ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಪ್ರಕರಣ: ಡೆತ್ ನೋಟ್ ಪತ್ತೆ, ಓರ್ವ ಮಹಿಳೆ ಪೊಲೀಸ್ ವಶಕ್ಕೆ

Update: 2021-12-08 13:22 GMT

ಮಂಗಳೂರು : ನಗರದ ಪಾಂಡೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಮೋರ್ಗನ್ಸ್‌ಗೇಟ್- ಜಪ್ಪು ಮಾರುಕಟ್ಟೆ ಬಳಿಯ ಮನೆಯೊಂದ ರಲ್ಲಿ ಪತಿ, ಪತ್ನಿ ಹಾಗೂ ಇಬ್ಬರು ಮಕ್ಕಳು ಮೃತಪಟ್ಟ ಸ್ಥಿತಿಯಲ್ಲಿ ಇಂದು ಪತ್ತೆಯಾಗಿದ್ದಾರೆ.

ಮೂಲತಃ ಬಾಗಲಕೋಟೆ ಜಿಲ್ಲೆಯವರಾಗಿದ್ದು ಮಂಗಳೂರಿನಲ್ಲಿ ಕಳೆದ ಸುಮಾರು 8 ವರ್ಷಗಳಿಂದ ವಾಸವಿದ್ದ ನಾಗೇಶ್ ಶೇರಿಗುಪ್ಪಿ (30), ಆತನ ಪತ್ನಿ ವಿಜಯಲಕ್ಷ್ಮೀ (26), ಮಕ್ಕಳಾದ ಸಪ್ನಾ (8) ಮತ್ತು ಸಮರ್ಥ್(4) ಮೃತಪಟ್ಟವರು.

ಪತಿ-ಪತ್ನಿಯ ನಡುವೆ ವೈಮನಸ್ಸು ಇದ್ದ ಹಿನ್ನೆಲೆಯಲ್ಲಿ ನಾಗೇಶ್ ತನ್ನ ಪತ್ನಿ ಮತ್ತು ಮಕ್ಕಳನ್ನು ಕೊಲೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನಿಸಿದ್ದಾರೆ.

ಈ ನಡುವೆ ನಾಗೇಶ್ ಬರೆದಿದ್ದಾರೆ ಎನ್ನಲಾದ ಡೆತ್‌ನೋಟ್‌ನಲ್ಲಿ ಮತಾಂತರದ ಉಲ್ಲೇಖ ಮಾಡಲಾಗಿದ್ದು, ಈ ಸಂಬಂಧ ಬಿಜೈ ನಿವಾಸಿ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

ಮೃತ ನಾಗೇಶ್ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿದ್ದರೆ, ವಿಜಯಲಕ್ಷ್ಮಿ ಮತ್ತು ಮಕ್ಕಳ ಮೃತದೇಹ ಹಾಸಿಗೆಯ ಮೇಲೆ ಬಿದ್ದಿರುವುದು ಕಂಡು ಬಂದಿದೆ. ಮೃತದೇಹಗಳನ್ನು ವೆನ್ಲಾಕ್ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಮೃತರ ಸಂಬಂಧಿಕರು ಬಾರದೆ ಇದ್ದುದರಿಂದ ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಿದ್ದಾರೆ.

ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಡಿಸಿಪಿಗಳಾದ ಹರಿರಾಂ ಶಂಕರ್, ದಿನೇಶ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ವಿಚಾರಣೆ ಮುಂದುವರಿದಿದೆ.

ಮೃತ ನಾಗೇಶ್ ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಪತ್ನಿ- ಮಕ್ಕಳಿಗೆ ವಿಷ ಪ್ರಾಶನ ಮಾಡಿಸಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ನಾಪತ್ತೆಯಾಗಿದ್ದ ವಿಜಯಲಕ್ಷ್ಮೀ

ನಾಗೇಶ್ ಟ್ಯಾಂಕರ್ ಡ್ರೈವರ್ ಜತೆಗೆ ಇತರ ಎಲ್ಲಾ ರೀತಿಯ ಕೂಲಿ ಕೆಲಸಗಳನ್ನೂ ಮಾಡುತ್ತಿದ್ದನೆನ್ನಲಾಗಿದೆ. ಕಳೆದ 15 ದಿನಗಳಿಂದ ಜೆಪ್ಪು ಮಾರ್ಕೆಟ್ ಬಳಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದು, ಇದಕ್ಕೂ ಮೊದಲು ವೆಲೆನ್ಸಿಯಾದ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು. ವಿಜಯಲಕ್ಷ್ಮೀ ಅದೇ ಅಪಾರ್ಟ್‌ಮೆಂಟ್‌ನಲ್ಲಿ ಸೆಕ್ಯುರಿಟಿಯಾಗಿ ಕೆಲಸ ಮಾಡಿಕೊಂಡಿದ್ದರು. ಮಾತ್ರವಲ್ಲದೆ, ಕಳೆದ ಅಕ್ಟೋಬರ್‌ನಲ್ಲಿ ವಿಜಯಲಕ್ಷ್ಮೀ ನಾಪತ್ತೆಯಾಗಿದ್ದ ಬಗ್ಗೆ ನಾಗೇಶ್ ಪೊಲೀಸರಿಗೆ ದೂರು ನೀಡಿದ್ದರು. ಕೆಲ ದಿನಗಳ ಬಳಿಕ ವಿಜಯಲಕ್ಷ್ಮೀ ಪೊಲೀಸ್ ಠಾಣೆಗೆ ಹಾಜರಾಗಿ, ‘ಪತಿ ಮದ್ಯಪಾನ ಮಾಡಿ ಕಿರುಕುಳು ನೀಡುತ್ತಿದ್ದ ಕಾರಣ ಮನೆ ಬಿಟ್ಟು ಹೋಗಿದ್ದೆ. ಆಂಟಿ ಮನೆಯಲ್ಲಿ ಇದ್ದೆ’ ಎಂದು ದೂರಿಕೊಂಡಿದ್ದರು. ಬಳಿಕ ಜತೆಯಾಗಿ ವಾಸಿಸುತ್ತಿದ್ದರೆನ್ನಲಾಗಿದೆ.

ಮೃತ ನಾಗೇಶ್ ಎಎಸ್‌ಐ ಅವರಿಗೆ ವಾಯ್ಸ್ ಮೆಸೇಜ್ ಕಳುಹಿಸಿದ್ದು, ಎಎಸ್‌ಐ ಅವರು ಸುಮಾರು 10.30ರ ವೇಳೆಗೆ ಮೆಸೇಜ್ ನೋಡಿದ್ದು ಕೂಡಲೇ ಕಾರ್ಯಪ್ರವೃತ್ತರಾಗಿ ಘಟನಾ ಸ್ಥಳಕ್ಕೆ ತೆರಳಿದ್ದರು. ಆ ವೇಳೆಗೆ ಮನೆಯಲ್ಲಿ ನಾಲ್ವರು ಕೂಡಾ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಕೋಳಿಗಳಿಗೆ ಆಹಾರ ಹಾಕದೇ ಇದ್ದಾಗ ಅನುಮಾನ

‘ನಾಗೇಶ್ ಕಳೆದ 8 ವರ್ಷಗಳಿಂದ ನಮ್ಮ ಜತೆ ಎಲ್ಲಾ ರೀತಿಯ ಕೆಲಸ ಮಾಡುತ್ತಿದ್ದ. ಹಿಂದೆ ವೆಲೆನ್ಸಿಯಾದಲ್ಲಿ ನೆಲೆಸಿದ್ದ ಆತ ಕಳೆದ 15 ದಿನಗಳಿಂದ ಜಪ್ಪುವಿನ ನಮ್ಮ ಮನೆಯಲ್ಲಿಯೇ ಕುಟುಂಬದ ಜತೆ ವಾಸವಾಗಿದ್ದ. ನಮ್ಮ ಮನೆಯ ಅಂಗಳದಲ್ಲಿ ಹೊಸ ಕೋಳಿಗೂಡುಗಳ ನಿರ್ಮಾಣ ಕೆಲಸವೂ ನಡೆಯುತ್ತಿದೆ. ಮಾತ್ರವಲ್ಲದೆ ನಮ್ಮ ಸಾಕು ನಾಯಿಗಳು, ಕೋಳಿ, ಮೊಲ ಸೇರಿದಂತೆ ಪ್ರಾಣಿ ಪಕ್ಷಿಗಳಿಗೆ ಆಹಾರವನ್ನೂ ಆತ ಹಾಕುತ್ತಿದ್ದು, ನಮ್ಮ ಜತೆ ಕೆಲಸಕ್ಕೂ ಬರುತ್ತಿದ್ದ. ನಿನ್ನೆಯೂ ಸಂಜೆಯವರೆಗೆ ನಮ್ಮ ಜತೆ ಕೆಲಸ ಮಾಡಿದ್ದ. ಇಂದು ಬೆಳಗ್ಗೆ ಬಂದಾಗ ಕೋಳಿಗೂಡುಗಳಲ್ಲಿದ್ದ ಕೋಳಿಗಳಿಗೆ ಆಹಾರ ಹಾಕದೆ ಇರುವುದನ್ನು ಗಮನಿಸಿ ಸಂಶಯಗೊಂಡು ಮನೆಯೊಳಗೆ ನೋಡಿದಾಗ ಅನುಮಾನವಾಯಿತು. ತಕ್ಷಣ ಪೊಲೀಸರಿಗೆ ಕರೆ ಮಾಡಿದೆ’ ಎಂದು ಮನೆಯ ಯಜಮಾನ ಅಭಿಪ್ರಾಯಿಸಿದ್ದಾರೆ.

ಮೃತ ಮಹಿಳೆ ಪಕ್ಕದ ನಾಲ್ಕೈದು ಮನೆಗಳಲ್ಲಿ ಮನೆಕೆಲಸ ಮಾಡಿಕೊಂಡಿದ್ದು, ನಮ್ಮ ಮನೆಗೂ ಬರುತ್ತಿದ್ದಳು. ಕಳೆದ ಒಂದು ವಾರದಿಂದೀಚೆಗೆ ಕೆಲಸಕ್ಕೆ ಬಂದಿರಲಿಲ್ಲ ಎಂದು ನೆರೆ ಮನೆಯವರೊಬ್ಬರು ತಿಳಿಸಿದ್ದಾರೆ.

'ಪತಿ-ಪತ್ನಿ ನಡುವೆ ಸಂಘರ್ಷವಿತ್ತು- ವಾಯ್ಸ್ ಮೆಸೇಜ್ ಕಳುಹಿಸಿದ್ದ'

''ಮೃತ ನಾಗೇಶ್ ಬುಧವಾರ ಬೆಳಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯ ಎಎಸ್‌ಐ ಅವರಿಗೆ ವಾಯ್ಸ್ ಮೆಸೇಜ್ ಕಳುಹಿಸಿದ್ದ. ಅದರಲ್ಲಿ ಪತ್ನಿಯನ್ನು ನೂರ್‌ ಜಹಾನ್ ಎಂಬಾಕೆ ಮತಾಂತರ ಮಾಡಿರುವ ಬಗ್ಗೆ, ತನ್ನ ಕುಟುಂಬದ ಸಾವಿನ ಬಗ್ಗೆ ಉಲ್ಲೇಖಿಸಿದ್ದ. ಅಲ್ಲದೆ ಕೈಯಲ್ಲೇ ಬರೆದಿರುವ ಡೆತ್‌ನೋಟ್ ಕೂಡ ಪತ್ತೆಯಾಗಿದ್ದು ಅದರಲ್ಲಿಯೂ ಮತಾಂತರವೇ ಕುಟುಂಬದ ಸಾವಿಗೆ ಕಾರಣ ಎಂಬುದಾಗಿ ಉಲ್ಲೇಖಿಸಿದ್ದಾನೆ.

ವಾಯ್ಸ್ ಮೆಸೇಜ್ ನೋಡಿದ ಕೂಡಲೇ ಪೊಲೀಸರು ಸ್ಥಳಕ್ಕೆ ತೆರಳಿ ವೈದ್ಯರನ್ನು ಕರೆಸಿ ಪರೀಕ್ಷೆ ಮಾಡಿಸಿದ್ದಾರೆ. ಆದರೆ ಅಷ್ಟರಲ್ಲೇ ನಾಲ್ವರು ಕೂಡ ಮೃತಪಟ್ಟಿದ್ದರು. ಪತಿ-ಪತ್ನಿಯರ ನಡುವೆ ತುಂಬಾ ಸಂಘರ್ಷ ಇದ್ದುದು ಗೊತ್ತಾಗಿದೆ. ವಿಜಯಲಕ್ಷ್ಮೀ ಅವರು ನೂರ್‌ ಜಹಾನ್ ಸೇರಿದಂತೆ ಹಲವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ನೂರ್‌ ಜಹಾನ್ ಜತೆ ಹೆಚ್ಚು ಸಂಪರ್ಕ ಹೊಂದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ನಾಗೇಶ್ ಅವರು ಡೆತ್‌ ನೋಟ್‌ನಲ್ಲಿ ಕೂಡ ಇದೇ ವಿಚಾರ ಉಲ್ಲೇಖಿಸಿದ್ದು ಈ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ನೂರ್‌ ಜಹಾನ್ ಎಂಬಾಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ''.

- ಎನ್.ಶಶಿಕುಮಾರ್, ಪೊಲೀಸ್ ಆಯುಕ್ತರು, ಮಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News