​ಪುನೀತ್‌ ಅಗಲಿಕೆ ನೋವು ಕಾಡುತ್ತಿದೆ- ಭೋಜರಾಜ್ ವಾಮಂಜೂರು

Update: 2021-12-06 17:11 GMT

ಕಾರ್ಕಳ : ನಮ್ಮೆಲ್ಲರ ಅಚ್ಚುಮೆಚ್ಚಿನ ಅಪ್ಪು ನಿಧನರಾಗಿ ತಿಂಗಳು ಒಂದು ಕಳೆದರೂ ಇಡೀ ನಾಡು ಶೋಕದಿಂದಲೇ ಇದೆ. ಪುನೀತ್‌ ರಾಜ್‌ ಕುಮಾರ್‌‌ ನಾಡಿಗೆ ನೀಡಿದ ಸೇವೆ ಸ್ಮರಣೀಯವಾಗಿದ್ದು, ಮಾದರಿಯಾಗಿದೆ ಎಂದು ಖ್ಯಾತ ರಂಗಭೂಮಿ ಕಲಾವಿದ ಭೋಜರಾಜ್‌ ವಾಮಂಜೂರು ನುಡಿದರು.

ಅವರು ಡಿ. 5ರಂದು ಪೆರ್ವಾಜೆ ಬಿಲ್ಲವ ಸಮಾಜ ಸೇವಾ ಸಂಘದ ಸಭಾಂಗಣದಲ್ಲಿ ನಡೆದ ಸ್ಮರಣಾಂಜಲಿ ಕಾರ್ಯಕ್ರಮದಲ್ಲಿ ಪುನೀತ್‌ ಹಾಗೂ ಪ್ರದೀಪ್‌ ಕೋಟ್ಯಾನ್‌ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಬಳಿಕ ಮಾತನಾಡಿದರು.

ಗೇರು ನಿಗಮದ ಅ‍ಧ್ಯಕ್ಷ ಮಣಿರಾಜ್‌ ಶೆಟ್ಟಿ, ಉದ್ಯಮಿ ಬಿ. ಕೃಷ್ಣಮೂರ್ತಿ ಪ್ರದೀಪ್‌ ಅವರೊಂದಿಗಿನ ರಾಜಕೀಯೇತರ ಸಂಬಂಧ, ಒಡನಾಟದ ಕುರಿತು ಮೆಲುಕು ಹಾಕಿದರು.

ಅ‍ಧ್ಯಕ್ಷತೆ ವಹಿಸಿ ಮಾತನಾಡಿದ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಡಿ.ಆರ್.‌ ರಾಜು, ಪುನೀತ್‌ ರಾಜ್‌ಕುಮಾರ್‌ ಕೇವಲ ಓರ್ವ ನಟನಾಗಿ ಗುರುಸಿಕೊಂಡಿದ್ದಲ್ಲ. ತನ್ನ ಆದರ್ಶ ವ್ಯಕ್ತಿತ್ವ, ನಿಸ್ವಾರ್ಥ, ನಿಶ್ಕಲ್ಮಶ ಸಮಾಜ ಸೇವೆಯಿಂದಲೇ ಕನ್ನಡಿಗರ ಮನೆಮನದಲ್ಲಿ ನೆಲೆಸಿದ್ದಾರೆ ಎಂದರು. ಪುರಸಭಾ ಮಾಜಿ ಅ‍ಧ್ಯಕ್ಷ ಪ್ರದೀಪ್‌ ಕೋಟ್ಯಾನ್‌ ಓರ್ವ ಸ್ನೇಹಜೀವಿ. ಕಾರ್ಕಳ ನಗರಕ್ಕೆ ಅವರ  ಕೊಡುಗೆ ಅಪಾರವಾಗಿತ್ತು ಎಂದರು.

ನೇತ್ರ ದಾನ

ರಾಜ್‌ ಕುಮಾರ್‌ ಕುಟುಂಬ ನೇತ್ರದಾನದಿಂದ ಪ್ರೇರಣೆಗೊಂಡ ನಾನು, ನನ್ನ ಪತ್ನಿ ನೇತ್ರದಾನಕ್ಕೆ ಮುಂದಾಗಿದ್ದೇವೆ. ಮುಂದಿನ ದಿನಗಳಲ್ಲಿ ಕಾರ್ಕಳದ ಸಂಘ- ಸಂಸ್ಥೆಗಳ ಸಹಕಾರದೊಂದಿಗೆ ನೇತ್ರ ದಾನ ನೋಂದಣಿ ನಡೆಸುವ ಇರಾದೆಯೆಂದು ರಾಜು ಅವರು ತಿಳಿಸಿದರು.

ಪುರಸಭಾ ಅಧ್ಯಕ್ಷೆ ಸುಮಾ ಕೇಶವ್‌, ಗೆಜ್ಜೆಗಿರಿ ನಂದನಪಿತ್ತಿಲ್‌ ಪ್ರಧಾನ ಕಾರ್ಯದರ್ಶಿ ರವಿಕುಮಾರ್‌ ಚಿಲಿಂಬಿ, ಪ್ರಭಾಕರ್‌ ಬಂಗೇರಾ, ಪ್ರವೀಣ್‌ ಸುವರ್ಣ ಉಪಸ್ಥಿತರಿದ್ದರು. ನವೀನ್‌ ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ಬಳಿಕ ರಕ್ಷಿತ್‌ ಕೆ.ಎಂ. ಬಳಗದವರು ಸ್ವರನಮನ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News