ಪರೇಶ್ ಮೇಸ್ತಾ ಕೊಲೆ ಪ್ರಕರಣ ಬಿಜೆಪಿಗರ ಚುನಾವಣಾ ತಂತ್ರ: ಬಿ.ಕೆ.ಹರಿಪ್ರಸಾದ್

Update: 2021-12-07 17:52 GMT

ಭಟ್ಕಳ: ಹೊನ್ನಾವರದ ಪರೇಶ್ ಮೇಸ್ತಾ ಕೊಲೆಗೂ ಬಿಜೆಪಿಯ ಚುನಾವಣ ತಂತ್ರಕ್ಕೂ ಹತ್ತಿರದ ಸಂಬಂಧವಿದ್ದು ಮೇಸ್ತಾನ ಕೊಲೆ ಪ್ರಕರಣದಲ್ಲಿ ಬಿಜೆಪಿ ಕೈವಾಡವಿದೆ. ಇದು ಚುನಾವಣಾ ಲಾಭಕ್ಕಾಗಿ ರಚಿಸಿದ ತಂತ್ರವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಕಾಂಗ್ರೆಸ್ ನ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್ ಹೇಳಿದರು.

ಅವರು ಮಂಗಳವಾರ ಭಟ್ಕಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

‘ಮನುಷ್ಯತ್ವ ಮೀರಿದವರು ಬಿಜೆಪಿಗರು. ಬಿಜೆಪಿಗರ ಪ್ರಣಾಳಿಕೆಯೇ ಅದನ್ನು ಎತ್ತಿ ತೋರಿಸುತ್ತದೆ. ಕಾಂಗ್ರೆಸ್ ರಸ್ತೆ, ನೀರು, ಸೇತುವೆ ಬಗ್ಗೆ ಮಾತನಾಡಿದರೆ, ಬಿಜೆಪಿಗರು ಹಿಂದೂ ಮುಸ್ಲಿಂ, ಚೀನಾ, ಪಾಕಿಸ್ತಾನದ ಬಗ್ಗೆ ಮಾತನಾಡುತ್ತಾರೆ. ಇಂತಹ ಜನವಿರೋಧಿ, ಜನರ ಶಾಂತಿ ನೆಮ್ಮದಿ ಕೆಡಿಸುವ ಪಕ್ಷ ನಮಗೆ ಬೇಕೆ’ ಎಂದು ಪ್ರಶ್ನಿಸಿದರು.

ಈ ದೇಶದ ಸಂವಿಧಾನದ ಮೇಲೆ ನಂಬಿಕೆ ಇರದ ಬಿಜೆಪಿಗರು ಸಂವಿಧಾನ ಬದಲಾವಣೆ ಮಾಡುತ್ತೇವೆ ಎನ್ನುತ್ತಾರೆ. ಬಿಜೆಪಿಗರಿಗೆ ಪಂಚಾಯ್ತಿ ಮೇಲೆ ನಂಬಿಕೆ ಇಲ್ಲ. ಹೀಗಾಗಿ ಸ್ಥಳೀಯ ಆಡಳಿತಗಳಿಗೆ ಅಧಿಕಾರ ನೀಡದೆ ಎಲ್ಲವನ್ನೂ ತಾವೇ ಕಬಳಿಸುತಿದ್ದಾರೆ ಎಂದರು.

ಮಾಜಿ ಶಾಸಕ ಮಂಕಾಳ ವೈದ್ಯ ಮಾತನಾಡಿ ‘ತಾ.ಪಂ, ಜಿಲ್ಲಾ ಪಂಚಾಯ್ತಿಗಳಲ್ಲಿ ಅಧಿಕಾರ ಕಳೆದುಕೊಳ್ಳುವ ಭಯದಿಂದ ಸರ್ಕಾರ ಚುನಾವಣೆ ಮುಂದೂಡಿದೆ. ಸರ್ಕಾರದ ಈ ನೀತಿ ವಿರುದ್ಧ ಚುಣಾವಣಾ ಆಯೋಗ ನ್ಯಾಯಾಲಯದಲ್ಲಿ ದಾವೆ ಹೂಡಿದೆ. ಸ್ಥಳೀಯ ಆಡಳಿತಕ್ಕೆ ಅಧಿಕಾರ ನೀಡಲು ಮನಸ್ಸಿಲ್ಲದ ಅಧಿಕಾರಕ್ಕಾಗಿ ಬಿಜೆಪಿಗರು ಸುಳ್ಳು ಹೇಳುತ್ತಾ ಸಾಮಾನ್ಯ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ನಾಯ್ಕ, ಕಾಂಗ್ರೆಸ್ ಮುಖಂಡ ಮುಹಮ್ಮದ್ ಮುಝಮ್ಮಿಲ್ ಕಾಝಿಯಾ,  ಮಾಜಿ ಶಾಸಕ ಜೆ.ಡಿ.ನಾಯ್ಕ, ಉತ್ತರ ಕನ್ನಡ ಜಿಲ್ಲಾ ಅಲ್ಪಸಂಖ್ಯಾತ ಜಿಲ್ಲಾ ಘಟಕ ಅಧ್ಯಕ್ಷ ಅಬ್ದುಲ್ ಮಜೀದ್, ಮಾಜಿ ಜಿ.ಪಂ.ಅಧ್ಯಕ್ಷೆ ಜಯಶ್ರೀ ಮೊಗೇರ, ನಯನಾ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News