ದಲಿತರನ್ನು ಶಿಕ್ಷಣ ವಂಚಿತರನ್ನಾಗಿಸಲು ಹುನ್ನಾರ: ಪ್ರೊ. ಫಣಿರಾಜ್

Update: 2021-12-06 16:21 GMT

ಉಡುಪಿ, ಡಿ.6: ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಉಡುಪಿ ಜಿಲ್ಲಾ ಶಾಖೆ ವತಿಯಿಂದ ವಿವಿಧ ಪ್ರಗತಿಪರ ಸಂಘಟನೆಗಳ ಸಹಯೋಗದೊಂದಿಗೆ ಬಾಬಾಸಾಹೇಬ್ ಅಂಬೇಡ್ಕರ್‌ರವರ ಪರಿನಿಬ್ಬಾಣ ದಿನವನ್ನು, ಬೌದ್ಧ ಧಮ್ಮ ದೀಕ್ಷೆಯ 65ನೇ ಧಮ್ಮ ದೀಕ್ಷಾ ಪರಿವರ್ತನಾ ಅಭಿಯಾನವನ್ನಾಗಿ ಮೊಂಬತ್ತಿ ಜಾಥಾ ನಡೆಸಲಾಯಿತು.

ಜೋಡುಕಟ್ಟೆಯಿಂದ ಆರಂಭಗೊಂಡ ಮೊಂಬತ್ತಿ ಜಾಥಾವು ಕೋರ್ಟ್ ರಸ್ತೆ, ಡಯಾನ ಸರ್ಕಲ್‌ನಲ್ಲಿ ತಿರುಗಿ ವಾಪಾಸ್ಸು ಅದೇ ಮಾರ್ಗದಲ್ಲಿ ಸಾಗಿ ಜೋಡು ಕಟ್ಟೆ ಮೂಲಕ ಅಜ್ಜರಕಾಡು ಹುತಾತ್ಮ ಸ್ಮಾಕದ ಎದುರು ಸಮಾಪ್ತಿಗೊಂಡಿತು.

ಬಳಿಕ ಅಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಹಿರಿಯ ಚಿಂತಕ ಪ್ರೊ.ಫಣಿರಾಜ್, ಮೀಸಲಾತಿಯನ್ನು ಹಿಂಬಾಗಿಲಿನಿಂದ ತೆಗೆದು ಹಾಕುವ ಷಡ್ಯಂತರ ನಡೆಯುತ್ತಿದೆ. ಈ ಮೂಲಕ ದಲಿತರನ್ನು ಶಿಕ್ಷಣ ವಂಚಿತರನ್ನಾಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

ಎಲ್ಲರ ಸಮಾನತೆಗಾಗಿ ಅಂಬೇಡ್ಕರ್ ಹೋರಾಟ ನಡೆಸಿದರು. ಆದರೆ ಅವರ ಹೋರಾಟಕ್ಕೆ ಸರಿಯಾದ ಬೆಂಬಲ ಸಿಕ್ಕಿಲ್ಲ. ಸಂವಿಧಾನ ಇಲ್ಲದಿದ್ದರೆ ಈಗಿನ ಸ್ಥಾನಮಾನ ಯಾರಿಗೂ ಸಿಗುತ್ತಿರಲಿಲ್ಲ. ಅಂಬೇಡ್ಕರ್ ವಿಚಾರ ಹಿಡಿದು ನಾವು ಸಮತೆಯೊಂದಿಗೆ ಹೊಸ ನಾಯತ್ವ ಹುಟ್ಟು ಹಾಕಬೇಕು ಎಂದರು.

ಪ್ರಣಾಳಿಕೆ ಸಿದ್ಧಪಡಿಸಿ ಎಲ್ಲ ಪಕ್ಷಗಳು ಒಪ್ಪುವಂತೆ ಮಾಡಬೇಕು. ಇಲ್ಲದಿದ್ದರೆ ಸರ್ವಾಧಿಕಾರದಿಂದ ಈ ದೇಶದವನ್ನು ನಾಶ ಮಾಡಲು ಸರಕಾರ ಪ್ರಯತ್ನ ಮಾಡುತ್ತಿದೆ. ನಾವು ಅಂಬೇಡ್ಕರ್ ಅವರನ್ನು ಉಳಿಸಿಕೊಳ್ಳಬೇಕು. ಅದರೊಂದಿಗೆ ನಮ್ಮನ್ನು, ದೇಶವನ್ನು ಉಳಿಸುವ ಪ್ರಯತ್ನ ಮಾಬೇಕೆಂದು ಅವರು ಕರೆ ನೀಡಿದರು.

ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ತರ್ ಮಾತನಾಡಿ, ಬ್ರಾಹ್ಮಣ್ಯದ ಪೂಜಾ ವಿಧಾನ ಕಡಿಮೆ ಮಾಡಿ, ಅದರ ಹಣವನ್ನು ಮಕ್ಕಳ ಶಿಕ್ಷಣಕ್ಕೆ ಬಳಸಿಕೊಳ್ಳಬೇಕು. ಅಂಬೇಡ್ಕರ್ ವಿಚಾರಧಾರೆಗಳನ್ನು ವ್ಯಾಪಾಕಗೊಳಿಸಿ ನಮ್ಮ ಹಕ್ಕನ್ನು ಪಡೆದುಕೊಳ್ಳಬೇಕು. ಇಂದು ಮೇಲ್ಜಾತಿಯವರಿಗೆ ಮೀಸಲಾತಿ ನೀಡಿ ಅದರ ಪ್ರಾಮುಖ್ಯತೆಯನ್ನು ಕಡಿಮೆಗೊಳಿಸುವ ಹುನ್ನಾರ ನಡೆಯುತ್ತಿದೆ. ದೇಶದಲ್ಲಿ ಶೇ.3ರಷ್ಟಿರುವ ಬ್ರಾಹ್ಮಣರಿಗೆ ಶೇ.10ರಷ್ಟು ಮೀಸಲಾತಿ ನೀಡಿರುುದು ದುರಂತ ಎಂದು ಟೀಕಿಸಿದರು.

ಈ ಸಂದರ್ಭದಲ್ಲಿ ದಸಂಸ ಮುಖಂಡರಾದ ಶ್ಯಾಮ್ರಾಜ್ ಬಿರ್ತಿ, ಎಸ್.ಎಸ್.ಪ್ರಸಾದ್, ಮಂಜುನಾಥ್ ಬಾಳ್ಕುದ್ರು, ಪರಮೇಶ್ವರ ಉಪ್ಪೂರು, ವರದರಾಜ್ ಬಿರ್ತಿ, ಇದ್ರಿಸ್ ಹೂಡೆ, ವಸಂತಿ, ಶಿವಾನಂದ್ ಪಡುಬಿದ್ರಿ, ಕುಸುಮ ಕಟ್ಕೆರೆ, ಮಂಜುನಾಥ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News