×
Ad

ಸಿಖ್‌, ಮುಸ್ಲಿಮರನ್ನು ಭಯೋತ್ಪಾದಕ ಗುಂಪುಗಳೊಂದಿಗೆ ಸಮೀಕರಿಸಿ ಆದೇಶ ಹೊರಡಿಸಿದ ಪೊಲೀಸ್‌ ಅಧಿಕಾರಿ: ವಿವಾದ

Update: 2021-12-09 21:33 IST
ಸಾಂದರ್ಭಿಕ ಚಿತ್ರ

ಭೋಪಾಲ,ಡಿ.9: ಸಿಖ್ ಮತ್ತು ಮುಸ್ಲಿಮರನ್ನು ಭಯೋತ್ಪಾದಕ ಗುಂಪುಗಳೊಂದಿಗೆ ಸಮೀಕರಿಸಿ ಮಧ್ಯಪ್ರದೇಶದ ಕಟನಿ ಜಿಲ್ಲಾ ಪೊಲೀಸ್ ಅಧೀಕ್ಷಕ ಸುನಿಲ್ ಕುಮಾರ್ ಜೈನ್ ಅವರು ಹೊರಡಿಸಿರುವ ಆದೇಶವು ರಾಜ್ಯದಲ್ಲಿ ವಿವಾದವನ್ನು ಸೃಷ್ಟಿಸಿದೆ.

ಟೀಕೆಯ ಬಳಿಕ ಜೈನ್ ಕ್ಷಮೆಯನ್ನು ಯಾಚಿಸಿದ್ದರೂ,ಅದು ಬರಹ ದೋಷವಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಕಟನಿ ಜಿಲ್ಲೆಗೆ ಮಧ್ಯಪ್ರದೇಶದ ರಾಜ್ಯಪಾಲ ಮಂಗುಭಾಯಿ ಸಿ.ಪಟೇಲ್ ಅವರ ಭೇಟಿಗಾಗಿ ಭದ್ರತಾ ವ್ಯವಸ್ಥೆಗಳ ಕುರಿತು ಡಿ.6ರಂದು ಈ ಆದೇಶವನ್ನು ಹೊರಡಿಸಲಾಗಿತ್ತು.

ಆದೇಶದಲ್ಲಿಯ ಒಟ್ಟು 23 ನಿರ್ದೇಶಗಳ ಪೈಕಿ ಆರನೇ ನಿರ್ದೇಶದಲ್ಲಿ, ‘ಸಿಕ್ಖರು, ಮುಸ್ಲಿಮರು, ಜೆಕೆಎಲ್ಎಫ್, ಉಲ್ಫಾ, ಸಿಮಿ ಮತ್ತು ಎಲ್‌ಟಿಟಿಇ ಮೇಲೆ ನಿಕಟ ನಿಗಾಯಿರಿಸಬೇಕು’ ಎಂದು ಸೂಚಿಸಲಾಗಿತ್ತು.

ಆದೇಶವನ್ನು ಬರೆಯುವಾಗ ತಪ್ಪು ಮಾಡಿದ್ದ ಗುಮಾಸ್ತನ ವಿರುದ್ಧ ಕಠಿಣ ಶಿಸ್ತುಕ್ರಮವನ್ನು ಜರುಗಿಸುವುದಾಗಿ ಜೈನ್ ಗುರುವಾರ ಹೇಳಿದರು. ‘ತಪ್ಪಿನ ಬಗ್ಗೆ ವಿಷಾದಿಸುತ್ತೇನೆ. ಯಾವುದೇ ಸಮುದಾಯದ ಭಾವನೆಗಳನ್ನು ನೋಯಿಸುವ ಉದ್ದೇಶ ನಮ್ಮದಾಗಿರಲಿಲ್ಲ ’ಎಂದರು. ಬುಧವಾರ ಮಧ್ಯಪ್ರದೇಶ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಕೆ.ಮಿಶ್ರಾ ಅವರು ಆದೇಶದ ಪ್ರತಿಯನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದಾಗ ಈ ವಿಷಯ ಬೆಳಕಿಗೆ ಬಂದಿತ್ತು.

ಜೈನ್ ಪೊಲೀಸ್ ಅಧೀಕ್ಷಕರೇ ಅಥವಾ ಬಿಜೆಪಿಯ ವಕ್ತಾರರೇ ಎಂದು ಪ್ರಶ್ನಿಸಿದ್ದ ಮಿಶ್ರಾ,‌ ಈವರೆಗೆ ಬಿಜೆಪಿ ದೇಶದ ರೈತರು ಮತ್ತು ಮುಸ್ಲಿಮರನ್ನು ಭಯೋತ್ಪಾದಕರಂತೆ ನೋಡುತ್ತಿತ್ತು. ಈಗ ರಾಜ್ಯಪಾಲರ ಭೇಟಿಯ ಹಿನ್ನೆಲೆಯಲ್ಲಿ ನಿಮ್ಮ (ಜೈನ್) ನೇತೃತ್ವದಲ್ಲಿನ ಪೊಲೀಸರೂ ಅವರನ್ನು ಭಯೋತ್ಪಾದಕರೆಂದು ಅಧಿಕೃತವಾಗಿ ಪರಿಗಣಿಸುತ್ತಿದ್ದಾರೆ. ಈ ಸರಕಾರವು ಖಂಡಿತವಾಗಿಯೂ ನಿಮ್ಮನ್ನು ಪದ್ಮಶ್ರೀ ಪ್ರಶಸ್ತಿಯೊಂದಿಗೆ ಗೌರವಿಸುತ್ತದೆ ಎಂದು ತನ್ನ ಪೋಸ್ಟ್‌ನಲ್ಲಿ  ಬರೆದಿದ್ದರು.

ರಾಜ್ಯ ಕಾಂಗ್ರೆಸ್ ವಕ್ತಾರ ನರೇಂದ್ರ ಸಲುಜಾ ಅವರೂ ಮ.ಪ್ರದೇಶದ ಬಿಜೆಪಿ ಸರಕಾರವನ್ನು ಟೀಕಿಸಿದ್ದು,ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಸರಕಾರದಡಿ ಸಿಕ್ಖರನ್ನು ಭಯೋತ್ಪಾದಕರೆಂದು ವರ್ಗೀಕರಿಸಲಾಗಿದೆಯೇ? ದೇಶಪ್ರೇಮಿ ಸಮುದಾಯದ ಕುರಿತು ರಾಜ್ಯ ಪೊಲೀಸರ ನಿಲುವು ಅತ್ಯಂತ ದುಃಖದಾಯಕವಾಗಿದೆ. ಸರಕಾರವು ಕಟನಿ ಎಸ್ಪಿ ವಿರುದ್ಧ ಕ್ರಮ ಕೈಗೊಳ್ಳಬೇಕು,ಇಲ್ಲದಿದ್ದರೆ ಈ ನಿಲುವು ಬಿಜೆಪಿ ಸರಕಾರದ್ದೂ ನಂಬಿಕೆ ಆಗಿದೆಯೆಂದು ತಿಳಿಯಬೇಕಾಗುತ್ತದೆ ಎಂದಿದ್ದಾರೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News