ಉಡುಪಿ ಜಿಲ್ಲಾ ಕಾರಾಗೃಹದಲ್ಲಿ ಕೌಶಲ್ಯ ತರಬೇತಿ ಮೂಲಕ ಕೈದಿಗಳ ಮನ ಪರಿವರ್ತನೆ
ಉಡುಪಿ, ಡಿ.8: ಕ್ಷಣಿಕ ಕೋಪ ಅಥವಾ ಕ್ಷುಲ್ಲಕ ಕಾರಣಗಳಿಗಾಗಿ ಅಪರಾಧ ಮಾಡಿ ವಿಚಾರಣಾಧೀನ ಕೈದಿಗಳಾಗಿ ಜೈಲು ಸೇರುವ ಬಹುತೇಕ ಮಂದಿ ಯಾವುದೇ ಅಪರಾಧ ಮನೋಭಾವ ಹೊಂದಿರುವುದಿಲ್ಲ. ಇವರ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಾಗಿ ಅಪರಾಧಿ ಎಂದು ಆದೇಶ ಬರುವವರವರೆಗೂ ಅವರು ಎಲ್ಲರಂತೆ ಸಾಮಾನ್ಯರು.
ಅಪರಾಧ ಪ್ರಕರಣಗಳಲ್ಲಿ ವಿಚಾರಣಾಧೀನ ಕೈದಿಯಾಗಿ ಕಾರಾಗೃಹಕ್ಕೆ ಬರುವ ವ್ಯಕ್ತಿ, ಪ್ರಕರಣದ ವಿಚಾರಣೆ ಮುಗಿಯುವರೆಗೂ ಕಾರಾಗೃಹದಲ್ಲಿ ಇರಬೇಕಿದ್ದು, ಇದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗುವ ಸಾಧ್ಯತೆಗಳು ಅಧಿಕವಾಗಿವೆ. ಅಲ್ಲದೇ ಬಿಡುಗಡೆಯ ನಂತರ ಜೀವನ ನಿರ್ವಹಣೆಗೆ ಮುಂದೇನು ಎಂಬ ಸಂದಿಗ್ದದಲ್ಲಿ ಸಿಲುಕುತ್ತಾನೆ.
ಕಾರಾಗೃಹ ಸೇರುವ ಮೊದಲು ಯಾವುದೋ ಉದ್ಯೋಗ ಮಾಡುತ್ತಾ ತನ್ನ ತಂದೆ-ತಾಯಿ, ಹೆಂಡತಿ ಮಕ್ಕಳನ್ನು ನೋಡಿಕೊಳ್ಳು ತ್ತಿದ್ದು, ಕುಟುಂಬಕ್ಕೆ ಆಧಾರ ವಾಗಿದ್ದ ವ್ಯಕ್ತಿ ಕೈದಿಯಾದರೆ ಕುಟುಂಬದ ದಿನನಿತ್ಯದ ನಿರ್ವಹಣೆ ಅತ್ಯಂತ ಕಷ್ಟಕರವಾಗುತ್ತದೆ. ಈ ಚಿಂತೆಯೂ ಸಹ ಕೈದಿಗಳನ್ನು ಕಾಡಲಿದೆ. ಇದಕ್ಕೆಲ್ಲಾ ಪರಿಹಾರ ಇದೆ ಎನ್ನುವಂತೆ ಕೈದಿಗಳು ಕಾರಾಗೃಹದಿಂದಲೇ ಸಂಪಾದನೆ ಮಾಡಿ, ಕುಟುಂಬವನ್ನು ಪೋಷಿಸುವ ಸುವರ್ಣಾವಕಾಶವನ್ನು ಕಾರಾಗೃಹ ಸುಧಾರಣಾ ಸೇವೆಗಳ ಇಲಾಖೆ ಒದಗಿಸಿದ್ದು, ಉಡುಪಿಯ ಕಾರಾಗೃಹದಲ್ಲೂ ಶೀಘ್ರಲ್ಲೇ ಈ ಯೋಜನೆ ಆರಂಭಗೊಳ್ಳಲಿದೆ.
ಉಡುಪಿಯ ಜಿಲ್ಲಾ ಕಾರಾಗೃಹದಲ್ಲಿರುವ ಕೈದಿಗಳಿಗೆ, ಜಿಲ್ಲಾ ಕೌಶಲ್ಯ ಅಭಿವೃದ್ದಿ ಇಲಾಖೆ ಮೂಲಕ ಅಡುಗೆ ತರಬೇತಿ, ಮೋಟಾರ್ ರಿವೈಂಡಿಂಗ್ ತರಬೇತಿ, ಕ್ಯಾಂಡಲ್ ಮೇಕಿಂಗ್ ಕುರಿತು ಕರಕುಶಲ ತರಬೇತಿಯನ್ನು ಆಯೋಜಿಸಲು ನಿರ್ಧರಿಸಲಾಗಿದ್ದು, ಕೈದಿಗಳಿಗೆ ಆಸಕ್ತವಿರುವ ಈ ಮೂರು ಕ್ಷೇತ್ರಗಳಲ್ಲಿ ಸೂಕ್ತ ತರಬೇತಿ ನೀಡಿ, ಅವರಿಂದಲೇ ವಸ್ತುಗಳ ತಯಾರಿಕೆಯನ್ನು ಆರಂಭಿಸಲಾಗುತ್ತಿದೆ.
ಅಲ್ಲದೇ ಪ್ರತಿನಿತ್ಯ ಅವರು ತಯಾರಿಸಿದ ವಸ್ತುಗಳಿಗೆ ಸೂಕ್ತ ದರ ನೀಡಲಿದ್ದು, ಈ ಮೊತ್ತವನ್ನು ನೇರವಾಗಿ ಕೈದಿಗಳ ಹೆಸರಿನಲ್ಲಿ ತೆರೆದ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುವುದು. ಇದರಿಂದ ಕೈದಿಗಳು ಪ್ರತಿ ತಿಂಗಳೂ ತಮ್ಮ ಕುಟುಂಬ ಗಳ ನಿರ್ವಹಣೆಗೆ ಜೈಲಿನಿಂದಲೇ ಆರ್ಥಿಕ ಸಹಾಯ ಮಾಡಲು ಸಾಧ್ಯ ವಾಗುತ್ತದೆ.
ಜೈಲುಗಳಲ್ಲಿ ಬಂಧಿಯಾಗಿರುವ ಕೈದಿಗಳು ಬಿಡುಗಡೆ ನಂತರ ಸ್ವಾವಲಂಬಿ ಬದುಕು ಸಾಗಿಸಲು ಹಾಗೂ ಅವರಲ್ಲಿ ಆತ್ಮಸ್ಥೈರ್ಯ ತುಂಬಲು, ಈ ಕರಕುಶಲ ತರಬೇತಿ ನೆರವಾಗಲಿದ್ದು, ಕೈದಿಗಳಲ್ಲಿರುವ ವಿವಿಧ ತಾಂತ್ರಿಕ ಕೌಶಲ್ಯಗಳ ಸದ್ಬಳಕೆಯಾಗಲಿದೆ. ಅಲ್ಲದೇ ಅವರು ಯಾವುದಾದರೊಂದು ಕಾರ್ಯದಲ್ಲಿ ತೊಡಗುವುದರಿಂದ ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳು ಮೂಡುವುದಿಲ್ಲ.
ಹಿಂದೆ ಕೈದಿಗಳಿಗೆ ಕಾರಾಗೃಹಗಳಲ್ಲಿ ಟೈಲರಿಂಗ್, ನೇಯ್ಗೆ, ಸೋಪು ಮತ್ತು ಫಿನಾಯಿಲ್ ತಯಾರಿಸುವ ಕರಕುಶಲ ತರಬೇತಿ ನೀಡಲಾಗುತ್ತಿತ್ತು. ಆದರೆ, ಇಂತಹ ತರಬೇತಿಗೆ ಎಲ್ಲ ಕೈದಿಗಳು ಸಮಾನ ಆಸಕ್ತಿ ತೋರುತ್ತಿರಲಿಲ್ಲ. ಆದರೆ ಈಗ ಕೈದಿಗಳು ಬಿಡುಗಡೆ ನಂತರದ ಜೀವನೋಪಾಯವನ್ನು ದೃಷ್ಟಿಯಲ್ಲಿಟ್ಟು ಕೊಂಡು ಉದ್ಯೋಗ ಹಾಗೂ ಕರಕುಶಲ ತರಬೇತಿ ನೀಡಲಾಗು ತ್ತಿದೆ. ಇದು ಕೈದಿಗಳಲ್ಲಿ ಹೊಸ ಭರವಸೆ ಮೂಡಿಸಿದೆ. ತರಬೇತಿ ಪೂರೈಸುವ ಪ್ರತಿಯೊಬ್ಬ ಕೈದಿಗೆ ತರಬೇತಿ ಸಂಸ್ಥೆಯಿಂದ ಪ್ರಮಾಣ ಪತ್ರ ನೀಡಲಾಗುತ್ತದೆ.
ಕೈದಿಗಳು ಬಿಡುಗಡೆಯಾದಾಗ ಅವರ ಜೀವನೋಪಾಯಕ್ಕೆ ನೆರವಾಗಲು ಕಾರಾಗೃಹ ಇಲಾಖೆ ಇಂತಹ ತರಬೇತಿ ನೀಡುವ ಯೋಜನೆ ರೂಪಿಸಿದ್ದು, ಶಿಕ್ಷೆಯ ಅವಧಿಯನ್ನು ಕೈದಿಗಳು ಸದುಪಯೋಗಪಡಿಸಿಕೊಳ್ಳಲೂ ಈ ತರಬೇತಿ ಅನುಕೂಲವಾಗಿದ್ದು, ಕೈದಿಗಳು ಸಮಾಜದ ಮುಖ್ಯವಾಹಿನಿಗೆ ಸೇರಲು ಸುರಕ್ಷಿತ ವಾತಾವರಣವನ್ನು ಜೈಲುಗಳು ಒದಗಿಸುತ್ತಿವೆ.
''ಜೈಲು ಎನ್ನುವುದು ಶಿಕ್ಷೆ ನೀಡುವ ಕೇಂದ್ರಗಳಲ್ಲ, ಅವು ಮನಪರಿವರ್ತನೆಯ ತಾಣಗಳು. ಯಾವುದೋ ಕೆಟ್ಟ ಗಳಿಗೆಯಲ್ಲಿ ವ್ಯಕ್ತಿಯ ಮನಸ್ಸಿನ ನಿಯಂತ್ರಣ ಮೀರಿ ಅಪರಾಧ ಪ್ರಕರಣಗಳು ಜರುಗುತ್ತವೆ. ಕೈದಿಗಳು ಬಿಡುಗಡೆಯ ನಂತರ ತಮ್ಮದೆ ಆದ ಸ್ವಂತ ಉದ್ಯಮ ಆರಂಭಿಸಿ, ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗುವಂತಹ ಕೌಶಲ ತರಗತಿಗಳನ್ನು ಉಡುಪಿ ಕಾರಾಗೃಹದಲ್ಲಿ ಆಯೋಜಿಸಲಾಗುತ್ತಿದೆ. ಅಲ್ಲದೆ ಕೈದಿಗಳಿಗೆ ಆರ್ಟ್ ಆಫ್ ಲಿವಿಂಗ್ ಸಹಯೋಗದಲ್ಲಿ ಯೋಗ ತರಬೇತಿಯನ್ನು ನೀಡುತ್ತಿದ್ದು, ಇದರಿಂದ ಕೈದಿಗಳು ಅಪರಾಧ ಮನೋಭಾವದಿಂದ ಮುಕ್ತರಾಗಲು ಹಾಗೂ ಸ್ವಸ್ಥ ಮನಸ್ಸು ಮತ್ತು ಆರೋಗ್ಯ ಪಡೆಯಲು ಸಾಧ್ಯವಾಗಲಿದೆ.''
-ಶ್ರೀನಿವಾಸ್, ಅಧೀಕ್ಷಕು ಜಿಲ್ಲಾ ಕಾರಾಗೃಹ ಉಡುಪಿ.