3ಡಿ ಪ್ರಿಂಟರ್‌ ನೊಂದಿಗೆ ರಚಿಸಲಾದ ನೋವಿಲ್ಲದೇ ಸಾಯುವ ಆತ್ಮಹತ್ಯಾ ಯಂತ್ರವನ್ನು ಕಾನೂನುಬದ್ಧಗೊಳಿಸಿದ ಸ್ವಿಝರ್ಲ್ಯಾಂಡ್

Update: 2021-12-07 14:06 GMT
Photo: Exit International

ಸ್ವಿಝರ್ಲ್ಯಾಂಡ್‌ ವೈದ್ಯಕೀಯ ಪರಿಶೀಲನಾ ಮಂಡಳಿಯು ಪೋರ್ಟಬಲ್ ಆತ್ಮಹತ್ಯೆ ಕ್ಯಾಪ್ಸುಲ್‌ಗಳನ್ನು ಕಾನೂನುಬದ್ಧಗೊಳಿಸಿದೆ ಎಂದು thedailymail ವರದಿ ಮಾಡಿದೆ. 3ಡಿ ಪ್ರಿಂಟರ್‌ ನಿಂದ ಇದನ್ನು ರಚಿಸಬಹುದಾಗಿದೆ. 

ದಿ ಡೈಲಿ ಮೇಲ್ ಪ್ರಕಾರ, ಎಕ್ಸಿಟ್ ಇಂಟರ್ನ್ಯಾಷನಲ್ ಅಭಿವೃದ್ಧಿಪಡಿಸಿದ ಸಾರ್ಕೊ ಸೂಸೈಡ್ ಪಾಡ್‌ಗಳನ್ನು ಆತ್ಮಹತ್ಯೆಗಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಅದರೊಳಗೆ ಮಲಗಿರುವ ವ್ಯಕ್ತಿಯಿಂದಲೇ ಅದನ್ನು ನಿರ್ವಹಿಸಬಹುದಾಗಿದೆ. ಎಕ್ಸಿಟ್ ಇಂಟರ್‌ನ್ಯಾಷನಲ್ ಒಂದು ಲಾಭರಹಿತ ಸಂಸ್ಥೆಯಾಗಿದ್ದು, ಸ್ವಯಂಪ್ರೇರಿತ ದಯಾಮರಣವನ್ನು ಕಾನೂನುಬದ್ಧಗೊಳಿಸುವುದನ್ನು ಪ್ರತಿಪಾದಿಸುತ್ತಲೇ ಬಂದಿದೆ.

ತನ್ನ ಜೀವನವನ್ನು ಕೊನೆಗೊಳಿಸುವ ನಿರ್ಧಾರವನ್ನು ದೃಢಪಡಿಸಲು ವ್ಯಕ್ತಿಯು ಮೊದಲು ಸಮೀಕ್ಷೆಯನ್ನು ಪೂರೈಸಬೇಕಾಗುತ್ತದೆ. ನಂತರ ಅವರು ಮೊದಲೇ ರೆಕಾರ್ಡ್ ಮಾಡಿದ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದ್ದು, ಬಳಿಕ ಪ್ರಕ್ರಿಯೆಯನ್ನು ಪ್ರಾರಂಭಿಸಲು ಬಟನ್ ಅನ್ನು ಒತ್ತಬಹುದಾಗಿದೆ ಎಂದು ವರದಿ ತಿಳಿಸಿದೆ.

ಒಳಗಿನ ಆಮ್ಲಜನಕದ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಆತ್ಮಹತ್ಯೆಯನ್ನು ಕೈಗೊಳ್ಳಲು ಸಾರ್ಕೊ ಪಾಡ್ ಅನ್ನು ಬಳಕೆದಾರರು ಒಳಗಿನಿಂದಲೇ ನಿರ್ವಹಿಸಬಹುದಾಗಿದೆ. ಈ ಪ್ರಕ್ರಿಯೆಯು ಒಂದು ನಿಮಿಷಕ್ಕಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ ಮತ್ತು ಹೈಪೋಕ್ಸಿಯಾ ಮತ್ತು ಹೈಪೋಕ್ಯಾಪ್ನಿಯಾ ಮೂಲಕ ಸಾವು ಸಂಭವಿಸುತ್ತದೆ. ದಿ ಇಂಡಿಪೆಂಡೆಂಟ್ ಪ್ರಕಾರ ಒಬ್ಬ ವ್ಯಕ್ತಿಯು ಶಾಂತಿಯುತವಾಗಿ ಮತ್ತು ನೋವುರಹಿತವಾಗಿ ಸಾಯಲು ಈ ಪ್ರಕ್ರಿಯೆ ಅನುವು ಮಾಡಿಕೊಡುತ್ತದೆ.

ಎರಡು ಸಾರ್ಕೊ ಪಾಡ್ ಮೂಲಮಾದರಿಗಳು ಪ್ರಸ್ತುತ ಅಸ್ತಿತ್ವದಲ್ಲಿವೆ, ಆದರೆ ಎಕ್ಸಿಟ್ ಇಂಟರ್‌ನ್ಯಾಶನಲ್ ಮೂರನೇ ಯಂತ್ರವನ್ನು 3ಡಿ ಮುದ್ರಿಸುತ್ತಿದೆ, ಅದು ಮುಂದಿನ ವರ್ಷ ಸ್ವಿಝರ್ಲ್ಯಾಂಡ್‌ ನಲ್ಲಿ ಕಾರ್ಯಾಚರಣೆಗೆ ಸಿದ್ಧವಾಗಲಿದೆ ಎನ್ನಲಾಗಿದೆ. ಸ್ವಿಝರ್ಲ್ಯಾಂಡ್ 1942 ರಲ್ಲಿ ಸಹಾಯಕ ಆತ್ಮಹತ್ಯೆಯನ್ನು ಕಾನೂನುಬದ್ಧಗೊಳಿಸಿತು. ಕಳೆದ ವರ್ಷ ಸುಮಾರು 1,300 ಜನರು ದಯಾಮರಣ ಸಂಸ್ಥೆಗಳಾದ ಡಿಗ್ನಿಟಾಸ್ ಮತ್ತು ಎಕ್ಸಿಟ್ ಸೇವೆಗಳನ್ನು ಆತ್ಮಹತ್ಯೆಗಾಗಿ ಬಳಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News