳನ್ನು ಕಾಲೇಜಿನ ಹಾಸ್ಟೆಲ್‌ನಲ್ಲಿ ಐಸೋಲೇಶನ್‌ ಗೊಳಪಡಿಸಲಾಗಿದೆ. ವೈದ್ಯಾಧಿಕಾರಿಗಳು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ಹಾಸ್ಟೆಲ್‌ಗಳಿಗೆ ಭೇಟಿ ನೀಡಿದ್ದು, ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸೋಂಕಿತರ ಮಾದರಿಯನ್ನು ಜೆನೊಮಿಕ್ ಅಧ್ಯಯನಕ್ಕಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ.

ಸೋಂಕಿತರು 18 ವರ್ಷ ವಯಸ್ಸಿನವರಾಗಿದ್ದು, ಕಾಲೇಜಿನ ಬಿಪಿಟಿ ಮತ್ತು ಡಿಎಂಎಲ್‌ಟಿ ಕೋರ್ಸ್‌ನ ವಿದ್ಯಾರ್ಥಿಗಳಾಗಿದ್ದಾರೆ. ಕಳೆದ 15 ದಿನಗಳಿಂದೀಚೆಗೆ ಕೇರಳದಿಂದ ಆಗಮಿಸಿರುವವರನ್ನು ಜಿಲ್ಲಾಡಳಿತದ ಸೂಚನೆಯಂತೆ ತಪಾಸಣೆಗೊಳಪಡಿಸಲಾ ಗಿದ್ದು, ಈಗಾಗಲೇ 9 ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ ಎಂದು ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ತಿಳಿಸಿದ್ದಾರೆ.

ಹಾಸ್ಟೆಲ್‌ನಲ್ಲಿ ಐಸೋಲೇಶನ್‌ಗೆ ಒಳಪಡಿಸಲಾಗಿರುವ ವಿದ್ಯಾರ್ಥಿಗಳಿಗೆ ಊಟೋಪಚಾರ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಏಳು ದಿನಗಳ ಬಳಿಕ ಮತ್ತೆ ಅವರ ಗಂಟಲ ದ್ರವದ ಮಾದರಿಯನ್ನು ಸಂಗ್ರಹಿಸಿ ಮತ್ತೆ ಪರೀಕ್ಷೆಗೊಳಪಡಿಸಲಾಗುವುದು ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ನ. 15ರಂದು ಪ್ರಥಮ ಕೊರೋನ ಸೋಂಕು ಪತ್ತೆಯಾಗಿದ್ದ ಕುರ್ನಾಡು ಬಳಿಯ ಶಾಲೆಯಲ್ಲಿ ಆ ಬಳಿಕ ನ. 28ರವರೆಗೆ ಒಟ್ಟು 16 ಮಂದಿಯಲ್ಲಿ ಕೊರೋನ ಸೋಂಕು ಪತ್ತೆಯಾಗಿತ್ತು. ನ. 15ರಿಂದಲೇ ಶಾಲೆಯನ್ನು ಕಂಟೋನ್ಮೆಂಟ್ ಝೋನ್ ಆಗಿ ಘೋಷಿಸಲಾಗಿದ್ದು, ಪ್ರಸ್ತುತ 3 ಮಂದಿ ಸಕ್ರಿಯ ಪ್ರಕರಣಗಳಿದ್ದು ಡಿ.11ಕ್ಕೆ ಇಲ್ಲಿನ ಕಂಟೋನ್ಮೆಂಟ್ ಝೋನ್ ಅವಧಿ ಮುಕ್ತಾಯವಾಗಲಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ದ.ಕ. ಜಿಲ್ಲೆಯಲ್ಲಿ ಇಂದು ಇಬ್ಬರಲ್ಲಿ ಕೊರೋನ ಸೋಂಕು ಪತ್ತೆ

ದ.ಕ. ಜಿಲ್ಲೆಯಲ್ಲಿ ಇಂದು ಇಬ್ಬರಲ್ಲಿ ಕೊರೋನ ಸೋಂಕು ಪತ್ತೆಯಾಗಿದ್ದು, ಒಟ್ಟು 138 ಸಕ್ರಿಯ ಪ್ರಕರಣಗಳಿವೆ. ಇದೇ ವೇಳೆ 9 ಮಂದಿ ಸೋಂಕಿನಿಂದ ಮುಕ್ತರಾಗಿದ್ದಾರೆ.

ಜಿಲ್ಲೆಯಲ್ಲಿ ಪ್ರಸಕ್ತ ಪಾಸಿಟಿವಿಟಿ ದರ ಶೇ. 0.03 ಆಗಿದ್ದು, ಈವರೆಗೆ ಒಟ್ಟು 115961 ಮಂದಿಗೆ ಸೋಂಕು ತಗಲಿದ್ದು, ಅವರಲ್ಲಿ 114126 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 1699 ಮಂದಿ ಮೃತಪಟ್ಟಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News