113 ದಿನದ ಉಪವಾಸ ಸತ್ಯಾಗ್ರಹದ ಬಳಿಕ ಪೆಲೆಸ್ತೀನ್ ಕೈದಿಯ ಬಿಡುಗಡೆ

Update: 2021-12-08 17:47 GMT
ಸಾಂದರ್ಭಿಕ ಚಿತ್ರ

ಜೆರುಸಲೇಂ, ಡಿ.8: ಇಸ್ರೇಲ್ ಪಡೆಗಳಿಂದ ಬಂಧಿಸಲ್ಪಟ್ಟಿದ್ದ ಪೆಲೆಸ್ತೀನ್‌ನ ಪ್ರಜೆಯನ್ನು 113 ದಿನದ ಉಪವಾಸ ಸತ್ಯಾಗ್ರಹದ ಬಳಿಕ ಈ ವಾರ ಜೈಲಿನಿಂದ ಬಿಡುಗಡೆಗೊಳಿಸಿದ್ದು ಅವರ ಆರೋಗ್ಯ ಚೇತರಿಸುತ್ತಿದೆ ಎಂದು ವರದಿಯಾಗಿದೆ.

ಪೆಲೆಸ್ತೀನ್‌ನ ಪ್ರಜೆ ಫಾಸ್ಫೌಸ್ ಎಂಬವರನ್ನು ಆಡಳಿತಾತ್ಮಕ ಬಂಧನದಲ್ಲಿ ಇಡಲಾಗಿದೆ ಎಂದು ಇಸ್ರೇಲ್ ಘೋಷಿಸಿತ್ತು. ಆಡಳಿತಾತ್ಮಕ ಬಂಧನ ಕಾಯ್ದೆಯಡಿ ವ್ಯಕ್ತಿಗಳನ್ನು ವಿಚಾರಣೆಯಿಲ್ಲದೆ ಅನಿರ್ದಿಷ್ಟಾವಧಿ ಬಂಧನಲ್ಲಿಡಬಹುದಾಗಿದೆ. ಇದನ್ನು ವಿರೋಧಿಸಿ ಫಾಸ್ವೌಸ್ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ‌

ಮಾಜಿ ದೇಹದಾರ್ಢ್ಯ ಪಟುವಾಗಿರುವ ಫಾಸ್ಫೌಸ್‌ರನ್ನು ಜೈಲಿನಿಂದ ಬಿಡುಗಡೆಗೊಳಿಸಿದ ಬಳಿಕ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸುಮಾರು 4 ತಿಂಗಳಿಂದ ಅನ್ನ, ಆಹಾರ, ನೀರು ಸೇವಿಸದೆ ಉಪವಾಸವಿದ್ದ ಕಾರಣ ಅವರ ದೇಹತೂಕ 45 ಕಿ.ಗ್ರಾಂ ಕಡಿಮೆಯಾಗಿದೆ. ಉಪವಾಸ ಸತ್ಯಾಗ್ರಹದಿಂದ ಅಗಾಧ ಮಾನಸಿಕ ಮತ್ತು ದೈಹಿಕ ಯಾತನೆಗೆ ಒಳಗಾದ ಕಾರಣ ಅವರ ಸ್ಮರಣಶಕ್ತಿಯ ಮೇಲೆ ಪರಿಣಾಮ ಬೀರಿದೆ ಮತ್ತು ಅವರು ಅತ್ಯಂತ ನಿಶ್ಯಕ್ತರಾಗಿದ್ದಾರೆ. ಆದರೆ ಅವರ ಚೈತನ್ಯ, ಉತ್ಸಾಹ ಕುಂದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸ್ವಾತಂತ್ರ್ಯ ಬಯಸಿದ್ದ ಕಾರಣ ನಾನು ಉಪವಾಸ ಸತ್ಯಾಗ್ರಹದ ನಿರ್ಧಾರ ಕೈಗೊಂಡೆ. ನನ್ನ ಉದ್ದೇಶ ನ್ಯಾಯಯುತವಾಗಿದೆ ಎಂಬುದು ನನಗೆ ಖಚಿತವಾಗಿತ್ತು ಯಾಕೆಂದರೆ ಈ ಭೂಮಿ ಪೆಲೆಸ್ತೀನೀಯರದ್ದು ಮತ್ತು ನಾವು ಇಲ್ಲಿ ಜೀವಿಸುವ ಹಕ್ಕು ಹೊಂದಿದ್ದೇವೆ ಎಂದು 32 ವರ್ಷದ ಫಾಸ್ಫೌಸ್ ಹೇಳಿದ್ದಾರೆ.

‘ಮೆಕ್ಯಾನಿಕ್ ಆಗಿ ಕೆಲಸ ಮಾಡುವ ಫಾಸ್ಫೌಸ್‌ರನ್ನು ಈ ಹಿಂದೆಯೂ ಇಸ್ರೇಲ್ ಸೇನೆ ರಹಸ್ಯ ಮಾಹಿತಿ’  ‘ಆಧರಿಸಿ ಬಂಧಿಸಿತ್ತು. ಪೆಲೆಸ್ತೀನ್ ಪ್ರಜೆಗಳನ್ನು ಪ್ರಕರಣ ದಾಖಲಿಸದೆ ಬಂಧಿಸಲು ರಹಸ್ಯ ಮಾಹಿತಿ’ ಎಂಬ ವ್ಯವಸ್ಥೆ ಅವಕಾಶ ಮಾಡಿಕೊಡುತ್ತಿದೆ. ರಹಸ್ಯ ಮಾಹಿತಿ ಯಾವುದು ಎಂಬುದನ್ನು ಬಂಧಿತ ವ್ಯಕ್ತಿಗಳಿಗೆ ಅಥವಾ ಅವರ ವಕೀಲರಿಗೆ ತಿಳಿಸುವುದಿಲ್ಲ. ಆಡಳಿತಾತ್ಮಕ ಬಂಧನವನ್ನು ಪ್ರತೀ 6 ತಿಂಗಳಿಗೊಮ್ಮೆ ನವೀಕರಿಸುತ್ತಾ, ಅನಿರ್ದಿಷ್ಟಾವಧಿಗೆ ವಿಸ್ತರಿಸಬಹುದಾಗಿದೆ ಎಂದು ರಮಲ್ಲಾ ಮೂಲದ ಅದಾಮೀರ್ ರೈಟ್ಸ್ ಗ್ರೂಫ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News