ತಬ್ಲಿಘಿ ಜಮಾಅತ್ ಸಮಾವೇಶ ಪ್ರಕರಣದ ಕಳಪೆ ತನಿಖೆ: ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ದಿಲ್ಲಿ ಹೈಕೋರ್ಟ್

Update: 2021-12-07 17:31 GMT

ಹೊಸದಿಲ್ಲಿ, ಡಿ. 7: ತಬ್ಲಿಘಿ ಜಮಾಅತ್ ಪ್ರಕರಣದ ಕಳಪೆ ತನಿಖೆಗೆ ದಿಲ್ಲಿ ಉಚ್ಚ ನ್ಯಾಯಾಲಯ ಸೋಮವಾರ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ.

ನಗರದಲ್ಲಿ ಕಳೆದ ವರ್ಷ ಮಾರ್ಚ್ನಲ್ಲಿ ನಡೆದ ತಬ್ಲಿಘಿ ಜಮಾಅತ್ ಸಮಾವೇಶದಲ್ಲಿ ಭಾಗವಹಿಸಿದ ವಿದೇಶಿಯರಿಗೆ ಆಶ್ರಯ ನೀಡಿದ್ದ ವ್ಯಕ್ತಿಗಳ ವಿರುದ್ಧ ಸಲ್ಲಿಸಲಾದ ಎಫ್ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ ಮನವಿಯನ್ನು ನ್ಯಾಯಮೂರ್ತಿ ಮುಖ್ತಾ ಗುಪ್ತಾ ಅವರ ಪೀಠ ವಿಚಾರಣೆ ನಡೆಸಿತು. ದಿಲ್ಲಿಯ ಜನನಿಬಿಡ ನಿಝಾಮುದ್ದೀನ್ ಪ್ರದೇಶದಲ್ಲಿ ಮಾರ್ಚ್ 9 ಹಾಗೂ 10ರಂದು ಧಾರ್ಮಿಕ ಸಮಾವೇಶ ನಡೆದಿತ್ತು. 

ಕೋರೋನ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಮಾರ್ಚ್ 21ರಂದು ದೇಶಾದ್ಯಂತ ಲಾಕ್ಡೌನ್ ಜಾರಿಗೊಳಿಸಲಾಗಿತ್ತು.

ಸೋಮವಾರ ವಿಚಾರಣೆ ಸಂದರ್ಭ ಪೊಲೀಸರು ಪಾಲ್ಗೊಂಡವರು ಕೆಲವೊಮ್ಮೆ ಮಾರ್ಚ್ನಲ್ಲಿ ಬಂದಿರಬಹುದು. ಆದರೆ, ಅವರು ಯಾವಾಗ ಬಂದಿದ್ದಾರೆ ಹಾಗೂ ಯಾರ ಮನೆಯಲ್ಲಿ ತಂಗಿದ್ದರು ಎಂಬ ಬಗ್ಗೆ ಖಚಿತವಾದ ದಿನಾಂಕ ಇಲ್ಲ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು. ಅವರ ತಂಗಿದ್ದ ಖಚಿತ ದಿನಾಂಕವನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ನಡೆಸಿದ್ದಾರೆ. ಆದರೆ, ಖಚಿತ ಮಾಹಿತಿ ಸಂಗ್ರಹಿಸಲು ಸಾಧ್ಯವಾಗಿಲ್ಲ ಎಂದು ಹೆಚ್ಚುವರಿ ಪ್ರಾಸಿಕ್ಯೂಟರ್ ಪ್ರತಿಪಾದಿಸಿದರು. 

ಇದಕ್ಕೆ ನ್ಯಾಯಮೂರ್ತಿ ಗುಪ್ತಾ ಅವರು, ‘‘ಹಾಗಾದರೆ ನೀವು ತನಿಖಾಧಿಕಾರಿಯಾಗಲು ಅರ್ಹರಲ್ಲ. ಈ ವಿಷಯದ ಕುರಿತು ತನಿಖೆ ನಡೆಸದೇ ಇರುವುದು ಇಲ್ಲಿನ ಸಮಸ್ಯೆ’’ ಎಂದು ಪ್ರತಿಕ್ರಿಯಿಸಿದರು. ಸಮಾವೇಶ ನಡೆಯುವ ಸಂದರ್ಭ ತಮ್ಮ ಮನೆಗಳಲ್ಲಿ ವಿದೇಶಿಗರಿಗೆ ತಂಗಲು ಅವಕಾಶ ನೀಡದಂತೆ ಭಾರತೀಯರಿಗೆ ಯಾವುದಾದರು ನಿಷೇಧ ಇತ್ತೇ ಎಂದು ಪೊಲೀಸರಿಂದ ತಿಳಿಯ ಬಯಸುವುದಾಗಿ ಉಚ್ಚ ನ್ಯಾಯಾಲಯ ಹೇಳಿತು.

ದೂರುದಾರರ ಪರವಾಗಿ ಹಾಜರಾಗಿದ್ದ ನ್ಯಾಯವಾದಿ ಅಶೀಮಾ ಮಂಡ್ಲಾ ಅವರು, ಪ್ರಕರಣದಲ್ಲಿ ಪೊಲೀಸರು ಎರಡು ಪ್ರತ್ಯೇಕ ಎಫ್ಐಆರ್ ಹಾಗೂ ಎರಡು ವಿಭಿನ್ನ ಆರೋಪ ಪಟ್ಟಿ ಸಲ್ಲಿಸಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News