×
Ad

ಬೆಳಗಾವಿ ಅಧಿವೇಶನದಲ್ಲಿ ಅಡಿಕೆ ಬೆಳಗಾರರು- ರೈತರ ಸಮಸ್ಯೆ ಪರಿಹಾರಕ್ಕೆ ಆಗ್ರಹ

Update: 2021-12-09 21:48 IST

ಮಂಗಳೂರು : ಬೆಳಗಾವಿಯಲ್ಲಿ ಡಿ.13ರಿಂದ ಜರುಗಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಅಡಕೆ ಬೆಳಗಾರರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ರೈತರ ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹಾರ ಕಂಡು ಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕ ಆಗ್ರಹಿಸಿದೆ.

ಜಿಲ್ಲೆಯಲ್ಲಿ ಈ ಸಾಲಿನಲ್ಲಿ ನಿರಂತರ ಮಳೆಯಿಂದಾಗಿ ರೈತರಿಗಾದ ನಷ್ಟ, ಅಭಿವೃದ್ಧಿಯ ಹೆಸರಿನಲ್ಲಿ ಕೃಷಿ ಭೂಮಿ ಹಾಗೂ ಅರಣ್ಯ ಸಂಪತ್ತಿನ ನಾಶ ತಡೆಯುವುದು, ಹಿಂದಿನ ಸಾಲಿನ ಅತಿವೃಷ್ಠಿ ಪರಿಹಾನ ನೀಡುವಲ್ಲಿ ಸರ್ಕಾರದ ವಿಫಲವಾಗಿರುವುದು ಮೊದಲಾದ 31 ಅಂಶಗಳ ಒತ್ತಾಯ ಪತ್ರವನ್ನು ಜಿಲ್ಲೆಯ ಸಚಿವರು, ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗುವುದು ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇದಕ್ಕೆ ಪೂರಕವಾಗಿ ಸ್ಪಂದಿಸದಿದ್ದಲ್ಲಿ, ಅಧಿವೇಶನದ ಬಳಿಕ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಡುವ ನಿರ್ಧಾರ ಕೈಗೊಳ್ಳಲಾಗಿದೆ. ಬೆಳಗಾವಿ ಅಧಿವೇಶದಲ್ಲಿ ರಾಜ್ಯದ ಜನತೆಯ ಹಿತಾಸಕ್ತಿ ಕಾಪಾಡಲು ಪೂಕರವಾದ ನಿರ್ಣಯ ಕೈಗೊಳ್ಳಲು ರೈತ ಅಜೆಂಡವನ್ನು ರಚಿಸಿ ಅಧಿವೇಶನಕ್ಕೆ ರವಾನಿಸಲು, ಬೆಳಗಾವಿಯ ಮಾರುತಿ ಮಂದಿರ ಸಭಾಂಗಣದಲ್ಲಿ ಡಿ.13ರಂದು ಸಂಯುಕ್ತ ಹೋರಾಟ-ಕರ್ನಾಟಕ ವತಿಯಿಂದ ರೈತ ಅಧಿವೇಶನ ಆಯೋಜಿಸಲಾಗಿದೆ ಎಂದರು.
*ಪ್ರಮುಖ ಬೇಡಿಕೆಗಳು
* ಬಿಳಿ ಗೋಟಡಿಕೆ ಕನಿಷ್ಠ ಆಮದು ಬೆಲೆ ಕೆ.ಜಿ.ಗೆ 350 ರೂ.ಗೆ ಏರಿಸಲು ಕೇಂದ್ರಕ್ಕೆ ಪ್ರಸ್ತಾವನೆ.
*ಅಡಕೆ ಕ್ಯಾನ್ಸರ್‌ಕಾರಕ ಅಲ್ಲ ಎಂದು ಸುಪ್ರೀಂಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಲು ಕೇಂದ್ರಕ್ಕೆ ಒತ್ತಡ.
*ಅಡಕೆ ಅಭಿವೃದ್ಧಿ ಮಂಡಳಿ ಸ್ಥಾಪನೆ ಕುರಿತು ಕೇಂದ್ರ ಸರ್ಕಾರಕ್ಕೆ ಸಮಗ್ರ ವರದಿ ನೀಡುವ ಮಸೂದೆ ಅಂಗೀಕಾರ.
* ಉಡುಪಿ ಕಾಸರಗೋಡು 400 ಕೆವಿ ವಿದ್ಯುತ್ ಮಾರ್ಗ ಯೋಜನೆಗೆ ಅವಕಾಶ ನೀಡಬಾರದು.
* ಅಡಕೆ ಹಳದಿ ಎಲೆ ರೋಗಕ್ಕೆ ಸರ್ಕಾರ ಬಿಡುಗಡೆ ಮಾಡಿರುವ 25 ಕೋಟಿ ರೂ. ಪ್ಯಾಕೇಜ್ ಸಂತ್ರಸ್ತ ರೈತರ ಖಾತೆಗೆ ನೇರ ಬಿಡುಗೆ
* ಭತ್ತದ ಬೆಳೆಗೆ ಕರಾವಳಿ ಪ್ಯಾಕೇಜ್ ಮತ್ತೆ ಆರಂಭಿಸಬೇಕು.
* ಚುನಾವಣೆ ಸಂದರ್ಭ ರೈತರ ಕೋವಿ ಠೇವಣಿ ನಿಯಮ ಹಿಂಪಡೆಯಬೇಕು.
*  ಕಾರ್ಕಳ-ಮಂಗಳೂರು ಹೆದ್ದಾರಿ ಭೂ ಸ್ವಾಧೀನದಲ್ಲಿ ಕೃಷಿ ಭೂಮಿಗೆ ಸಮರ್ಪಕ ಪರಿಹಾರ.
* ಬಂಟ್ವಾಳ ತಾಲೂಕಿಗೆ ಸುಸಜ್ಜಿತ ಎಪಿಎಂಸಿ ಹಾಗೂ ರೈತ ಭವನ.
*ರೈತರಿಗೆ ಹಾಲಿಗೆ ನೀಡುತ್ತಿರುವ ಉತ್ತೇಜಕ ಹಣವನ್ನು ಲೀ.ಗೆ 15ರೂ.ಗೆ ಏರಿಸಬೇಕು.
*ಜಿಲ್ಲೆಯನ್ನು ಕೋಮು ಸೂಕ್ಷ್ಮ ಪ್ರದೇಶ ಎನ್ನುವ ಕುಖ್ಯಾತಿಯಿಂದ ಹೊರತಂದು, ಪೊಲೀಸ್ ವ್ಯವಸ್ಥೆ ಬಲಿಷ್ಠಗೊಳಿಸಿ, ಜನರು ಮುಕ್ತವಾಗಿ ಜೀವನ ನಡೆಸಲು ಅವಕಾಶ ನೀಡುವ ನಿರ್ಣಯ ಕೈಗೊಳ್ಳಬೇಕು.
ಜಿಲ್ಲಾಧ್ಯಕ್ಷ ಓಸ್ವಾಲ್ಡ್ ಪ್ರಕಾಶ್ ಫರ್ನಾಂಡಿಸ್, ಪ್ರಧಾನ ಕಾರ್ಯದರ್ಶಿ ಕೆ.ಪ್ರೇಮನಾಥ ಶೆಟ್ಟಿ ಬಾಳ್ತಿಲ, ಉಪಾಧ್ಯಕ್ಷ ಆಲ್ವಿನ್ ಮಿನೇಜಸ್, ಸಂಘಟನಾ ಕಾರ್ಯದರ್ಶಿ ರೋನಿ ಮೆಂಡೋನ್ಸ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News