ಪನಾಮಾ,ಪ್ಯಾರಡೈಸ್ ದಾಖಲೆಗಳ ಸೋರಿಕೆಯಲ್ಲಿ ಅಘೋಷಿತ 20,353 ಕೋ.ರೂ.ಪತ್ತೆ: ಸರಕಾರ

Update: 2021-12-07 17:08 GMT
File Photo | PTI

ಹೊಸದಿಲ್ಲಿ,ಡಿ.7: ಪನಾಮಾ ಮತ್ತು ಪ್ಯಾರಡೈಸ್ ದಾಖಲೆಗಳ ಸೋರಿಕೆಯಲ್ಲಿ ಭಾರತಕ್ಕೆ ಸಂಬಂಧಿಸಿದ 930 ಕಂಪನಿಗಳಿಗೆ ಸೇರಿದ 20,353 ಕೋ.ರೂ.ಗಳ ಅಘೋಷಿತ ಹಣವನ್ನು ಪತ್ತೆ ಹಚ್ಚಲಾಗಿದೆ ಎಂದು ಸರಕಾರವು ಮಂಗಳವಾರ ತಿಳಿಸಿದೆ.

ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಈ ವಿಷಯವನ್ನು ತಿಳಿಸಿದ ಸಹಾಯಕ ವಿತ್ತಸಚಿವ ಪಂಕಜ ಚೌಧರಿ ಅವರು,ಪನಾಮಾ ಮತ್ತು ಪ್ಯಾರಡೈಸ್ ದಾಖಲೆಗಳ ಸೋರಿಕೆಯಲ್ಲಿ ಈವರೆಗೆ 153.88 ಕೋ.ರೂ.ತೆರಿಗೆಯನ್ನು ಸಂಗ್ರಹಿಸಲಾಗಿದೆ ಎಂದೂ ಹೇಳಿದರು.

ಆದಾಯ ತೆರಿಗೆ ಇಲಾಖೆಯಡಿ ವಿವಿಧ ಕಾಯ್ದೆಗಳನ್ನು ಉಲ್ಲಂಘಿಸುವ ವ್ಯಕ್ತಿಗಳ ವಿರುದ್ಧ ಇಲಾಖೆಯು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ನೇರ ತೆರಿಗೆ ಕಾನೂನಿನಡಿ ಇಂತಹ ಕ್ರಮಗಳು ಶೋಧ ಮತ್ತು ಜಪ್ತಿ,ಸರ್ವೆಗಳು,ವಿಚಾರಣೆಗಳು,ಆದಾಯದ ಮೌಲ್ಯಮಾಪನ ಮತ್ತು ಮರುಮೌಲ್ಯಮಾಪನ,ಬಡ್ಡಿಯೊಂದಿಗೆ ತೆರಿಗೆ ವಸೂಲಿ,ದಂಡಗಳ ಹೇರಿಕೆ,ನ್ಯಾಯಾಲಯಗಳಲ್ಲಿ ಮೊಕದ್ದಮೆ ಇತ್ಯಾದಿಗಳು ಸೇರಿವೆ ಎಂದರು.

ಪನಾಮಾ ಮತ್ತು ಪ್ಯಾರಡೈಸ್ ದಾಖಲೆಗಳ ಸೋರಿಕೆಗಳ 52 ಪ್ರಕರಣಗಳಲ್ಲಿ ಕಪ್ಪು ಹಣ(ಅಘೋಷಿತ ವಿದೇಶಿ ಆದಾಯ ಮತ್ತು ಆಸ್ತಿಗಳು) ಮತ್ತು ತೆರಿಗೆ ಹೇರಿಕೆ ಕಾಯ್ದೆ,2015ರಡಿ ಕಾನೂನು ಕ್ರಮಗಳಿಗಾಗಿ ನ್ಯಾಯಾಲಯಗಳಲ್ಲಿ ದೂರುಗಳನ್ನು ದಾಖಲಿಸಲಾಗಿದೆ. ಈ ಕಾಯ್ದೆಯಡಿ 130 ಪ್ರಕರಣಗಳಲ್ಲಿ ವಿಚಾರಣೆ ಪ್ರಗತಿಯಲ್ಲಿದೆ ಎಂದರು.

ಪಂಡೋರಾ ದಾಖಲೆಗಳ ಸೋರಿಕೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಕೆಲವು ಭಾರತೀಯರ ಹೆಸರುಗಳನ್ನು ಬಿಡುಗಡೆಗೊಳಿಸಿರುವುದನ್ನು ಸರಕಾರವು ಗಮನಕ್ಕೆ ತೆಗೆದುಕೊಂಡಿದೆ ಮತ್ತು ಸಂಘಟಿತ ಹಾಗೂ ತ್ವರಿತ ತನಿಖೆಗಾಗಿ ಪಂಡೋರಾ ದಾಖಲೆಗಳ ಸೋರಿಕೆಯನ್ನು ಮಲ್ಟಿ ಏಜೆನ್ಸಿ ಗ್ರೂಪ್(ಎಂಜಿಎ)ನ ವ್ಯಾಪ್ತಿಗೊಳಪಡಿಸಲಾಗಿದೆ. 

ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ)ಯ ಅಧ್ಯಕ್ಷರು ಸಂಚಾಲಕರಾಗಿರುವ ಎಂಜಿಎ ಜಾರಿ ನಿರ್ದೇಶನಾಲಯ, ಆರ್‌ಬಿಐ,ಹಣಕಾಸು ಗುಪ್ತಚರ ಘಟಕ,ಸಿಬಿಡಿಟಿಯ ವಿದೇಶಿ ತೆರಿಗೆ ಮತ್ತು ತೆರಿಗೆ ಸಂಶೋಧನೆ ವಿಭಾಗವನ್ನು ಸದಸ್ಯರನ್ನಾಗಿ ಹೊಂದಿದೆ ಎಂದು ಚೌಧರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News