ಬ್ರಿಟನ್: ಲಾಕ್‌ಡೌನ್ ಉಲ್ಲಂಘಿಸಿ ಕ್ರಿಸ್ಮಸ್ ಪಾರ್ಟಿ; ಸರಕಾರದ ವಿರುದ್ಧ ವ್ಯಾಪಕ ಖಂಡನೆ

Update: 2021-12-08 18:19 GMT
ಸಾಂದರ್ಭಿಕ ಚಿತ್ರ:PTI

ಲಂಡನ್, ಡಿ.8: ಬ್ರಿಟಿಷ್ ಪ್ರಧಾನಿಯ ಕಚೇರಿಯ ಸಿಬಂದಿಯೊಬ್ಬರು ಲಾಕ್‌ಡೌನ್ ಉಲ್ಲಂಘಿಸಿದ್ದ, ಕ್ರಿಸ್ಮಸ್ ಪಾರ್ಟಿಯನ್ನು ನಡೆಸಿದ್ದ ಬಗ್ಗೆ ತಮಾಷೆ ಮಾಡಿರುವ ವೀಡಿಯೊ ಸೋರಿಕೆಯಾಗಿದ್ದು, ಇತರರ ಮೇಲೆ ಹೇರಿದ ಕೊರೋನ ನಿಯಮಾವಳಿಗಳನ್ನು ಸರಕಾರಿ ಅಧಿಕಾರಿಗಳು ಗಾಳಿಗೆ ತೂರುತ್ತಾರೆ ಎಂಬ ಆರೋಪಗಳಿಗೆ ಪುಷ್ಟಿ ನೀಡಿದೆ.

ಕಳೆದ ವರ್ಷದ ಡಿಸೆಂಬರ್ 18ರಂದು ಈ ಪಾರ್ಟಿ ನಡೆದಿತ್ತು. ಆಗ ಬ್ರಿಟನ್ ನಲ್ಲಿ ಕೊರೋನ ಸೋಂಕು ಉಲ್ಬಣಿಸಿದ್ದರಿಂದ ಒಳಾಂಗಣ ಸಮಾರಂಭಗಳನ್ನು ನಿರ್ಬಂಧಿಸಲಾಗಿತ್ತು. ಅಲ್ಲದೆ, ಕ್ರಿಸ್ಮಸ್ ಪಾರ್ಟಿ ನಡೆಸುವುದನ್ನೂ ಸರಕಾರ ನಿಷೇಧಿಸಿತ್ತು. ಆದರೆ ‘ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಕಚೇರಿ ಸಿಬ್ಬಂದಿ ವರ್ಗದವರು , ವೈನ್, ವಿವಿಧ ಬಗೆಯ ಆಹಾರ ಪದಾರ್ಥ, ಆಟ, ಮನೋರಂಜನೆ, ಹಬ್ಬದ ಉಡುಗೊರೆ ವಿನಿಮಯ ಕಾರ್ಯಕ್ರಮಗಳ ಸಹಿತ ಪಾರ್ಟಿ ನಡೆಸಿದ್ದಾರೆ ಎಂದು ಇತ್ತೀಚಿಗೆ ಹಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು.

2020ರ ಡಿಸೆಂಬರ್ 22ರಂದು ದಾಖಲಿಸಿರುವ ವೀಡಿಯೊ ಇದಾಗಿದ್ದು, ಪ್ರಧಾನಿಯ ಕಚೇರಿ ನಡೆಸುವ ಪತ್ರಿಕಾಗೋಷ್ಟಿಯ ಅಣಕು ಕಾರ್ಯಕ್ರಮದಂತೆ ಭಾಸವಾಗುತ್ತಿದೆ. ಸರಕಾರದ ಮಾಧ್ಯಮ ಕಾರ್ಯದರ್ಶಿಯಾಗಿದ್ದ ಅಲಿಗ್ರಾ ಸ್ಟಾರ್ಟನ್, ಡೌನಿಂಗ್ ಸ್ಟ್ರೀಟ್ ನಲ್ಲಿರುವ ಪ್ರಧಾನಿಯ ಕಚೇರಿಯಲ್ಲಿ ನಡೆದಿದ್ದ ಅಕ್ರಮ ಕ್ರಿಸ್ಮಸ್ ಪಾರ್ಟಿಯ ಕುರಿತು ತಮಾಷೆ ಮಾಡಿದ್ದಾರೆ. ಆಗ, ಪತ್ರಕರ್ತನಂತೆ ನಟಿಸಿದ ಮತ್ತೊಬ್ಬ ಉದ್ಯೋಗಿ‘ ಶುಕ್ರವಾರ ರಾತ್ರಿ ಡೌನಿಂಗ್ ಸ್ಟ್ರೀಟ್ ನಲ್ಲಿ ಕ್ರಿಸ್ಮಸ್ ಪಾರ್ಟಿ ನಡೆದಿದೆ ಎಂಬ ವರದಿಯನ್ನು ಟ್ವಿಟರ್ ನಲ್ಲಿ ಈಗಷ್ಟೇ ನೋಡಿದ್ದೇನೆ. ಈ ಬಗ್ಗೆ ಏನಂತೀರಿ? ಎಂದು ಪ್ರಶ್ನಿಸಿದ್ದಾನೆ.

ಆಗ ಗಟ್ಟಿಯಾಗಿ ನಗುವ ಸ್ಟಾರ್ಟನ್ ‘ನಾನು ಮನೆಗೆ ಹೋಗಿದ್ದೆ’ ಎನ್ನುತ್ತಾರೆ. ‘ಉತ್ತರ ನೀಡಿ’  ‘ಎಂದು ಸಹೋದ್ಯೋಗಿ ಪ್ರಶ್ನಿಸಿದಾಗ ಇದು ಪಾರ್ಟಿಯಾಗಿರಲಿಲ್ಲ. ಕೇವಲ ಚೀಸ್ ಮತ್ತು ವೈನ್ ಮಾತ್ರ’ ಎಂದು ಮತ್ತೊಂದು ಧ್ವನಿ ಉತ್ತರಿಸುತ್ತದೆ. ‘ಚೀಸ್ ಮತ್ತು ವೈನ್ ಸರಿಯೇ? ಅದು ವ್ಯವಹಾರ ಸಭೆಯಾಗಿತ್ತು ಎನ್ನುತ್ತಾ ಸ್ಟಾರ್ಟನ್ ಮತ್ತೆ ನಗುವ ದೃಶ್ಯವಿದೆ.

‘ಈ ವೀಡಿಯೊ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಧಾನಿಯವರ ಕಚೇರಿ ಯಾವುದೇ ಕ್ರಿಸ್ಮಸ್ ಪಾರ್ಟಿ ನಡೆದಿಲ್ಲ. ಆಗ ಎಲ್ಲರೂ ಕೋವಿಡ್ ನಿಯಮಗಳನ್ನು ಪಾಲಿಸುತ್ತಿದ್ದರು’ ಎಂದಿದೆ.

ಈ ವರದಿಯನ್ನು ಖಂಡಿಸಿರುವ ವಿಪಕ್ಷ ಲೇಬರ್ ಪಾರ್ಟಿ ಮುಖಂಡ ಕೀರ್ ಸ್ಟಾರ್ಮರ್, ಪ್ರಧಾನಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ದೇಶದಾದ್ಯಂತ ಜನತೆ, ತಮ್ಮ ಕುಟುಂಬದಿಂದ ದೂರವಿರುವ ಸಂದರ್ಭವಿದ್ದರೂ ನಿಯಮಗಳನ್ನು ಅನುಸರಿಸುತ್ತಿದ್ದರು. ಇದೇ ನಿಯಮವನ್ನು ಸರಕಾರವೂ ಪಾಲಿಸುತ್ತಿದೆ ಎಂದು ಭಾವಿಸಲು ಅವರಿಗೆ ಹಕ್ಕು ಇದೆ. ಸುಳ್ಳುಹೇಳುವುದು ಮತ್ತು ಆ ಸುಳ್ಳಿನ ಬಗ್ಗೆ ನೆಗಾಡುವುದು ನಾಚಿಕೆಗೇಡಿನ ವಿಷಯ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News