×
Ad

ಡಿ.18: ಬೆಂಗಳೂರಿನಲ್ಲಿ ತುಳುವ ಐಸಿರ-2021 ಕಾರ್ಯಕ್ರಮ

Update: 2021-12-08 20:51 IST

ಬೆಂಗಳೂರು, ಡಿ.8 : ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಸಂಯೋಜನೆಯಲ್ಲಿ ಬೆಂಗಳೂರಿನ ತುಳು ಸಂಘ ಸಂಸ್ಥೆಯ ಸಹಕಾರದಲ್ಲಿ ಡಿ.18ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ತುಳುವ ಐಸಿರ-2021 ಕಾರ್ಯಕ್ರಮ ನಡೆಯಲಿದೆ ಎಂದು ತುಳು ಅಕಾಡಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ಹೇಳಿದರು.

ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಂತರಂಗ ಸಭಾಂಗಣದಲ್ಲಿ ಬೆಂಗಳೂರಿನ ವಿವಿಧ ಸಂಘ ಸಂಸ್ಥೆಗಳ ಹಾಗೂ ತುಳು ಭಾಷಾಭಿಮಾನಿಗಳೊಂದಿಗೆ ತುಳುವ ಐಸಿರ-2021 ಇದರ ಪೂರ್ವ ಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾಂಸ್ಕೃತಿಕ-ಸಾಹಿತ್ಯಿಕ-ಸಾಧಕರ ಕಲಾ-ಸಂಸ್ಕೃತಿ-ಸಾಂಸ್ಕೃತಿಕ ಸಂಭ್ರಮವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿದ್ದಾರೆ. ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಸಚಿವರು, ಸಂಸದರು, ಶಾಸಕರ ಸಹಿತ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಸಾಂಸ್ಕೃತಿಕತೆಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಯುವ ಸಮುದಾಯವನ್ನು ತುಳು ಸಂಸ್ಕೃತಿಯೊಂದಿಗೆ ಸಂಸ್ಕಾರಕ್ಕೆ ಪೂರಕವಾಗಿ ಜೋಡಿಸಿಕೊಳ್ಳುವ ಕಾರ್ಯಕ್ರಮ ನಡೆಯಲಿದೆ ಎಂದರು.

ಸಾಹಿತಿ ದಿ. ಪ್ರಭಾಕರ ರೈಯ ಸಂಸ್ಮರಣೆಯೊಂದಿಗೆ ಅವರ ಹೆಸರಿನಲ್ಲಿ ಅಕಾಡಮಿಯಲ್ಲಿರುವ ದತ್ತಿ ನಿಧಿ ಪ್ರಶಸ್ತಿಯನ್ನು ಸಾಧಕ ರೊಬ್ಬರಿಗೆ ನೀಡಿ ಗೌರವಿಸಲಾಗುವುದು, ಬೆಂಗಳೂರಿನ ಎಲ್ಲಾ ತುಳು ಭಾಷಾಭಿಮಾನಿಗಳನ್ನು ಇನ್ನಷ್ಟು ಸಂಘಟನಾತ್ಮಕವಾಗಿ ಒಗ್ಗೂಡಿಸುವ ಕೆಲಸ ನಡೆಸಲು ತುಳುವ ಐಸಿರ ಕಾರ್ಯಕ್ರಮ ಪ್ರೇರಣೆಯಾಗಲಿದೆ ಎಂದರು.

ಸಭೆಯಲ್ಲಿ ಡಾ.ಕೆ.ಸಿ.ಬಲ್ಲಾಳ್, ಬಿ.ಎನ್.ಹೆಗ್ಡೆ, ನಿಧೀಶ್ ಶೆಟ್ಟಿ, ವಿಶ್ವನಾಥ ಶೆಟ್ಟಿ ಪಳ್ಳಿ, ಜಯಪ್ರಸಾದ್, ರಂಜನ್ ಎಸ್.ವೈ, ಅಜಿತ್ ಹೆಗ್ಡೆ, ಕೆ.ಎನ್.ಅಡಿಗ, ಎನ್.ನಟರಾಜ್, ಪುರುಷೋತ್ತಮ ಚೇಡ್ಲಾ, ಬಿ.ಮಾಧವ ಕುಲಾಲ್, ಡಾ.ರಾಮಕೃಷ್ಣ ಕುಲಾಲ್ ಮತ್ತಿತರರು ಪಾಲ್ಗೊಂಡಿದ್ದರು.

ಅಕಾಡಮಿಯ ಕಾರ್ಯಕ್ರಮ ಸದಸ್ಯೆ ಸಂಚಾಲಕಿ ಕಾಂತಿ ಶೆಟ್ಟಿ ಬೆಂಗಳೂರು ಸ್ವಾಗತಿಸಿದರು. ಸದಸ್ಯ ನರೇಂದ್ರ ಕೆರೆಕಾಡು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News