ಸಹೋದರ ಭಾಷೆಗಳಿಗೆ ಹೆಚ್ಚು ಅನುವಾದ ಅಗತ್ಯ: ಡಾ.ಮಹಾಬಲೇಶ್ವರ ರಾವ್

Update: 2021-12-09 13:59 GMT

ಉಡುಪಿ, ಡಿ.9: ನಮ್ಮ ನೆರೆಯ ಸಹೋದರ ಭಾಷೆಗಳಲ್ಲಿ ಅನುವಾದದ ಕೊಡುಕೊಳ್ಳುವಿಕೆ ನಿರೀಕ್ಷಿತ ಪ್ರಮಾಣ ದಲ್ಲಿ ನಡೆಯುತ್ತಿಲ್ಲ. ಹಿಂದಿ ಮತ್ತು ಇಂಗ್ಲಿಷ್ ಹೋಲಿಕೆ ಮಾಡಿದರೆ ಮಲಯಾಳಂ, ತಮಿಳು, ತೆಲುಗು ಭಾಷೆಗೆ ನಮ್ಮ ಕೃತಿಗಳು ಹೆಚ್ಚು ಅನುವಾದ ಆಗುತ್ತಿಲ್ಲ. ಆದುದರಿಂದ ನಮ್ಮ ಸಹೋದರ ಭಾಷೆಗಳಲ್ಲಿ ಹೆಚ್ಚು ಹೆಚ್ಚು ವಿನಿಮಯಗಳು ಆಗಬೇಕಾಗಿದೆ ಎಂದು ಶಿಕ್ಷಣ ತಜ್ಞ, ಸಾಹಿತಿ ಡಾ.ಮಹಾಬಲೇಶ್ವರ ರಾವ್ ಹೇಳಿದ್ದಾರೆ.

ಉಡುಪಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಮಂಗಳೂರು ಆಕೃತಿ ಆಶಯ ಪ್ರಕಾಶನ ಸಂಯುಕ್ತ ಆಶ್ರಯದಲ್ಲಿ ಗುರುವಾರ ಉಡುಪಿ ಎಂಜಿಎಂ ಕಾಲೇಜಿನ ಆವರಣದಲ್ಲಿರುವ ಧ್ವನ್ಯಾಲೋಕದಲ್ಲಿ ಎರಡು ಕೃತಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.

ಎ.ಕೆ.ರಾಮಾನುಜನ್ ಕನ್ನಡ ವಚನಗಳನ್ನು ಇಂಗ್ಲಿಷ್‌ಗೆ ಅನುವಾದ ಮಾಡಿ ದರು. ಅದು ಎಲ್ಲರಿಗೂ ಸ್ಪೂರ್ತಿಯಾಗಿ ಹೆಚ್ಚು ಹೆಚ್ಚು ಕನ್ನಡ ಕೃತಿಗಳು ಇಂಗ್ಲಿಷ್‌ಗೆ ಅನುವಾದ ಆಗಬೇಕಾಗಿತ್ತು. ಆದರೆ ಅದು ಆಗದೆ ಅಲ್ಲಿಗೆ ಸ್ಥಗಿತ ಗೊಂಡಿತು. ಇದೀಗ ಮತ್ತೆ ಕಳೆದ ಒಂದು ದಶಕದಿಂದ ಕನ್ನಡ ಕೃತಿಗಳು ಇಂಗ್ಲಿಷ್‌ಗೆ ಅನುವಾದ ಮಾಡುವ ಕಾರ್ಯಗಳು ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ ಎಂದರು.

ಆಗ ಬೇಕಾದ ಸಮಯದಲ್ಲಿ ಹೆಚ್ಚು ಅನುವಾದ ಆಗದೆ ತಡವಾಗಿ ಆಗಲು ನಮ್ಮಲ್ಲಿರುವ ವಸಾಹತುಶಾಹಿ ಧೋರಣೆಯೇ ಕಾರಣವಾಗಿದೆ. ಇಂಗ್ಲಿಷ್‌ನಲ್ಲಿ ಬರುವ ಕೃತಿಗಳು ಶ್ರೇಷ್ಠ. ನಮ್ಮ ಕೃತಿಗಳು ಶ್ರೇಷ್ಠ ಅಲ್ಲ ಎಂಬ ಭಾವನೆ ಹೆಚ್ಚಿನವರಲ್ಲಿದೆ. ಆದರೆ ನಿಜವಾಗಿ ಮಾಸ್ತಿ ಬೆಂಗ್ರೆ ಅವರ ಕೃತಿಗಳಿಗೆ ಹೋಲಿಕೆ ಮಾಡಿದರೆ ಇಂಗ್ಲಿಷ್‌ನಲ್ಲಿನ ಕೃತಿಗಳು ತೃತೀಯ ದರ್ಜೆಯದ್ದಾಗಿದೆ. ನಾವು ನಮ್ಮ ಶ್ರೀಮಂತ ಸಾಹಿತ್ಯ ಪರಂಪರೆಯ ಅಸ್ಮಿತೆಯನ್ನು ಸರಿಯಾಗಿ ಕಂಡುಕೊಂಡಿಲ್ಲ ಎಂದು ಅವರು ತಿಳಿಸಿದರು.

ಡಾ.ಎನ್.ಟಿ.ಭಟ್ ಅನುವಾದಿಸಿರುವ ಡಾ.ಪಾದೇಕಲ್ಲು ವಿಷ್ಣು ಭಟ್ ಅವರ ‘ಮುದ್ದಣ- ಎ ಜೆವೆಲ್ ಅಮಂಗ್ ಕನ್ನಡ ಪೊಯೆಟ್’ ಮತ್ತು ವಿ.ಗ.ನಾಯಕರ ಅನ್‌ರಿಲೆಂಟಿಂಗ್ ಮಿಷನರಿ ಫ್ರಮ್ ನಂದಳಿಕೆ- ನಂದಳಿಕೆ ಬಾಲಚಂದ್ರರಾವ್ ಕೃತಿಯನ್ನು ಅನಾವರಣಗೊಳಿಸಲಾಯಿತು.

ಅಧ್ಯಕ್ಷತೆಯನ್ನು ನಿವೃತ್ತ ಪ್ರಾಂಶುಪಾಲ ಪ್ರೊ.ಕೆ.ಸದಾಶಿವ ರಾವ್ ವಹಿಸಿದ್ದರು. ಅನುವಾದಕ ಡಾ.ಎನ್.ಟಿ.ಭಟ್, ಲೇಖಕ ಡಾ.ಪಾದೇಕಲ್ಲು ವಿಷ್ಣು ಭಟ್, ನಂದಳಿಕೆ ಬಾಲಚಂದ್ರ ರಾವ್, ಕೇಂದ್ರದ ಆಡಳಿತಾಧಿಕಾರಿ ಡಾ.ಜಗದೀಶ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News