ಬಂಟ್ವಾಳ: ಡಾ. ಕದ್ರಿ ಗೋಪಾಲನಾಥರ ಸ್ಮರಣಾರ್ಥ ಕಾರ್ಯಕ್ರಮ; ಅಸ್ವಸ್ಥರಾದ ಸರೋಜಿನಿಗೆ ಜಿಲ್ಲಾಧಿಕಾರಿಯಿಂದ ಆರೈಕೆ

Update: 2021-12-06 15:34 GMT

ಮಂಗಳೂರು, ಡಿ.6: ಬಂಟ್ವಾಳ ಸಜಿಪದಲ್ಲಿ ಡಾ. ಕದ್ರಿ ಗೋಪಾಲನಾಥ ಮೆಮೋರಿಯಲ್‌ನಲ್ಲಿ ನಡೆಯುತ್ತಿರುವ ಕದ್ರಿ ಸಂಗೀತ ಸೌರಭ ಕಾರ್ಯಕ್ರಮದ ಸಂದರ್ಭ ಕದ್ರಿ ಗೋಪಾಲನಾಥ ಅವರ ಪತ್ನಿ ಸರೋಜಿನಿ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಖುದ್ದು ವೈದ್ಯರೂ ಆಗಿರುವ ದ.ಕ. ಜಿಲ್ಲಾಧಿಕಾರಿ ತಕ್ಷಣ ಅವರ ಆರೈಕೆ ಮಾಡಿ ಉಪಚರಿಸಿದ ಘಟನೆ ನಡೆದಿದೆ.

ಈ ಸಂದರ್ಭ ಜಿಲ್ಲಾಧಿಕಾರಿ ಜೊತೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ಪೊಲೀಸ್ ಆಯುಕ್ತರಾದ ಎನ್. ಶಶಿಕುಮಾರ್ ಅವರು ಕೂಡ ಆರೈಕೆಯಲ್ಲಿ ಸಹಕರಿಸಿದರು.

ಸ್ಯಾಕ್ಸೋಫೋನ್ ಚಕ್ರವರ್ತಿ, ಪದ್ಮಶ್ರೀ ಪುರಸ್ಕೃತ ಡಾ. ಕದ್ರಿ ಗೋಪಾಲನಾಥ್ ಅವರ ಜನುಮದಿನದ ಅಂಗವಾಗಿ ಕದ್ರಿ ಸಂಗೀತ ಸೌರಭ 2021 ಕಾರ್ಯಕ್ರಮ ನಡೆಯುತ್ತಿದ್ದು, ಈ ಸಂದರ್ಭ ವೇದಿಕೆ ಎದುರು ಕುಳಿತಿದ್ದ ಡಾ. ಕದ್ರಿ ಗೋಪಾಲನಾಥ್ ಅವರ ಪತ್ನಿ ಭಾವುಕರಾಗಿ ಅಸ್ವಸ್ಥರಾದರು. ಈ ಸಂದರ್ಭ ಅಲ್ಲಿದ್ದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಕ್ಷಣ ಅವರನ್ನು ಪರಿಶೀಲಿಸಿ, ಅವರಿಗೆ ಸಕ್ಕರೆ ನೀರು ಕೊಟ್ಟು ಆರೈಕೆ ಮಾಡಿದರು.

ಕದ್ರಿ ಗೋಪಾಲನಾಥರ ಹೆಸರಿನಲ್ಲಿ ಸಂಗೀತ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಹಿರಿಯ ಕಲಾವಿದರಿಗೆ ಡಾ. ಕದ್ರಿ ಗೋಪಾಲನಾಥ ಜೀವಿತಾವಧಿ ಸಾಧನೆ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಇಂದು ನಡೆಯುವ ಕಾರ್ಯಕ್ರಮದಲ್ಲಿ ಮೋರ್ಸಿಂಗ್ ವಿದ್ವಾನ್ ಡಾ. ಎಲ್. ಭೀಮಾಚಾರ್ಯ ಮತ್ತು ಗಾಯಕ ಹುಲ್ಯಾಳ ಮಹದೇವಪ್ಪ ಅವರಿಗೆ ಈ ವರ್ಷದ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ.

ಕಾರ್ಯಕ್ರಮದಲ್ಲಿ ಅಗಲಿದ ನಟ ಪುನೀತ್ ರಾಜ್ ಕುಮಾರ್, ಗೋಪಾಲ ಕೃಷ್ಣ ಐಯ್ಯರ್, ಸಜಿಪ ಗ್ರಾ.ಪಂ. ಅಧ್ಯಕ್ಷ ಸದಾನಂದ ಪೂಂಜ, ಮೃದಂಗ ವಿದ್ವಾನ್ ಸಾಯಿನಾಥ್ ಅವರಿಗೆ ಶ್ರದ್ಧಾಂಜಲಿ, ನುಡಿನಮನವನ್ನೂ ಆಯೋಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News