ಆ್ಯಶಸ್ ಟೆಸ್ಟ್:85 ವರ್ಷಗಳ ಹಳೆಯ ಸಾಧನೆ ಪುನರಾವರ್ತಿಸಿದ ಮಿಚೆಲ್ ಸ್ಟಾರ್ಕ್

Update: 2021-12-08 14:41 GMT
Photo:twitter

ಬ್ರಿಸ್ಬೇನ್ : ಆಸ್ಟ್ರೇಲಿಯದ ಎಡಗೈ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಅವರು ಬ್ರಿಸ್ಬೇನ್‌ನಲ್ಲಿ ಬುಧವಾರ ಆರಂಭವಾದ  ಆ್ಯಶಸ್ ಟೆಸ್ಟ್ ಸರಣಿಯ ಮೊದಲ  ಪಂದ್ಯದ ಮೊದಲ ಎಸೆತದಲ್ಲಿ ಇಂಗ್ಲೆಂಡ್ ಆರಂಭಿಕ ಬ್ಯಾಟರ್ ರೋರಿ ಬರ್ನ್ಸ್ ಅವರ ವಿಕೆಟ್ ಪಡೆಯುವ ಮೂಲಕ ಆತಿಥೇಯರಿಗೆ ಉತ್ತಮ ಆರಂಭವನ್ನು ನೀಡಿದರು. ಇದರೊಂದಿಗೆ ಸ್ಟಾರ್ಕ್ ಆ್ಯಶಸ್ ಸರಣಿಯ  85 ವರ್ಷಗಳ ಹಳೆಯ ದಾಖಲೆಯೊಂದನ್ನು ಪುನರಾವರ್ತಿಸಿದರು.

ಸ್ಟಾರ್ಕ್ ಅವರು ಎಲ್ಲ ಮಾದರಿಯ  ಕ್ರಿಕೆಟ್ ನಲ್ಲಿ ಮೊದಲ ಓವರ್‌ನಲ್ಲಿ ವಿಕೆಟ್ ಪಡೆಯುವ  ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದ್ದಾರೆ.  ಸ್ಟಾರ್ಕ್ ಅವರು 1936 ರ ಬಳಿಕ ಮೊದಲ ಬಾರಿ  ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಆ್ಯಶಸ್ ಸರಣಿಯ ಮೊದಲ ಎಸೆತದಲ್ಲಿ ವಿಕೆಟ್ ಪಡೆದ ಎರಡನೇ ಬೌಲರ್ ಎನಿಸಿಕೊಂಡರು.

  ಆಸ್ಟ್ರೇಲಿಯಾದ ಎರ್ನಿ ಮೆಕ್‌ಕಾರ್ಮಿಕ್, ಅವರು ಡಿಸೆಂಬರ್ 1936 ರಲ್ಲಿ ಸರಣಿಯ ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ನ ಸ್ಟಾನ್ ವರ್ತಿಂಗ್ಟನ್ ಅವರನ್ನು ಮೊದಲ ಎಸೆತದಲ್ಲಿ ಶೂನ್ಯಕ್ಕೆ ಔಟ್ ಮಾಡಿದ್ದರು. ಕುತೂಹಲಕಾರಿ ಅಂಶವೆಂದರೆ , ಆ ಪಂದ್ಯವೂ ಬ್ರಿಸ್ಬೇನ್‌ನಲ್ಲಿ ನಡೆದಿತ್ತು

ಸ್ಟಾರ್ಕ್ ಈಗ 2014 ರ ಆರಂಭದಿಂದ ಇಲ್ಲಿಯ ತನಕ 13 ನೇ ಬಾರಿ ಟೆಸ್ಟ್ ಪಂದ್ಯದ ಮೊದಲ ಓವರ್‌ನಲ್ಲಿ ವಿಕೆಟ್ ಪಡೆದಿದ್ದಾರೆ,. ಪಟ್ಟಿಯಲ್ಲಿ ಇಂಗ್ಲೆಂಡ್ ನ ಜೇಮ್ಸ್ ಆಂಡರ್ಸನ್‌ಗಿಂತ ಮುಂದಿದ್ದಾರೆ. ಅದೇ ಅವಧಿಯಲ್ಲಿ ಸ್ಟಾರ್ಕ್ ಅವರು ಏಕದಿನ ಅಂತರಾಷ್ಟ್ರೀಯ ಪಂದ್ಯಗಳಲ್ಲಿ 19 ಬಾರಿ ಈ ಸಾಧನೆ ಮಾಡಿದ್ದಾರೆ.  ಇದು ಎರಡನೇ ಸ್ಥಾನದಲ್ಲಿರುವ ಲಸಿತ್ ಮಾಲಿಂಗಕ್ಕಿಂತ ಹೆಚ್ಚು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News