ಮಂಗಳೂರು: ಪಿಯುಸಿ ಪರೀಕ್ಷೆ ಮುಂದೂಡಲು ಆಗ್ರಹಿಸಿ ಎನ್‌ಎಸ್‌ಯುಐ ಪ್ರತಿಭಟನೆ

Update: 2021-12-08 17:10 GMT

ಮಂಗಳೂರು, ಡಿ.8: ಹೆಚ್ಚುತ್ತಿರುವ ಕೋವಿಡ್ ಪ್ರಕರಣ ಮತ್ತು ಕೋವಿಡ್ ರೂಪಾಂತರ ಒಮಿಕ್ರಾನ್ ವೈರಸ್ ಹರಡುವಿಕೆಯ ಮಧ್ಯೆಯೇ ಪಿಯುಸಿ ಪರೀಕ್ಷೆ ನಡೆಸುವುದನ್ನು ಖಂಡಿಸಿ ಮತ್ತು ಪರೀಕ್ಷೆಯನ್ನು ಮುಂದೂಡುವಂತೆ ಆಗ್ರಹಿಸಿ ಎನ್‌ಎಸ್‌ಯುಐ ದ.ಕ.ಜಿಲ್ಲಾ ಸಮಿತಿಯು ಬುಧವಾರ ನಗರದ ಕ್ಲಾಕ್‌ ಟವರ್ ಬಳಿ ಪ್ರತಿಭಟಿಸಿ, ರಸ್ತೆ ತಡೆ ನಡೆಸಿದರು.

ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಸವಾದ್ ಸುಳ್ಯ ಮಾತನಾಡಿ, ರಾಜ್ಯ ಸರಕಾರವು ಕೋವಿಡ್ ಹೆಸರಿನಲ್ಲಿ ಮೂರನೇ ಅಲೆಯ ಭೀತಿ ಹುಟ್ಟಿಸಿ ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗೆ ಚೆಲ್ಲಾಟವಾಡುತ್ತಿದೆ. ಇದರಿಂದ ವಿದ್ಯಾರ್ಥಿಗಳು, ಹೆತ್ತವರು ಆತಂಕಿತರಾಗಿದ್ದಾರೆ. 18 ವರ್ಷದೊಳಗಿನ ಯಾರಿಗೂ ಇನ್ನೂ ಕೋವಿಡ್ ಲಸಿಕೆ ನೀಡಿಲ್ಲ. ಲಸಿಕೆ ನೀಡದವರ ಮಾಹಿತಿಯನ್ನೂ ಕೂಡ ಶಾಲಾ- ಕಾಲೇಜು ವಿದ್ಯಾರ್ಥಿಗಳ ಮೂಲಕವೇ ಪಡೆಯುವ ತಂತ್ರಗಾರಿಕೆಯನ್ನು ರಾಜ್ಯ ಸರಕಾರ ಮಾಡುತ್ತಿದೆ ಎಂದು ಆಪಾದಿಸಿದರು.

ವಿದ್ಯಾರ್ಥಿಗಳ ಬಗ್ಗೆ ಸರಕಾರಕ್ಕೆ ಕಿಂಚಿತ್ತೂ ಕಾಳಜಿ ಇಲ್ಲ ಎಂಬುದಕ್ಕೆ ಕೋವಿಡ್ ಸಂಕಷ್ಟ ಕಾಲದಲ್ಲಿ ದ್ವಿತೀಯ ಪಿಯು ಅರ್ಧ ವಾರ್ಷಿಕ ಪರೀಕ್ಷೆ ನಡೆಸುವುದೇ ಸಾಕ್ಷಿಯಾಗಿದೆ. ಸರಕಾರ ತಕ್ಷಣ ಈ ಪರೀಕ್ಷೆಯನ್ನು ಮುಂದೂಡಿ ವಿದ್ಯಾರ್ಥಿಗಳ ಆತಂಕವನ್ನು ದೂರ ಮಾಡಬೇಕು ಎಂದು ಸವಾದ್ ಸುಳ್ಯ ಹೇಳಿದರು.

ಎನ್‌ಎಸ್‌ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಹಾನ್ ಆಳ್ವ, ಮುಖಂಡರಾದ ಪವನ್ ಸಾಲ್ಯಾನ್, ಶಫೀಕ್, ಅಯಾನ್, ಅಹ್ನಾಫ್, ನಿಖಿಲ್ ಶೆಟ್ಟಿ, ಅಯಾಝ್, ಶಕೀಲ್, ರಾಹುಲ್ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News