×
Ad

ಅಮೆರಿಕ ಪತ್ರಕರ್ತೆಯ ಬಿಡುಗಡೆಗೆ ಮಾನವಹಕ್ಕು ಸಂಘಟನೆ ಆಗ್ರಹ

Update: 2021-12-08 23:56 IST
ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್, ಡಿ.8: ಸ್ಪಷ್ಟ ಆರೋಪವಿಲ್ಲದೆ ಲೆಬನಾನ್ ಅಧಿಕಾರಿಗಳಿಂದ ಬಂಧಿಸಲ್ಪಟ್ಟಿರುವ ಅಮೆರಿಕದ ಪತ್ರಕರ್ತೆ ನಡಾ ಹೋಮ್ಸಿಯನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಮಾನವ ಹಕ್ಕುಗಳ ಸಂಘಟನೆ ಆಗ್ರಹಿಸಿದೆ.

ಬೈರೂತ್‌ನಲ್ಲಿರುವ ನಡಾ ಹೋಮ್ಸಿಯ ಮನೆಯ ಮೇಲೆ ನವೆಂಬರ್ 16ರಂದು ಕೋರ್ಟಿನ ಆದೇಶವಿಲ್ಲದೆ ದಾಳಿ ನಡೆಸಿದ್ದ ಪೊಲೀಸರು ಅವರನ್ನು ಬಂಧಿಸಿದ್ದರು. ಅವರಿಗೆ ವಕೀಲರನ್ನು ಸಂಪರ್ಕಿಸಲು ಅವಕಾಶ ನಿರಾಕರಿಸಲಾಗಿದೆ ಎಂದು ಆ್ಯಮ್ನೆಸ್ಟಿ ಇಂಟರ್ನ್ಯಾಷನಲ್ ಹಾಗೂ ಮಾನವ ಹಕ್ಕು ನಿಗಾ ಸಂಸ್ಥೆ ಬುಧವಾರ ಜಂಟಿ ಹೇಳಿಕೆ ನೀಡಿದೆ.

ಹೋಮ್ಸಿ ಮನೆಯಲ್ಲಿ ಸ್ವಲ್ಪ ಪ್ರಮಾಣದ ಮಾದಕ ದೃವ್ಯ ಪತ್ತೆಯಾಗಿದೆ ಎಂದು ಅಧಿಕಾರಿಗಳು ವಿಚಾರಣೆ ಸಂದರ್ಭ ಪ್ರತಿಪಾದಿಸಿದ್ದರು.

ಅಮೆರಿಕದ ‘ನ್ಯಾಷನಲ್ ಪಬ್ಲಿಕ್ ರೇಡಿಯೊ’ ದ ಪತ್ರಕರ್ತೆಯಾಗಿರುವ ಹೋಮ್ಸಿಯನ್ನು ಬಿಡುಗಡೆಗೊಳಿಸುವಂತೆ ನವೆಂಬರ್ 25ರಂದು ಲೆಬನಾನ್ನ ಸರಕಾರಿ ಅಭಿಯೋಜಕರು ಆದೇಶಿಸಿದ್ದರೂ ಅವರಿನ್ನೂ ಲೆಬನಾನ್ ನ ಉನ್ನತಮಟ್ಟದ ಗುಪ್ತಚರ ಸಂಸ್ಥೆ ‘ಜನರಲ್ ಸೆಕ್ಯುರಿಟಿ’ ಯ ವಶದಲ್ಲೇ ಇದ್ದಾರೆ. ಆದೇಶ ಮೀರಿ ಬಂಧನದಲ್ಲಿರಿಸಿರುವುದು ಅಧಿಕಾರದ ದುರುಪಯೋಗವಾಗಿದೆ ಮತ್ತು ಕಾನೂನು ಮತ್ತು ನಿಯಮದ ಬಗ್ಗೆ ಸೆಕ್ಯುರಿಟಿ ಏಜೆನ್ಸಿ ಅಗೌರವ ತೋರುವ ಸಂಕೇತವಾಗಿದೆ ಎಂದು ಮಾನವ ಹಕ್ಕು ನಿಗಾ ಸಮಿತಿಯ ಲೆಬನಾನ್ ಪ್ರತಿನಿಧಿ ಅಯಾ ಮಜೂಬ್ ಹೇಳಿದ್ದಾರೆ.

ಹೋಮ್ಸಿ ಸೂಕ್ತ ಪರವಾನಿಗೆ ಪತ್ರವಿಲ್ಲದೆ ಲೆಬನಾನ್ ನಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಅವರನ್ನು ಗಡೀಪಾರು ಮಾಡುವ ಆದೇಶವನ್ನು 2 ವಾರದ ಹಿಂದೆ ಹೊರಡಿಸಲಾಗಿದೆ. ಈ ಆದೇಶವನ್ನು ಪ್ರಶ್ನಿಸಲು ಹೋಮ್ಸಿಗೆ ಅವಕಾಶ ನೀಡಬೇಕು ಎಂದು ಅವರ ವಕೀಲರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News