ಮತ್ತೊಮ್ಮೆ ‘ಅಪ್ಪು’ ಮೇಲಿನ ಅಭಿಮಾನ ಮೆರೆದ ಮಂಗಳೂರು ಪೊಲೀಸ್ ಕಮಿಷನರ್‌

Update: 2021-12-08 10:34 GMT

ಮಂಗಳೂರು, ಡಿ.8: ನಟ ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿರುವ ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಮ್ಮ ಅಭಿಮಾನವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ತಮ್ಮ ಮನೆಯಲ್ಲಿ ಸಾಕಿದ ‘ಭವಾನಿ’ ಹೆಸರಿನ ಹಸು ಹಾಕಿರುವ ಗಂಡು ಕರುವಿಗೆ ‘ಅಪ್ಪು’ ಎಂದು ನಾಮಕರಣ ಮಾಡಿದ್ದಾರೆ.

ಕೃಷಿ ಬಗ್ಗೆ ಅಪಾರ ಒಲವು, ಆಸಕ್ತಿಯನ್ನು ಹೊಂದಿರುವ ಕಮಿಷನರ್ ಶಶಿಕುಮಾರ್ ಪಾಂಡೇಶ್ವರದಲ್ಲಿ ತಾವು ವಾಸವಿರುವ ಪೊಲೀಸ್ ಕಮಿಷನರ್ ಬಂಗ್ಲೆಯಲ್ಲಿ 2 ಹಸುಗಳನ್ನು ಅವುಗಳ ಕರುಗಳೊಂದಿಗೆ ಸಾಕಿ ಸಲಹುತ್ತಿದ್ದಾರೆ. ಸಮಯ ಸಿಕ್ಕಾಗಲೆಲ್ಲಾ ಖುದ್ದು ತಾವೇ ಆರೈಕೆ, ಪಾಲನೆ ಮಾಡುತ್ತಿರುವ ಶಶಿಕುಮಾರ್ ಖರೀದಿಸಿ ತಂದಿದ್ದ ಗಿಡ್ಡ ತಳಿಯ ಗರ್ಭಿಣಿ ಹಸು ‘ಭವಾನಿ’ ಡಿ. 4ರಂದು ಗಂಡು ಕರುವಿಗೆ ಜನ್ಮ ನೀಡಿತ್ತು.ಈ ಬಗ್ಗೆ ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಡಿ.6ರಂದು ಮುದ್ದಾದ ಬಿಳಿ ಕಂದು ಬಣ್ಣದ ‘ಅಪ್ಪು’ ಜತೆಗಿನ ಫೋಟೋವನ್ನು ಹಂಚಿಕೊಂಡಿರುವ ಅವರು, ‘ನಮ್ಮ ಮನೆಯ ಹೊಸ ಸದಸ್ಯ ಅಪ್ಪು’ ಎಂದು ಬರೆದುಕೊಂಡಿದ್ದಾರೆ.

ತಾವು ಹೋದಲ್ಲೆಲ್ಲಾ ಜನರ ಜತೆ ಸ್ನೇಹದಿಂದ ಬೆರೆಯುವ ಪೊಲೀಸ್ ಕಮಿಷನರ್ ಶಶಿಕುಮಾರ್ ಸ್ನೇಹಜೀವಿ ಮಾತ್ರವಲ್ಲದೆ, ಪ್ರಾಣಿಗಳ ಬಗ್ಗೆಯೂ ಅಪಾರ ಕಾಳಜಿ, ಪ್ರೀತಿ ಹೊಂದಿರುವವರು. ತಮ್ಮ ಕರ್ತವ್ಯದ ಸಂದರ್ಭ ರಸ್ತೆಯಲ್ಲಿ ಓಡಾಡುವಾಗ ಬೀದಿ ನಾಯಿಗಳನ್ನು ಕಂಡರೂ ಮೈದಡವಿ ಅಕ್ಕರೆ ತೋರಿಸುವ ಅವರು, ಇತ್ತೀಚೆಗೆ ಮಂಗಳೂರು ಪೊಲೀಸ್ ಶ್ವಾನದಳ ವಿಭಾಗಕ್ಕೆ ‘ಜೂಲಿ’ ಹೆಸರಿನ ಶ್ವಾನದ ಮರಿಯೊಂದು ಸೇರ್ಪಡೆಗೊಂಡಾಗಲೂ ಅದರೊಂದಿಗಿನ ಫೋಟೋವನ್ನು ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದರು.

ಪುನೀತ್ ರಾಜ್ ಕುಮಾರ್ (ಅಪ್ಪು) ಅವರ ಅಪ್ಪಟ ಅಭಿಮಾನಿಯಾಗಿರುವ ಶಶಿಕುಮಾರ್, ಅಪ್ಪು ಅಸ್ವಸ್ಥಗೊಂಡು ಆಸ್ಪತ್ರೆಗೆ ಸೇರಿದ ಸಂದರ್ಭದಲ್ಲೇ ಮಂಗಳೂರು ಜನತೆಗೆ ವೀಡಿಯೋ ಸಂದೇಶದ ಮೂಲಕ ಆರೋಗ್ಯಕ್ಕಾಗಿ ಪ್ರಾರ್ಥಿಸುವಂತೆ ಮನವಿ ಮಾಡಿದ್ದರು. ನಿಧನದ ಬಳಿಕ ‘ಅಪ್ಪು ನಮ್ಮೆಲ್ಲರಿಗಾಗಿ ಮತ್ತೊಮ್ಮೆ ಹುಟ್ಟಿ ಬಾ’ ಎಂಬ ಅಭಿಮಾನದ ನುಡಿ ನಮನದೊಂದಿಗೆ, ನಟನೆಯ ಜತೆಯಲ್ಲೇ ತನ್ನ ವ್ಯಕ್ತಿತ್ವದಿಂದ ಎಲ್ಲರಿಗೂ ಸ್ಫೂರ್ತಿಯಾಗಿದ್ದ ಅಪ್ಪುಗೆ ಪದ್ಮಶ್ರೀ ನೀಡಬೇಕೆಂದು ಅಭಿಯಾನವನ್ನು ಮಾಡಿದ್ದರು. ಹಾಡು ಹೇಳುವ ಹವ್ಯಾಸವನ್ನು ಇಟ್ಟುಕೊಂಡಿರುವ ಕಮಿಷನರ್ ಶಶಿಕುಮಾರ್ ಅಪ್ಪು ನಿಧನದ ಬಳಿಕ ನಗರದ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಪ್ಪು ನಟನೆಯ ‘ಬೊಂಬೆ ಹೇಳುತೈತೆ’ ಹಾಡು ಹಾಡಿದ್ದರು. ಮಾತ್ರವಲ್ಲದೆ ಅಪ್ಪುವಿಗೆ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂಬ ತಮ್ಮ ಅಭಿಯಾನದ ಅಂಗವಾಗಿ ಸಾಮಾಜಿಕ ಜಾಲತಾಣದಲ್ಲಿ ಅಪ್ಪು ನಟನೆಯ ಚಲನಚಿತ್ರಗಳ ಹಾಡಾದ ‘ಏನಿದು ಈ ದಿನ’ ಹಾಡು ಅಪ್ಪುವಿನ ಇಷ್ಟವಾದ ಹಾಡಾದ ‘ಮೈ ಶಾಯರ್ ತೊ ನಹೀಂ’ ಮೊದಲಾದ ಹಾಡುಗಳನ್ನು ಹಾಡುವ ಮೂಲಕ ಗಾನ ನಮನವನ್ನು ಸಲ್ಲಿಸುತ್ತಾ ಬಂದಿದ್ದಾರೆ.

ಮನೆಯಲ್ಲಿ ತಾವೇ ಬಿಡುವಿದ್ದಾಗ ಅಡುಗೆ ಮಾಡುವ ಹವ್ಯಾಸವನ್ನೂ ಹೊಂದಿರುವ ಅವರು, ಮನೆಗೆ ಬಂದ ಸ್ನೇಹಿತರಿಗೆ ಊಟವನ್ನೂ ತಾವೇ ಖುದ್ದು ಬಡಿಸುತ್ತಾರೆ. ತಾವು ಹೋದಲ್ಲೆಲ್ಲಾ ಅಲ್ಲಿನ ಜನರ ಆಚಾರ ವಿಚಾರ, ಸಂಸ್ಕೃತಿ, ಅಲ್ಲಿನ ವಿಶೇಷತೆಗಳನ್ನು ಕಲಿತು ಜನರ ಜತೆ ಬೆರೆಯುವ ಶಶಿಕುಮಾರ್ ಇತ್ತೀಚೆಗೆ ಕಟೀಲು ಸಮೀಪದ ಎಕ್ಕಾರಿನಲ್ಲಿ ನಡೆದ ಕೆಸರುಗದ್ದೆಯಲ್ಲಿ ತಮ್ಮ ಸ್ನೇಹಿತರು, ಕುಟುಂಬ ಸದಸ್ಯರ ಜತೆ ಭಾಗವಹಿಸಿ ಸಂಭ್ರಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News