ನಾಯಕ ಸ್ಥಾನದಿಂದ ಕೆಳಗಿಳಿಯಲು ನಿರಾಕರಿಸಿದ ವಿರಾಟ್ ಕೊಹ್ಲಿ, ಚಾಟಿ ಬೀಸಿದ ಬಿಸಿಸಿಐ

Update: 2021-12-08 18:07 GMT

ಹೊಸದಿಲ್ಲಿ: ಭಾರತವು ಕಳಪೆ ಪ್ರದರ್ಶನ ನೀಡಿ ಟ್ವೆಂಟಿ-20 ವಿಶ್ವಕಪ್‌ನಿಂದ ಬೇಗನೆ ನಿರ್ಗಮಿಸಿದ ನಂತರ ವಿರಾಟ್ ಕೊಹ್ಲಿಯ ನಾಯಕತ್ವ ಸ್ಥಾನಕ್ಕೆ ಸಂಚಕಾರ ಬಂದಿತ್ತು.  ಬುಧವಾರದಂದು ಬಿಸಿಸಿಐ  ವಿರಾಟ್ ಕೊಹ್ಲಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ್ದಲ್ಲದೆ  ರೋಹಿತ್ ಶರ್ಮಾ 2023ರ ವಿಶ್ವಕಪ್ ತನಕ ಭಾರತದ ಸೀಮಿತ ಓವರ್ ನಾಯಕನಾಗಿರುತ್ತಾರೆ ಎಂದು ಪ್ರಕಟಿಸಿತು.

ಈಗಾಗಲೇ ಟ್ವೆಂಟಿ-20 ನಾಯಕತ್ವವನ್ನು ತ್ಯಜಿಸಿರುವ ಕೊಹ್ಲಿ ಏಕದಿನ ನಾಯಕತ್ವದಿಂದ ಸ್ವಯಂಪ್ರೇರಿತರಾಗಿ ಕೆಳಗಿಳಿಯಲು ಬಿಸಿಸಿಐ ಕಳೆದ 48 ಗಂಟೆಗಳ ಕಾಲ ಕಾದಿತ್ತು ಎಂದು ತಿಳಿದುಬಂದಿದೆ. ಆದರೆ ಕೊಹ್ಲಿ ಹಾಗೆ ಮಾಡಲಿಲ್ಲ. 49ನೇ ತಾಸಿನ ವೇಳೆಗೆ ಕೊಹ್ಲಿ ಅವರ ಸ್ಥಾನಕ್ಕೆ ರೋಹಿತ್ ಶರ್ಮಾರನ್ನು ನೇಮಿಸಿರುವ ಬಿಸಿಸಿಐ ದಿಲ್ಲಿ ಆಟಗಾರನಿಗೆ ಚಾಟಿ ಬೀಸಿದೆ.

ಕೊಹ್ಲಿಯನ್ನು ವಜಾಗೊಳಿಸಲಾಗಿದೆ ಎಂದು ಬಿಸಿಸಿಐ ತನ್ನ ಹೇಳಿಕೆಯಲ್ಲಿ  ತಿಳಿಸಲಿಲ್ಲ. ಆಯ್ಕೆ ಸಮಿತಿಯು ರೋಹಿತ್ ಅವರನ್ನು ಏಕದಿನ ಹಾಗೂ ಟ್ವೆಂಟಿ-20 ತಂಡಗಳ ನಾಯಕನನ್ನಾಗಿ ಹೆಸರಿಸಲು ನಿರ್ಧರಿಸಿದೆ ಎಂದು ಬಿಸಿಸಿಐ ಟ್ವೀಟಿಸಿತ್ತು.

ತವರಿನಲ್ಲಿ ನಡೆಯಲಿರುವ 2023ರ ಏಕದಿನ ವಿಶ್ವಕಪ್‌ನಲ್ಲಿ ಭಾರತವನ್ನು ಮುನ್ನಡೆಸುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದ  ಕೊಹ್ಲಿಯವರನ್ನು ಬಿಸಿಸಿಐ ಹಾಗೂ ಅದರ ರಾಷ್ಟ್ರೀಯ ಆಯ್ಕೆ ಸಮಿತಿಯು ವಜಾಗೊಳಿಸಿದೆ.

ಗ್ರೂಪ್ ಲೀಗ್ ಹಂತದಲ್ಲಿ ಭಾರತ ಟಿ-20 ವಿಶ್ವಕಪ್‌ನಿಂದ ನಿರ್ಗಮಿಸಿದಾಗಲೇ  ಕೊಹ್ಲಿ ನಾಯಕತ್ವ ಕಳೆದುಕೊಳ್ಳುವುದು ನಿಶ್ಚಿತವಾಗಿತ್ತು. ಆದರೆ  ಬಿಸಿಸಿಐ ದಿಗ್ಗಜರು  ಕಳೆದ ನಾಲ್ಕೂವರೆ ವರ್ಷಗಳ ಕಾಲ ನಾಯಕನಾಗಿದ್ದ ಕೊಹ್ಲಿಗೆ ಗೌರವಯುತವಾಗಿ ಬೀಳ್ಕೊಡಲು ಬಯಸಿದ್ದರು.

ಅಂತಿಮವಾಗಿ  ಕೊಹ್ಲಿ ಅವರನ್ನು ವಜಾಗೊಳಿಸಲು ಬಿಸಿಸಿಐ ಧೈರ್ಯ ತೋರಿದಂತಿದೆ. ಒಂದೊಮ್ಮೆ ಬಲಿಷ್ಠ  ನಾಯಕನಾಗಿದ್ದ ಕೊಹ್ಲಿ  ಅದನ್ನು ಒಪ್ಪಿಕೊಳ್ಳದೆ ಬೇರೆ ಆಯ್ಕೆ ಇರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News