ಮುಕ್ತ, ನ್ಯಾಯಸಮ್ಮತ ಚುನಾವಣೆಗೆ ಕರ್ತವ್ಯ ನಿರ್ವಹಿಸಿ: ಉಡುಪಿ ಡಿಸಿ ಕೂರ್ಮಾರಾವ್

Update: 2021-12-06 16:06 GMT

ಉಡುಪಿ, ಡಿ.6: ಜಿಲ್ಲೆಯಲ್ಲಿ ಡಿಸೆಂಬರ್ 10ರಂದು ನಡೆಯುವ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರಗಳ ವಿಧಾನ ಪರಿಷತ್‌ನ ದ್ವೈವಾರ್ಷಿಕ ಚುನಾವಣೆಯಲ್ಲಿ ಮುಕ್ತ, ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಯುವ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತೆ ಎಲ್ಲಾ ಮೈಕ್ರೋ ಅಬ್ಸರ್‌ವರ್‌ಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ತಿಳಿಸಿದ್ದಾರೆ.

ಸೋಮವಾರ ಮಣಿಪಾಲದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ವಿಧಾನಪರಿಷತ್ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿರುವ ಮೈಕ್ರೋ ಅಬ್ಸರ್‌ವರ್‌ಗಳಿಗೆ ನಡೆದ ತರಬೇತಿ ಕಾರ್ಯಕ್ರವುದಲ್ಲಿ ಅವರು ಮಾತನಾಡುತಿದ್ದರು.

ಮತದಾನ ದಿನದಂದು ಮತಗಟ್ಟೆಯಲ್ಲಿ ಚುನಾವಣಾ ಆಯೋಗ ಸೂಚಿಸಿ ರುವ ಎಲ್ಲಾ ಮಾರ್ಗಸೂಚಿಗಳ ಅನ್ವಯ ಮತದಾನ ಪ್ರಕ್ರಿಯೆ ನಡೆಯುತ್ತಿರುವ ಬಗ್ಗೆ ಮೈಕ್ರೋ ಅಬ್ಸರ್‌ವರ್‌ಗಳು ಪರಿಶೀಲಿಸಬೇಕು. ಯಾವುದೇ ಲೋಪ ಗಳಿದ್ದಲ್ಲಿ ಮತಗಟ್ಟೆ ಅಧಿಕಾರಿಯ ಗಮನಕ್ಕೆ ತಂದು ಅದನ್ನು ಸರಿಪಡಿಸಬೇಕು. ಮತದಾನವು ಸಂಪೂರ್ಣ ಪಾರದರ್ಶಕ, ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಮತದಾನದ ಸಂಪೂರ್ಣ ವಿವರಗಳನ್ನು ನೇರವಾಗಿ ಜಿಲ್ಲಾ ಚುನಾವಣಾ ವೀಕ್ಷಕರಿಗೆ ನೀಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು

ಮೈಕ್ರೋ ಅಬ್ಸರ್‌ವರ್‌ಗಳು ಮತದಾನ ಆರಂಭದಿಂದ ಮುಕ್ತಾಯದವರೆಗಿನ ಎಲ್ಲಾ ಘಟನೆಯನ್ನು ಸೂಕ್ಷ್ಮವಾಗಿ ಅವಲೋಕಿಸ ಬೇಕು. ಈ ವರದಿಯನ್ನು ನಿಗದಿತ ನಮೂನೆಯಲ್ಲಿ ದಾಖಲಿಸಿ, ಚುನಾವಣಾ ವೀಕ್ಷಕರಿಗೆ ಸಲ್ಲಿಸಬೇಕು. ಮತದಾನ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದರು.

ಪರಿಷತ್ ಚುನಾವಣೆಗೆ ಜಿಲ್ಲೆಯಲ್ಲಿ 158 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಜಿಲ್ಲೆಯ ಗ್ರಾಮ ಪಂಚಾಯತ್ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳ ಸದಸ್ಯರು ಸೇರಿದಂತೆ ಒಟ್ಟು 2505 ಮಂದಿ ಮತದಾರರು ತಮ್ಮ ಮತ ಚಲಾಯಿಸಲಿದ್ದು, ಎಲ್ಲಾ ಮತಗಟ್ಟೆಗಳಲ್ಲಿ ವೀಡಿಯೋಗ್ರಫಿ ವ್ಯವಸ್ಥೆ ಮಾಡಲಾಗಿದ್ದು, ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ ಎಂದರು.

ಜಿಲ್ಲಾ ನೋಡೆಲ್ ಅಧಿಕಾರಿ ಅಶೋಕ್ ಕಾಮತ್ ಮೈಕ್ರೋ ಅಬ್ಸರ್‌ವರ್ ಗಳು ನಿರ್ವಹಿಸಬೇಕಾದ ಕಾರ್ಯಗಳು ಹಾಗೂ ಸಂಬಂಧಪಟ್ಟ ದಾಖಲೆಗಳನ್ನು ನಿರ್ವಹಿಸುವ ಕುರಿತು ತರಬೇತಿ ನೀಡಿದರು. ಅಪರ ಜಿಲ್ಲಾಧಿಕಾರಿ ಬಾಲಕೃಷ್ಣಪ್ಪ, ಲೀಡ್ ಬ್ಯಾಂಕ್ ಮೆನೇಜರ್ ಪಿಂಜಾರ, ಎನ್‌ಐಸಿ ನಿರ್ದೇಶಕ ಮಂಜುನಾಥ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News