ಡಿ.11ರಂದು 19ನೇ ವರ್ಷದ ಮೂಡುಬಿದಿರೆ ಕಂಬಳ

Update: 2021-12-08 10:53 GMT

ಮೂಡುಬಿದಿರೆ, ಡಿ.8: ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿ ಆಶ್ರಯದಲ್ಲಿ ಕಡಲಕೆರೆ ನಿಸರ್ಗಧಾಮದ ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದ ಜೋಡುಕರೆಯಲ್ಲಿ ಡಿ.11ರಂದು 19ನೇ ವರ್ಷದ ಹೊನಲು ಬೆಳಕಿನ ಕಂಬಳ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ, ಶಾಸಕ ಉಮಾನಾಥ ಕೋಟ್ಯಾನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ತುಳುನಾಡಿನ ಗುತ್ತಿನ ಮನೆ ಮಾದರಿಯಲ್ಲಿ ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ವೇದಿಕೆ ಅನಾವರಣ ಹಾಗೂ ಕಂಬಳ ಬಹುಭಾಷ ಸಿನಿಮಾದ ಚಿತ್ರೀಕರಣ ಈ ಬಾರಿಯ ವಿಶೇಷವಾಗಿದೆ ಎಂದವರು ಹೇಳಿದರು.

 ಕ್ರೈಸ್ತ ಧರ್ಮಗುರು ವಂ.ವಾಲ್ಟರ್ ಡಿಸೋಜ, ಅಲಂಗಾರು ಶ್ರೀಮಹಾಲಿಂಗೇಶ್ವರ ದೇವಳದ ಪ್ರಧಾನ ಅರ್ಚಕ ಈಶ್ವರ ಭಟ್, ಪುತ್ತಿಗೆ ನೂರಾನಿ ಮಸೀದಿಯ ಧರ್ಮಗುರು ಝಿಯಾವುಲ್ಲ ಹಾಗೂ ಕುಂಟಾಡಿ ಸುಧೀರ್ ಹೆಗ್ಡೆ ಕಂಬಳವನ್ನು ಅಂದು ಬೆಳಗ್ಗೆ 7 ಗಂಟೆಗೆ ಉದ್ಘಾಟಿಸಲಿರುವರು. 8 ಗಂಟೆಗೆ ರಾಣಿ ಅಬ್ಬಕ್ಕ ಪ್ರತಿಮೆಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾಲಾರ್ಪಣೆ ಮಾಡಲಿರುವರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬರಿಗೆ ಕಾರ್ಯಕ್ರಮದಲ್ಲಿ ವಿಶೇಷ ಸನ್ಮಾನ ನಡೆಯಲಿದೆ ಎಂದು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಸಂಜೆ 5 ಗಂಟೆಗೆ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಸಚಿವರಾದ ಬೈರತಿ ಬಸವರಾಜ್, ಎಸ್.ಅಂಗಾರ, ಸಿ.ಟಿ.ರವಿ, ವಿ.ಸುನೀಲ್ ಕುಮಾರ್ ವಿವಿಧ ಕ್ಷೇತ್ರಗಳ ಶಾಸಕರು ಮುಖ್ಯ ಅತಿಥಿಗಳಾಗಿರುವರು. ಅನಿವಾಸಿ ಉದ್ಯಮಿ ರೊನಾಲ್ಡ್ ಕೊಲಾಸೊ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಸುರೇಶ್ ಕಟೀಲ್ ಅವರನ್ನು ಸನ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದರು.

ಮೂಡುಬಿದಿರೆ ಕಂಬಳವನ್ನು ನಾಡಹಬ್ಬ ಮಾದರಿಯಲ್ಲಿ ಆಚರಿಸಲಾಗುತ್ತಿದ್ದು, ಕಡಲಕೆರೆ ನಿಸರ್ಗಧಾಮವನ್ನು ಅಭಿವೃದ್ಧಿಪಡಿಸುವಲ್ಲಿ ಸಚಿವರುಗಳ ನೆರವು ಕೋರಲಾಗಿದೆ. ಕಂಬಳವನ್ನು 24 ಗಂಟೆಯ ಒಳಗೆ ಮುಗಿಸುವಲ್ಲಿ ಕೋಣದ ಯಜಮಾನರು, ತಾಂತ್ರಿಕ ವರ್ಗದವರು ಸಹಕರಿಸುವಂತೆ ವಿನಂತಿಸಿದರು.

ಸುದ್ದಿಗೋಷ್ಠಿಯಲ್ಲಿ ಕಂಬಳ ಸಮಿತಿಯ ಕೋಶಾಧಿಕಾರಿ ಭಾಸ್ಕರ್ ಎಸ್. ಕೋಟ್ಯಾನ್, ಕಾರ್ಯದರ್ಶಿಗಳಾದ ಕೆ.ಪಿ.ಸುಚರಿತ ಶೆಟ್ಟಿ, ರಂಜಿತ್ ಪೂಜಾರಿ, ಉಪಾಧ್ಯಕ್ಷ ಸುರೇಶ್ ಪೂಜಾರಿ, ಬಿಜೆಪಿ ಮಂಡಲ ಅಧ್ಯಕ್ಷ ಸುನೀಲ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News