ಶಾಲೆಗಳಲ್ಲಿ ಮೊಟ್ಟೆ ನೀಡುವುದರಿಂದ ಸಮಾಜಕ್ಕೆ ಕೆಟ್ಟ ಅಭಿಪ್ರಾಯ ರವಾನೆ: ಪೇಜಾವರ ಶ್ರೀ

Update: 2021-12-09 14:43 GMT
ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ಉಡುಪಿ, ಡಿ.9: ಆಹಾರದ ವಿಷಯದಲ್ಲಿ ಎಲ್ಲರಿಗೂ ಸ್ವಾತಂತ್ರ ಇದೆ. ಮಕ್ಕಳಿಗೆ ತಿಳಿವಳಿಕೆ ಇರುವುದಿಲ್ಲ. ನಮ್ಮ ಪರಂಪರೆಯಲ್ಲಿ ರೂಢಿಸಿಕೊಂಡು ಬಂದಿರುವ ಆಹಾರ ಪದ್ಧತಿಯನ್ನು ಬದಲಾಯಿಸಬಾರದು. ಸರಕಾರ ಶಾಲೆಗಳಲ್ಲಿ ಸಾಮೂಹಿಕವಾಗಿ ಮೊಟ್ಟೆ ನೀಡುವುದರಿಂದ ಸಮಾಜಕ್ಕೆ ಕೆಟ್ಟ ಅಭಿಪ್ರಾಯ ನೀಡಿದಂತಾಗುತ್ತದೆ ಎಂದು ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಸ್ವಾಮೀಜಿ, ಯಾರು ಏನು ಸೇವಿಸುತ್ತಾರೋ ಅದರ ಖರ್ಚುನ್ನು ಸರಕಾರ ನೀಡಬೇಕು. ಶಾಲೆಗಳು ಇರುವುದು ಶಿಕ್ಷಣ ನೀಡುವುದಕ್ಕಾಗಿ ಮಾತ್ರ. ಅದು ಬಿಟ್ಟು ಜೀವನ ಶೈಲಿ ಬದಲಾಯಿಸುವ ವ್ಯವಸ್ಥೆಗೆ ಸರಕಾರ ಕೈಹಾಕಬಾರದು. ಇಲ್ಲಿ ಎಲ್ಲರೂ ಇರುವುದರಿಂದ ಮಕ್ಕಳ ಒಳಗೆ ಮತಬೇಧ ಉಂಟಾಗುವಂತೆ ಮಾಡಬಾರದು ಎಂದರು.

ಮತಾಂತರ ನಿಷೇಧ ಕಾಯ್ದೆ ಕುರಿತು ಪ್ರತಿಕ್ರಿಯಿಸಿದ ಅವರು, ಮಂಗಳೂರಿನಲ್ಲಿ ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿರುವುದು ನಿಜಕ್ಕೂ ದುರಂತ. ಮತಾಂತರದ ಹಾವಳಿಯೂ ಇಡೀ ಮನೆಯನ್ನೇ ಬಲಿ ತೆಗೆದುಕೊಂಡಿದೆ. ಮನಃಪೂರ್ವಕವಾಗಿ ಮತಾಂತರವಾದರೆ ಯಾರು ಕೂಡ ಅಡ್ಡಿ ಪಡಿಸಲ್ಲ. ಆದರೆ ಒತ್ತಡ ಆಮಿಷ ಬಲವಂತದಿಂದ ಮತಾಂತರ ಮಾಡುವುದು ಮನೆಯನ್ನು, ಕುಟುಂಬ, ಸಮಾಜವನ್ನು ಒಡೆದಂತಾಗುತ್ತದೆ ಎಂದು ತಿಳಿಸಿದರು.

ಸಮಾಜದಲ್ಲಿ ವೈಮನಸ್ಸು ಹಾಗೂ ಆತಂಕ ಉಂಟು ಮಾಡುವ ಮತಾಂತರ ಪ್ರಕ್ರಿಯೆ ವಿರುದ್ಧ ಸರಕಾರ ಕಾನೂನಿನ ಮೂಲಕ ಕ್ರಮ ತೆಗೆದುಕೊಳ್ಳಬೇಕು. ಇದು ಸಮಾಜ ಒಡೆಯುವ ಕೃತ್ಯವಾಗಿದೆ. ಇದರಿಂದ ಸಮಾಜದಲ್ಲಿ ವೈಷಮ್ಯ ಸೃಷ್ಟಿಯಾಗುತ್ತದೆ ಎಂದು ಸ್ವಾಮೀಜಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News